ADVERTISEMENT

ಕ್ಷೇತ್ರದ ಅಭಿವೃದ್ಧಿಯೇ ಗುರಿ: ಡಾ. ಶ್ರೀನಿವಾಸ್

​ಪ್ರಜಾವಾಣಿ ವಾರ್ತೆ
Published 30 ಮೇ 2023, 12:26 IST
Last Updated 30 ಮೇ 2023, 12:26 IST
ಕೂಡ್ಲಿಗಿ ತಾಲ್ಲೂಕಿನ ಕೈವಲ್ಯಾಪುರ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರು ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಣೆ ಮಾಡಿದರು
ಕೂಡ್ಲಿಗಿ ತಾಲ್ಲೂಕಿನ ಕೈವಲ್ಯಾಪುರ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರು ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಣೆ ಮಾಡಿದರು    

ಕೂಡ್ಲಿಗಿ: ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲ ಗುರಿ ಎಂದು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಹೇಳಿದರು.

ಮಂಗಳವಾರ ತಾಲ್ಲೂಕಿನ ಕೈವಲ್ಯಾಪುರ ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಅಲಿಸಿ ಅವರು ಮಾತನಾಡಿದರು.

‘ನಾನು ಕ್ಷೇತ್ರದ ಮೂರು ಲಕ್ಷ ಜನರ ಪ್ರತಿನಿಧಿಯಾಗಿದ್ದೇನೆ. ಸರ್ಕಾರದಿಂದ ಬರುವ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಯಾವುದೇ ಜಾತಿ ಪಕ್ಷಕ್ಕೆ ಸೀಮಿತ ಮಾಡದೆ ಎಲ್ಲಾ ವರ್ಗದ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತೇನೆ. ಇದಕ್ಕೆ ಸ್ಥಳೀಯ ಮುಖಂಡರ ಸಹಕಾರ ಅವಶ್ಯವಾಗಿದ್ದು, ಅವರು ನೀಡುವ ಸಲಹೆ ಸೂಚನೆಗಳನ್ನು ಪರಿಗಣಿಸಿ ಸರ್ವತೋಮುಖ ಅಭಿವೃದ್ಧಿ ಕೈಗೊಳ್ಳಲಾಗುವುದು’ ಎಂದರು.

ADVERTISEMENT

‘ಕೈವಲ್ಯಾಪುರ ಗ್ರಾಮದಲ್ಲಿನ ಅನಂತಶಯನ ದೇವಸ್ಥಾನ ಸೇರಿದಂತೆ ಕ್ಷೇತ್ರದಲ್ಲಿನ ಎಲ್ಲಾ ಐತಿಹಾಸಿಕ ದೇವಸ್ಥಾನಗಳನ್ನು ಅವುಗಳ ಮೂಲ ಸ್ವರೂಪದಲ್ಲಿಯೇ ಜಿರ್ಣೋದ್ದಾರ ಮಾಡಲಾಗುವುದು. ಈ ಕಾರ್ಯಕ್ಕೆ ಕಾಲಾವಕಾಶ ಬೇಕಾಗುತ್ತದೆ. ಎಲ್ಲಾ ಗ್ರಾಮಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದ್ದು, ಇವುಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು. ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿನ ಸಮಸ್ಯೆಗಳ ಪಟ್ಟಿ ನೀಡಿದರೆ ಅವುಗಳಿಗೆ ಸಂಬಂಧಿಸಿದ ಇಲಾಖೆಗಳಿಗೆ ಕಳಿಸಿ ಪರಿಹರಿಸಲಾಗುವುದು’ ಎಂದು ಅವರು ತಿಳಿಸಿದರು.

ನಂತರ ಅವರು ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯ ಪುಸ್ತಕ ವಿತರಿಸಿದರು. ಇದಕ್ಕೂ ಮೊದಲು ಅವರು ಗ್ರಾಮದಲ್ಲಿ ಐತಿಹಾಸಿಕ ಅನಂತ ಪದ್ಮಾನಾಭ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.

ಶಿವಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವೀರಮ್ಮ ಹೇಮ್ಲಾ ನಾಯ್ಕ್, ಹುಸೇನ್ ಪೀರ್, ಶಾರದಮ್ಮ, ಮುಖಂಡರಾದ ಡಾ. ಪುಷ್ಪ, ಟಿ.ಜಿ. ಮಲ್ಲಿಕಾಜುನ ಗೌಡ, ಎಸ್. ವೆಂಕಟೇಶ್, ಶಿವಪುರ ರಾಜಶೇಖರ, ಮುಖ್ಯ ಶಿಕ್ಷಕ ಬಿ. ಚಮರಾಜ, ಕೃಷ್ಣಪ್ಪ, ಹನುಮಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.