ಹೊಸಪೇಟೆ: ‘ದೇಶದಲ್ಲಿ ಐವತ್ತು ವರ್ಷದ ಹಿಂದೆಯೇ ಜಲಮಾಲಿನ್ಯದ ಬಗ್ಗೆ ಮೊದಲು ಗಮನ ಹರಿಸಿ ಕಾಯ್ದೆ ರೂಪಿಸಿದವರು ಅಂದಿನ ಪ್ರಧಾನಿ ಇಂದಿರಾ ಗಾಂಧಿ. ಅವರ ದೂರದೃಷ್ಟಿಯಿಂದಾಗಿಯೇ ದೇಶದಲ್ಲಿಂದು ಪರಿಸರ ಸಂರಕ್ಷಣೆಗೆ ಹಲವು ಕಾಯ್ದೆಗಳು ರೂಪುಗೊಂಡಿವೆ’ ಎಂದು ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ ಖಂಡ್ರೆ ಹೇಳಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ 50 ವರ್ಷ ತುಂಬಿದ ಪ್ರಯುಕ್ತ ಶುಕ್ರವಾರ ಇಲ್ಲಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಮಟ್ಟದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಇಂದಿರಾ ಗಾಂಧಿ ಅವರ ಪ್ರಯತ್ನದ ಫಲವನ್ನು ನಾವು ಇಂದು ಅನುಭವಿಸುತ್ತಿದ್ದೇವೆ’ ಎಂದರು.
ಮರ ಬೆಳೆಸಿ: ‘ಊರಿಗೊಂದು ಕೆರೆ, ಮನೆಗೊಂದು ಮರ ಎಂಬ ಪರಿಕಲ್ಪನೆಯಲ್ಲಿ ಪ್ರತಿಯೊಬ್ಬರು ಮನೆಗಳ ಮುಂದೆ ಮರ ಬೆಳೆಸಲು ನೀರು ಹಾಕಿ ಪೋಷಣೆ ಮಾಡುವ ಸಂಕಲ್ಪ ಮಾಡಬೇಕಿದೆ. ದೀಪಾವಳಿ ಹಬ್ಬದಲ್ಲಿ ಕಡ್ಡಾಯವಾಗಿ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಬಳಸುವ ಮೂಲಕ ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು’ ಎಂದು ಕೇಳಿಕೊಂಡರು.
ಪರಿಸರ ಸಂರಕ್ಷಣೆಗೆ ಗಣನೀಯ ಕೊಡುಗೆ ನೀಡಿದ ಕೊಪ್ಪಳ ಜಿಲ್ಲೆಯ ವೈದ್ಯ ಶಿವಕುಮಾರ ಮಾಲಿಪಾಟೀಲ್, ಯುವರಾಜ ಬಡಿಗೇರ ಹಾಗೂ ಪಾರ್ವತಮ್ಮ ಬಿ. ಅವರು ಇಂದಿರಾ ಪ್ರಿಯದರ್ಶಿನಿ ಗೌರವಕ್ಕೆ ಭಾಜನರಾಗಿದ್ದಾರೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ‘ಮಾಲಿನ್ಯ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಜಂಟಿ ಸಹಭಾಗಿತ್ವದಲ್ಲಿ ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಸುವರ್ಣ ಮಹೋತ್ಸವದ ಮೂಲಕ ಜನಜಾಗೃತಿ ಮೂಡಿಸಲು 31 ಜಿಲ್ಲೆಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.
‘ವಿಜಯನಗರ ಜಿಲ್ಲೆಯಲ್ಲಿ 156 ಉದ್ಯಮಗಳು, ಕೊಪ್ಪಳ ಜಿಲ್ಲೆಯಲ್ಲಿ 430 ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ನಿಯಮಿತವಾಗಿ ತ್ಯಾಜ್ಯ ನಿರ್ವಹಣೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಜಲ ಮಾಲಿನ್ಯ ಮತ್ತು ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.
ಸಂಸದರಾದ ಕೆ.ರಾಜಶೇಖರ ಹಿಟ್ನಾಳ, ಇ.ತುಕಾರಾಂ, ಶಾಸಕರಾದ ಎಚ್.ಆರ್. ಗವಿಯಪ್ಪ, ಡಾ.ಎನ್.ಟಿ.ಶ್ರೀನಿವಾಸ್, ಎಲ್.ಕೃಷ್ಣನಾಯ್ಕ್, ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಶ್ರೀನಿವಾಸ ಗುಪ್ತಾ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಎಸ್‌ಪಿ ಎಸ್. ಜಾಹ್ನವಿ, ಜಿಲ್ಲಾ ಪಂಚಾಯಿತಿ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಷಾ, ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯ ಕಾರ್ಯದರ್ಶಿ ಎಸ್.ಎಸ್.ಲಿಂಗರಾಜ, ವಿಜಯನಗರದ ಹಿರಿಯ ಪರಿಸರ ಅಧಿಕಾರಿ ಬಿ.ಎಸ್.ಮುರಳೀಧರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಪ್ಪಳದ ಪರಿಸರ ಅಧಿಕಾರಿ ಹರಿಶಂಕರ್.ವೈ.ಎಸ್ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜಯನಗರದ ಪರಿಸರ ಅಧಿಕಾರಿ ಮೀನಾಕ್ಷಿ ಎಚ್.ಎ. ಪಾಲ್ಗೊಂಡಿದ್ದರು.
ಎರಡೂ ಜಿಲ್ಲೆಗಳ ತಲಾ ಮೂವರಿಗೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ಪ್ರದಾನ ಸಾರ್ವಜನಿಕರಿಂದ ಸಿಗದ ಸ್ಪಂದನೆ, ಶಾಲಾ ಮಕ್ಕಳೇ ಗತಿ ಪ್ರತಿ ಹಂತದಲ್ಲಿ ಇಂದಿರಾ ವೈಭವೀಕರಣದ ಪ್ರಯತ್ನ
ಪರಿಸರಕ್ಕೆ ಸಂಬಂಧಿಸಿದ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಮೂಲಕ ವನ್ಯಜೀವಿ ಸಂರಕ್ಷಣೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ ಮೊದಲ ಸ್ಥಾನದಲ್ಲಿದೆಈಶ್ವರ ಖಂಡ್ರೆ ಅರಣ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.