ADVERTISEMENT

ವಿಜಯನಗರ: 26ರಂದು ಜಿಲ್ಲಾಮಟ್ಟದ ಕಚೇರಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 16:49 IST
Last Updated 18 ಜನವರಿ 2022, 16:49 IST
ಹೊಸಪೇಟೆಯಲ್ಲಿ ಮಂಗಳವಾರ ನಡೆದ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು
ಹೊಸಪೇಟೆಯಲ್ಲಿ ಮಂಗಳವಾರ ನಡೆದ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು   

ಹೊಸಪೇಟೆ (ವಿಜಯನಗರ): ‘ಗಣರಾಜ್ಯೋತ್ಸವದ ದಿನ ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣ ಉದ್ಘಾಟನೆ ಹಾಗೂ ಗುಂಡಾ ಸಸ್ಯ ಉದ್ಯಾನದಲ್ಲಿ ₹32 ಲಕ್ಷದಲ್ಲಿ ಅಭಿವೃದ್ಧಿಪಡಿಸಲಾಗಿರುವ ‘ಅಕ್ವೇರಿಯಂ’ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಉದ್ಘಾಟಿಸುವರು’ ಎಂದು ಜಿಲ್ಲಾಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌ ತಿಳಿಸಿದರು.

ಮಂಗಳವಾರ ನಗರದಲ್ಲಿ ನಡೆದ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 9ಕ್ಕೆ ನಗರದ ಕ್ರೀಡಾಂಗಣದಲ್ಲಿ ಸಚಿವರು ತ್ರಿವರ್ಣ ಧ್ವಜಾರೋಹಣ ನೆರವೇರಿಸುವರು. ಬಳಿಕ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸುವರು. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರನ್ನು ಸನ್ಮಾನಿಸುವರು. ಕಾರ್ಯಕ್ರಮದ ನಂತರ ಸಚಿವರು ಕಚೇರಿ ಸಂಕೀರ್ಣ, ಅಕ್ವೇರಿಯಂ ಉದ್ಘಾಟಿಸುವರು ಎಂದು ಹೇಳಿದರು.

ಸ್ವಾಗತ ಸಮಿತಿ, ಪರೇಡ್ ಸಮಿತಿ, ಸನ್ಮಾನ ಸಮಿತಿ, ಬಂದೋಬಸ್ತ್ ಸಮಿತಿ, ಆರೋಗ್ಯ ಸಮಿತಿ, ಪ್ರಚಾರ ಸಮಿತಿಗಳನ್ನು ರಚಿಸಲಾಗಿದೆ. ಆಯಾ ಸಮಿತಿಯಲ್ಲಿರುವ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಯಾವುದೇ ಲೋಪ ಆಗದಂತೆ ಎಚ್ಚರಿಕೆ ವಹಿಸಬೇಕು. ಕೋವಿಡ್‌ ನಿಯಮಗಳನ್ನು ಅನುಸರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಕ್ರೀಡಾಂಗಣದಲ್ಲಿ ಸ್ವಚ್ಛತೆ, ಕುಡಿಯುವ ನೀರು, ಲಘು ಉಪಹಾರದ ವ್ಯವಸ್ಥೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಎಲ್ಲ ಸರ್ಕಾರಿ ಕಚೇರಿಗಳು, ಪ್ರಮುಖ ವೃತ್ತಗಳಲ್ಲಿ ಜ. 25, 26ರಂದು ವಿದ್ಯುತ್‌ ದೀಪಾಲಂಕಾರ ಮಾಡಬೇಕು. ಪೊಲೀಸ್, ಗೃಹರಕ್ಷಕ ದಳ, ಅರಣ್ಯ ಇಲಾಖೆ, ಎನ್‌ಸಿಸಿ ತುಕಡಿಗಳೊಂದಿಗೆ ಆಶಾ, ಪೌರಕಾರ್ಮಿಕರ ನಡಿಗೆ ನಡೆಯಲಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಮಹೇಶಬಾಬು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅರುಣ ಕೆ., ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.