ADVERTISEMENT

ದಶಕವಾಯ್ತು... ನೀರು ಬರಲಿಲ್ಲ!

230 ಕಿ.ಮೀ ದೂರದ ಪಾವಗಡಕ್ಕೆ ಹರಿದ ತುಂಗಭದ್ರೆ | ಕೂಡ್ಲಿಗಿಯ ವಿವಿಧ ಗ್ರಾಮಗಳಿಗೆ ಸದ್ಯ 3 ದಿನಕ್ಕೊಮ್ಮೆ ನೀರು

ಎ.ಎಂ.ಸೋಮಶೇಖರಯ್ಯ
Published 23 ಜುಲೈ 2025, 23:30 IST
Last Updated 23 ಜುಲೈ 2025, 23:30 IST
ಕೂಡ್ಲಿಗಿ ತಾಲ್ಲೂಕಿನ ಶಿವಪುರ ಬಳಿ ಇರುವ ಪಾವಗಡ ಕುಡಿಯುವ ನೀರಿನ ಯೋಜನೆಯ ಶುದ್ಧೀಕರಣ ಘಟಕ
ಕೂಡ್ಲಿಗಿ ತಾಲ್ಲೂಕಿನ ಶಿವಪುರ ಬಳಿ ಇರುವ ಪಾವಗಡ ಕುಡಿಯುವ ನೀರಿನ ಯೋಜನೆಯ ಶುದ್ಧೀಕರಣ ಘಟಕ   

ಕೂಡ್ಲಿಗಿ: ಸಮೀಪದ ತುಂಗಭದ್ರಾ ಜಲಾಶಯದಿಂದ ತಾಲ್ಲೂಕಿನ ವಿವಿಧ ಗ್ರಾಮಗಳ ಜನರಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಪ್ರಾರಂಭವಾಗಿ ಹತ್ತು ವರ್ಷಗಳೇ ಕಳೆದಿವೆ. ಆದರೆ, ನೀರು ಸಿಗುವ ಕನಸು ಇನ್ನೂ ಸಾಕಾರಗೊಂಡಿಲ್ಲ. 

‘ತಾಲ್ಲೂಕಿಗೆ 230 ಕಿ.ಮೀ ದೂರದ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಗ್ರಾಮಗಳಿಗೆ ತುಂಗಭದ್ರಾ ಜಲಾಶಯದಿಂದ ನೀರು ಪೂರೈಕೆ ಆಗುತ್ತಿದೆ. ಆದರೆ, ಕೂಗಳತೆ ದೂರದಲ್ಲಿರುವ ನಮಗೆ ಏಕೆ ನೀರು ಸಿಗುತ್ತಿಲ್ಲ’ ಎಂಬ ಪ್ರಶ್ನೆ ನಿವಾಸಿಗಳನ್ನು ಕಾಡುತ್ತಿದೆ. 

‘ಉಜ್ಜನಿ, ಇತರೆ 71 ಗ್ರಾಮಗಳಿಗೆ ನೀರು ಪೂರೈಸುವ ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿದೆ. ಯೋಜನೆ ಜಾರಿ ವಿಳಂಬವಾಗಲು ಇದೇ ಕಾರಣ. ಎರಡು ತಿಂಗಳೊಳಗೆ ಕಾಮಗಾರಿ ಕೊನೆಗೊಂಡು ನೀರು ಪೂರೈಸುವ ವಿಶ್ವಾಸ ಇದೆ’ ಎಂದು ಶಾಸಕ ಡಾ.ಎನ್‌.ಟಿ.ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.‌

ADVERTISEMENT

‘ಅಖಂಡ ಕೂಡ್ಲಿಗಿ ತಾಲ್ಲೂಕಿನ 216 ಹಳ್ಳಿಗಳಿಗೆ ಶುದ್ಧ ನೀರು ಪೂರೈಸುವ ಯೋಜನೆ ರೂಪಿಸಲಾಗಿದೆ.  ಪಾವಗಡ ನೀರುಪೂರೈಕೆ ಯೋಜನೆಯಲ್ಲಿ 145 ಗ್ರಾಮಗಳಲ್ಲಿ 213 ಮೇಲ್ಮಟ್ಟದ ಟ್ಯಾಂಕ್‌ಗಳಿದ್ದು, 180 ಟ್ಯಾಂಕ್‌ಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. 50 ಟ್ಯಾಂಕ್‌ಗಳಿಗೆ ಪ್ರಾಯೋಗಿಕವಾಗಿ ನೀರು ಏರಿಸಲಾಗುತ್ತಿದೆ. ಜೆಜೆಎಂ ಯೋಜನೆಯಲ್ಲಿ 77,340 ಮನೆಗಳಿಗೆ ನಳ ಸಂಪರ್ಕದ ಗುರಿ ಇದ್ದು, 57,611 ನಳ ಸಂಪರ್ಕ ಕಲ್ಪಿಸಲಾಗಿದೆ’ ಎಂಬುದು ಅಧಿಕಾರಿಗಳ ವಿವರಣೆ. 

