ADVERTISEMENT

ವಿಜಯನಗರ ಜಿಲ್ಲೆಯಲ್ಲಿ ವ್ಯಾಪಕವಾಗಿ ಸುರಿದ ವರುಣ; ಹೊಸಪೇಟೆಯಲ್ಲಿ 8.6 ಸೆಂ.ಮೀ.ಮಳೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 9:06 IST
Last Updated 3 ಜೂನ್ 2024, 9:06 IST
   

ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಭಾನುವಾರ ರಾತ್ರಿ ಉತ್ತಮ ಮಳೆ ಸುರಿಯಿತು. ಹೊಸಪೇಟೆ ಪ್ರವಾಸಿ ಮಂದಿರದ ಬಳಿ 8.64 ಸೆಂ.ಮೀ. ಮಳೆಯಾಗಿದೆ.

ಗುಡುಗು, ಸಿಡಿಲಿನೊಂದಿಗೆ ರಾತ್ರಿ 1 ಗಂಟೆ ಸುಮಾರಿಗೆ ಮಳೆ ಆರಂಭವಾಯಿತು. ಮಳೆಯ ಬಿರುಸು ಸಾಮಾನ್ಯವಾಗಿತ್ತು. ಹೊಸಪೇಟೆ ನಗರದಲ್ಲಿ ಸುಮಾರು ಮೂರು ಗಂಟೆ ಸಾಧಾರಣ ಮಳೆ ಸುರಿಯಿತು.

ನಗರದ 18ನೇ ವಾರ್ಡ್‌ನಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿದೆ, ನೀಲಮ್ಮ ಚಿದಾನಂದಪ್ಪ ಎಂಬುವವರು ತಮ್ಮ ಮನೆಯೊಳಗೆ ಸೇರಿದ್ದ ಮಳೆ ನೀರನ್ನು ಹೊರಗೆ ಹಾಕುತ್ತಿದ್ದುದು ಕಾಣಿಸಿತು. ಇಂದಿರಾ ನಗರ ಪ್ರದೇಶದಲ್ಲಿ ಸಹ ಹಲವು ಮನೆಗಳಿಗೆ ನೀರು ನುಗ್ಗಿ ಜನರು ನಿದ್ದೆಗೆಡುವಂತಾಯಿತು.

ADVERTISEMENT

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಂಪಸಾಗರದಲ್ಲಿ 6.04 ಸೆಂ.ಮೀ.ಮಳೆಯಾಗಿದೆ.

ತುಂಗಭದ್ರಾ ಜಲಾಶಯಕ್ಕೆ ಒಳಹರಿವು: ತುಂಗಭದ್ರಾ ಜಲಾಶಯಕ್ಕೆ ಸೋಮವಾರ 710 ಕ್ಯುಸೆಕ್ ಒಳಹರಿವು ದಾಖಲಾಗಿದೆ.

ಸುಮಾರು ನಾಲ್ಕು ತಿಂಗಳಿಂದ ಒಳಹರಿವು ಸಂಪೂರ್ಣ ಬಂದ್ ಆಗಿತ್ತು. ಮಲೆನಾಡು ಮತ್ತು ಜಲಾನಯನ ಪ್ರದೇಶಗಳಲ್ಲಿ ಮಳೆ ಸುರಿಯುತ್ರಿರುವುದರಿಂದ ಎರಡು ದಿನದಿಂದ ಜಲಾಶಯಕ್ಕೆ ಒಳಹರಿವು ಆರಂಭವಾಗಿದೆ. ಮೊನ್ನೆ 360 ಕ್ಯೂಸೆಕ್ ಮತ್ತು ನಿನ್ನೆ 410 ಕ್ಯೂಸೆಕ್ ಒಳಹರಿವು ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.