ಹೊಸಪೇಟೆ (ವಿಜಯನಗರ): ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ರಸ್ತೆಗಳ ಮೇಲಿನ ಗುಂಡಿಗಳನ್ನು ಗುರುತಿಸಿ ಶೀಘ್ರವೇ ಮುಚ್ಚುವ ಮೂಲಕ ಅವಘಡಗಳನ್ನು ತಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಈಚೆಗೆ ರಸ್ತೆಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಮಳೆಯಿಂದಾಗಿ ರಸ್ತೆಗಳ ಮೇಲೆ ನೀರು ನಿಂತು ಗುಂಡಿಗಳು ಕಾಣದೇ ಅಪಘಾತಗಳಾಗುತ್ತಿವೆ ಎಂದರು.
‘ವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಕಾಮಗಾರಿಗಳು ನಡೆಯದೇ ಅನೇಕ ದುರ್ಘಟನೆಗಳು ಸಂಭವಿಸಿವೆ. ಈಗಲಾದರೂ ಎಚ್ಚೆತ್ತು ಅಧಿಕಾರಿಗಳು ರಸ್ತೆಗಳ ನಿರ್ವಹಣೆಗೆ ಕಾರ್ಯೋನ್ಮುಖರಾಗಬೇಕು. ಎನ್‌ಎಚ್‌ಎಐ ಅಧಿಕಾರಿಗಳ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಟ್ಟು 6 ಕಡೆ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ ಈಗಾಗಲೇ 5 ಬ್ಲಾಕ್ ಸ್ಪಾಟ್‌ಗಳನ್ನು ಸರಿಪಡಿಸಲಾಗಿದೆ ಎಂದು ವರದಿ ನೀಡಲಾಗಿದೆ. ಉಳಿದೊಂದು ಕಡೆಯಲ್ಲಿ ಸರಿಪಡಿಸುವ ಕೆಲಸವೂ ಬೇಗನೆ ಆಗಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
‘ಬಿಎಂಎಂ ಕಂಪನಿ ಮುಂದಿನ ಡಣಾಪುರ ಕ್ರಾಸ್ ಬಳಿಯ ವಿದ್ಯುತ್ ದೀಪಗಳಿಲ್ಲದೆ ಕತ್ತಲು ಆವರಿಸಿದೆ. ಅದೇ ರಸ್ತೆಯಲ್ಲಿ ಬರುವ ಆರು ಹಳ್ಳಿಗಳಿಗೆ ಸಂಪರ್ಕಿಸುವ ರಸ್ತೆ ಮಾರ್ಗದಲ್ಲಿ ವಿದ್ಯುತ್ ದೀಪ ಇಲ್ಲದೇ ರಸ್ತೆ ಸಂಚಾರಕ್ಕೆ ತೊಂದರೆ ಆಗಿದೆ, ಕೂಡಲೇ ವಿದ್ಯುತ್ ದೀಪಗಳನ್ನು ಅಳವಡಿಸಲು ಕ್ರಮವಹಿಸಬೇಕು. ಅರಸೀಕೆರೆಯಿಂದ ಮತ್ತಿಹಳ್ಳಿಗೆ ಹೋಗುವ ರಸ್ತೆ ಮಾರ್ಗದಲ್ಲಿ ಎರಡು ಕಿಲೋಮೀಟರ್‌ನಷ್ಟು ರಸ್ತೆ ಸಂಪೂರ್ಣ ಹದಗೆಟ್ಟಿದೆ, ಶೀಘ್ರ ಸರಿಪಡಿಸಬೇಕು. ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಸೇವಾ ರಸ್ತೆಗಳಲ್ಲಿ ಸೂಕ್ತ ನಾಮಫಲಕಗಳು, ರಸ್ತೆ ಅಡೆತಡೆಗಳನ್ನು ಅಳವಡಿಸಬೇಕು’ ಎಂದರು.
ಎಸ್‌ಪಿ ಶ್ರೀಹರಿಬಾಬು ಬಿ.ಎಲ್.ಮಾತನಾಡಿ, ನಗರದ ಪುನೀತ್ ರಾಜಕುಮಾರ ವೃತ್ತದ ಬಳಿ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕಿದೆ, ನಗರ ಹೊರವಲಯದ ಚಿತ್ರದುರ್ಗ ಹೆದ್ದಾರಿಯ ಸುರಂಗ ಮಾರ್ಗದಲ್ಲಿ ಸಿ.ಸಿ.ಟಿ.ವಿ.ಕ್ಯಾಮೆರಾ ಆಳವಡಿಸಬೇಕು ಎಂದರು.
ಸಭೆಯಲ್ಲಿ ಸಾರಿಗೆ ಇಲಾಖೆ, ಪಿಡಬ್ಲೂಡಿ, ಎನ್‌ಎಚ್‌ಎಐ ಸೇರಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ರಸ್ತೆ ಗುಂಡಿಯಲ್ಲಿ ತುಂಬುವ ಮಳೆ ನೀರು ಆಳ ಗೊತ್ತಾಗದೆ ಸಂಭವಿಸುತ್ತಿವೆ ಅಪಘಾತ ಹೆದ್ದಾರಿಗಳ ಪೈಕಿ ಒಂದು ಕಡೆ ಬ್ಲಾಕ್‌ಸ್ಪಾಟ್
‘ರಸ್ತೆಗೆ ಅಡ್ಡಲಾದ ಕೊಂಬೆ ಕತ್ತರಿಸಿ’ ‘ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರಸ್ತೆಗೆ ಅಡ್ಡಲಾಗಿರುವ ಮರಗಳ ಕೊಂಬೆಗಳನ್ನು ತೆರವುಗೊಳಿಸಬೇಕು. ಹೊಸಪೇಟೆ ಹರಪನಹಳ್ಳಿ ಕೂಡ್ಲಿಗಿ ಹಾಗೂ ಹಗರಿಬೊಮ್ಮನಹಳ್ಳಿಯಲ್ಲಿ ಆಟೊನಿಲ್ದಾಣ ನಿರ್ಮಾಣ ಮಾಡಲು ಸಂಬಂಬಂಧಿಸಿದ ಉಪವಿಭಾಗದ ಅಧಿಕಾರಿಗಳು ಮತ್ತು ಟ್ರಾಫಿಕ್ ಪೊಲೀಸರು ಜಂಟಿಯಾಗಿ ಸ್ಥಳ ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಹೊಸಪೇಟೆ ನಗರದಲ್ಲಿ ಒಟ್ಟು 20 ಆಟೋ ಸ್ಟಾಂಡ್‌ಗಳನ್ನು ಗುರುತಿಸಿದ್ದು ಈಗಾಗಲೇ 10 ಸ್ಟಾಂಡ್‌ಗಳನ್ನು ಹಂತಗಳಲ್ಲಿ ನಿರ್ಮಿಸುವ ಕೆಲಸ ಆರಂಭವಾಗಿದೆ ಪ್ರತಿ ಸ್ಟಾಂಡ್‌ನಲ್ಲಿ ಕನಿಷ್ಠ 10-15 ಆಟೋಗಳನ್ನು ನಿಲ್ಲಿಸಲು ಅನುಕೂಲ ಕಲ್ಪಿಸಬೇಕಿದೆ’ ಎಂದು ಎಸ್‌ಪಿ ಶ್ರೀಹರಿಬಾಬು ಬಿ.ಎಲ್.ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.