ಜಲಾಶಯದಿಂದಲೇ ನೀರು ಪೂರೈಕೆಯ ನಿರೀಕ್ಷೆಯಲ್ಲಿರುವ, ಕೂಡ್ಲಿಗಿ ಪಟ್ಟಣ, ಗ್ರಾಮಗಳಿಗೆ ಸದ್ಯ ತುಂಗಭದ್ರಾ ನದಿಯ ಬನ್ನಿಗೋಳ ಜಾಕ್ವೆಲ್‌ನಿಂದ ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಆಗುತ್ತಿದೆ.

ಆದರೆ, ನೀರು ಪೂರೈಕೆ ಯೋಜನೆ ಪೂರ್ಣಗೊಳ್ಳದಿರುವುದಕ್ಕೆ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಪಾವಗಡಕ್ಕೆ ನೀರು ಹೋಗುತ್ತಿದೆ, ತಾಲ್ಲೂಕಿಗೆ ಏಕೆ ಸಿಗುತ್ತಿಲ್ಲ ಎಂಬುದು ನಿವಾಸಿಗಳ ಪ್ರಶ್ನೆ.

ಉಜ್ಜಿನಿ ಭಾಗದಲ್ಲಿ ಪೈಪ್‌ಲೈನ್ ಕಾಮಗಾರಿ ಬಾಕಿ ಇದುವೇ ಇಡೀ ಯೋಜನೆ ವಿಳಂಬಕ್ಕೆ ಕಾರಣ ಎರಡು ತಿಂಗಳಲ್ಲಿ ನೀರು ಲಭಿಸುವ ಸಾಧ್ಯತೆ

ಉಜ್ಜನಿ ಹಾಗೂ ಇತರೆ ಗ್ರಾಮಗಳಿಗೆ ಪೈಪ್ ಲೈನ್ ಸಂಪರ್ಕ ಕಾರ್ಯ ಪ್ರಗತಿಯಲ್ಲಿದೆ. ಕೆರೆ ತುಂಬಿಸುವ ಕುಡಿಯುವ ನೀರು ಯೋಜನೆಗೆ ಸಂಯೋಜನೆ ಕಾರ್ಯ ನಡೆಯಲಿದೆ.
ಡಾ.ಎನ್‌.ಟಿ.ಶ್ರೀನಿವಾಸ್‌ ಶಾಸಕ ಕೂಡ್ಲಿಗಿ
ಪಾವಗಡ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ಪೂರ್ಣಗೊಂಡಿದೆ. ಸಣ್ಣ ಪುಟ್ಟ ಕೆಲಸಗಳು ಬಾಕಿ ಉಳಿದಿದ್ದು ಅವುಗಳು ಶೀಘ್ರವಾಗಿ ಮುಗಿಯಲಿವೆ. ಪ್ರ
ಸನ್ನ ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ. ಕೂಡ್ಲಿಗಿ

₹ 260 ಕೋಟಿ ವೆಚ್ಚದ ಯೋಜನೆ ಬಳಿಕ ₹2529 ಕೋಟಿಗೆ ವಿಸ್ತರಣೆ

ಕೂಡ್ಲಿಗಿ ಕ್ಷೇತ್ರದ ಶಾಸಕರಾಗಿದ್ದ ಬಿ.ನಾಗೇಂದ್ರ ಅವರು ₹260 ಕೋಟಿ ವೆಚ್ಚದಲ್ಲಿ 217 ಹಳ್ಳಿಗಳಿಗೆ ತುಂಗಭದ್ರಾ ಜಲಾಶಯ ಹಿನ್ನೀರಿನಿಂದ ನೀರು ಸರಬರಾಜು ಮಾಡುವ ಯೋಜನೆ ರೂಪಿಸಿದ್ದರು. ಆದರೆ ಈ ಯೋಜನೆಯ ಸ್ವರೂಪ ಬದಲಾಯಿತು.  2014ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ವಿಜಯನಗರ ಜಿಲ್ಲೆ ಹೊಸಪೇಟೆ ಕೂಡ್ಲಿಗಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಚಳ್ಳಕೆರೆ ಚಿತ್ರದುರ್ಗ ತಾಲ್ಲೂಕಿನ ಕೆಲ ಗ್ರಾಮಗಳು ಸೇರಿ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿಗೆ ತುಂಗಭದ್ರಾ ಜಲಾಶಯ ಹಿನ್ನೀರಿನಿಂದ ನೀರು ಸರಬರಾಜು ಮಾಡಲು ₹2529 ಕೋಟಿ ವೆಚ್ಚದ ಪಾವಗಡ ನೀರು ಕುಡಿಯುವ ನೀರು ಹೆಸರಿನಲ್ಲಿ ಯೋಜನೆ ರೂಪಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.