ADVERTISEMENT

ಅಧಿವೇಶನದಲ್ಲಿ ಮೊದಲ ದಿನವೇ ನಿಲುವಳಿ ಸೂಚನೆ ಮೂಲಕ ಸಮಸ್ಯೆಗಳ ಚರ್ಚೆ: ಅಶೋಕ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 9:51 IST
Last Updated 26 ನವೆಂಬರ್ 2025, 9:51 IST
<div class="paragraphs"><p>ಆರ್. ಅಶೋಕ</p></div>

ಆರ್. ಅಶೋಕ

   

ಹೊಸಪೇಟೆ (ವಿಜಯನಗರ): ರಾಜ್ಯದಲ್ಲಿ ಯಾರು ಮುಖ್ಯಮಂತ್ರಿ ಆಗಿರುತ್ತಾರೆ ಎಂಬುದನ್ನು ತಕ್ಷಣ ಘೋಷಿಸುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ತಾನು ದುರ್ಬಲ ಅಲ್ಲ ಎಂಬುದನ್ನು ಸಾಬೀತುಪಡಿಸಬೇಕು, ಇಲ್ಲವಾದರೆ ಬೆಳಗಾವಿ ಅಧಿವೇಶನ ಸಿಎಂ ಯಾರೆಂಬ ಚರ್ಚೆಯಲ್ಲೇ ವ್ಯರ್ಥವಾಗಿಬಿಡುವ ಅಪಾಯ ಇದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

ವಿಧಾನ ಪರಿಷತ್‌ನ ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಯ ಕುರಿತಂತೆ ಪೂರ್ವಭಾವಿ ಸಭೆ ನಡೆಸಲು ಬುಧವಾರ ಇಲ್ಲಿಗೆ ಬಂದಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರೇ ಮುಂದುವರಿಯುತ್ತಾರೆಯೇ, ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆಯೇ ಅಥವಾ ದಲಿತ ನಾಯಕರೊಬ್ಬರು ಸಿಎಂ ಆಗಲಿದ್ದಾರೆಯೇ ಎಂಬುದನ್ನು ಹೈಕಮಾಂಡ್ ತಕ್ಷಣ ಹೇಳಿ ರಾಜ್ಯದ ಜನರಲ್ಲಿ ನೆಲೆಯೂರಿರುವ ಗೊಂದಲ ಬಗೆಹರಿಸಬೇಕು ಎಂದರು.

ADVERTISEMENT

ಉತ್ತರ ಕರ್ನಾಟಕದ ಸಮಸ್ಯೆಗಳು, ನೀರಾವರಿ ಮತ್ತು ಶಾಲೆ ಮುಚ್ಚುವಿಕೆ ವಿಚಾರವನ್ನು ಈ ಬಾರಿಯ ಅಧಿವೇಶದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಒಟ್ಟಾಗಿ ತೆಗೆದುಕೊಳ್ಳಲಿವೆ. ನಿಲುವಳಿ ಸೂಚನೆ ಮೂಲಕ ಮೊದಲ ದಿನವೇ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಸಲು ಪಕ್ಷ ಈಗಾಗಲೇ ತಯಾರಿ ನಡೆಸಿದೆ. ಎರಡನೇ ದಿನದಿಂದ ಶಾಲೆಗಳ ಬಗ್ಗೆ, ನೀರಾವರಿ ಕುರಿತಂತೆ ಚರ್ಚೆ ನಡೆಸಲಾಗುವುದು. ಈ ಹಿಂದೆ ಕೊನೆಯ ದಿನಗಳಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತಂತೆ ಚರ್ಚೆ ಆರಂಭಿಸಿ ಸರ್ಕಾರ ಹಾರಿಕೆಯ ಉತ್ತರ  ನೀಡುವುದಷ್ಟೇ ಆಗುತ್ತಿತ್ತು. ಈ ಬಾರಿ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ಕಾಂಗ್ರೆಸ್ ಸತ್ತು ಹೋಗಿದೆ: ‘ರಾಜ್ಯದಲ್ಲಿ ಈಗ ಕಾಂಗ್ರೆಸ್ ಸತ್ತೇ ಹೋಗಿದೆ, ಅದರ ಹೆಣ ಹೊರುವ ಕೆಲಸವನ್ನು ಈಗ ಸಿಎಂ ಮಾಡುತ್ತಿದ್ದಾರೆ. ಸಿಎಂ ಬದಲಾವಣೆ ಎಂದರೆ ಹೆಣ ಮುಂದೆ ಹೊರುವುದು ಯಾರು ಎಂಬ ಪ್ರಶ್ನೆ ಮಾತ್ರ. ಸದ್ಯ ತಲೆಗೊಳ್ಳಿ ಹಿಡಿಯುವ ವ್ಯಕ್ತಿಗೆ ಹುಡುಕಾಡುತ್ತಿದ್ದಾರೆ ಅಷ್ಟೇ. ಇಂತಹ ಪಕ್ಷದ ಜತೆಗೆ ಸೇರಿಕೊಂಡು ಸರ್ಕಾರ ರಚಿಸಲು ಆಹ್ವಾನ ಬಂದರೆ ಬಿಜೆಪಿ ಅದನ್ನು ಒಪ್ಪಿಕೊಳ್ಳುವುದಿಲ್ಲ’ ಎಂದು ಅಶೋಕ ಸ್ಪಷ್ಟಪಡಿಸಿದರು.

ಒಕ್ಕಲಿಗೆ ನಾಯಕ ಅಲ್ಲ: ‘ಡಿಕೆಶಿ ಯಾವಾಗ ಒಕ್ಕಲಿಗ ನಾಯಕರಾಗಿದ್ದರು? ಕುಕ್ಕರ್ ಬಾಂಬ್‌ನವರನ್ನು ಅವರು ಬ್ರದರ್ ಎಂದು ಹೇಳಿದವರು. ಅದಿಲ್ಲವಾಗಿದ್ದರೆ ನಮ್ಮನ್ನು ಬ್ರದರ್‌ ಎನ್ನುತ್ತಿದ್ದರು. ಅವರು ಸಾಬರಿಗೆ ಮಾತ್ರ ಬ್ರದರ್ ಹೊರತು ನಮಗಲ್ಲ. ಹೀಗಾಗಿ ಅವರನ್ನು ಒಕ್ಕಲಿಗ ನಾಯಕ ಎಂದು ನಾವು ಒಪ್ಪಿಕೊಳ್ಳುವುದಿಲ್ಲ’ ಎಂದು ಅವರು ಹೇಳಿದರು.

ಪರಿಹಾರ ನೀಡಿ: ತುಂಗಭದ್ರಾ ಅಣೆಕಟ್ಟೆಗೆ ಕ್ರೆಸ್ಟ್‌ಗೇಟ್ ಅಳವಡಿಸದೆ ಈ ಬಾರಿ ರೈತರಿಗೆ ಎರಡನೇ ಬೆಳೆ ಇಲ್ಲವಾಗಿದೆ. ಅವರಿಗೆ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕೆಂಬುದು ಪಕ್ಷದ ಪ್ರಮುಖ ಬೇಡಿಕೆ. ಜತೆಗೆ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ, ಕಬ್ಬು, ಇತರ ವಿಷಯಗಳಲ್ಲಿ ಪಕ್ಷ ರಾಜ್ಯದ 29 ತಾಲ್ಲೂಕುಗಳಲ್ಲಿ ಹೋರಾಟ ನಡೆಸುತ್ತಿದೆ.  ಈ ವಿಚಾರದಲ್ಲಿ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಅಶೋಕ ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.