ಹೊಸಪೇಟೆ (ವಿಜಯನಗರ): ನಕಲಿ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿ, ಅಂಗವಿಕಲ ಕೋಟಾದ ಮೀಸಲಾತಿ ಅಡಿ ಸರ್ಕಾರಿ ವೈದ್ಯಕೀಯ ಸೀಟು ಪಡೆಯಲು ಯತ್ನಿಸಿದ್ದವರ ಜಾಲ ವಿಜಯನಗರ ಜಿಲ್ಲೆಯಲ್ಲಿ ವ್ಯಾಪಿಸಿದ್ದು, ಹೊಸ ಜಿಲ್ಲೆಯ ವೈದ್ಯಕೀಯ ಕ್ಷೇತ್ರ ಇನ್ನೂ ಸುಸ್ಥಿತಿಗೆ ಬರುತ್ತಿರುವಂತೆಯೇ ವಿವಾದ ಅಂಟಿಕೊಂಡಿದೆ.
20 ಮಂದಿ ಅಭ್ಯರ್ಥಿಗಳು ನಕಲಿ ಪ್ರಮಾಣಪತ್ರ ಮಾಡಿಸಿಕೊಂಡು ಬಂದಿದ್ದು ಬೆಂಗಳೂರಿನಲ್ಲಿ, ಅದರ ಆಧಾರದಲ್ಲಿ ಯುಡಿಐಡಿಗಳನ್ನು (ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿ) ನೀಡಿದ್ದು ಮಾತ್ರ ಹಗರಿಬೊಮ್ಮನಹಳ್ಳಿ ಮತ್ತು ಹೊಸಪೇಟೆಗಳಲ್ಲಿ ಎಂಬುದು ಜಿಲ್ಲೆಯ ವೈದ್ಯಕೀಯ ಆಡಳಿತದ ಸಮಜಾಯಿಷಿ. ಆದರೆ ಇದರ ಬೇರು ಇನ್ನಷ್ಟು ಆಳಕ್ಕೆ ಇಳಿದಿರುವುದು ಸ್ಪಷ್ಟವಾಗಿದ್ದು, ಬೆಂಗಳೂರಿನ ಮಲ್ಲೇಶ್ವರ ಪೊಲೀಸರು ಪಾತಾಳಗರಡಿ ಹಾಕಿ ಜಾಲವನ್ನು ಭೇದಿಸುವ ಕೆಲಸ ಆರಂಭಿಸಿದ್ದಾರೆ.
ಇಲ್ಲೂ, ಅಲ್ಲೂ ಆತನೇ: ಹೊಸಪೇಟೆ 25ನೇ ವಾರ್ಡ್ ಈಶ್ವರ ನಗರದ ನಿವಾಸಿ ಉಮೇಶ್ ನಾಗಪ್ಪ ಚೌಧರಿ ಜುಲೈ 9ರವರೆಗೂ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದವರು. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಅವರು ನಕಲಿ ವೈದ್ಯಕೀಯು ಪ್ರಮಾಣಪತ್ರ ಮಾನ್ಯ ಮಾಡಿ ಏಳು ಮಂದಿಗೆ ಯುಡಿ ಐಡಿ ನೀಡಿದ್ದರು ಎಂದು ಹೇಳಲಾಗಿದೆ. ಜುಲೈ 9ರಂದು ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಗೆ ವರ್ಗಾವಣೆಗೊಂಡಿದ್ದ ಅವರು ಅದೇ ದಿನ ಅಲ್ಲಿ 13 ಮಂದಿಗೆ ಯುಡಿ ಐಡಿ ನೀಡಿದ್ದರು ಎಂದೂ ಹೇಳಲಾಗುತ್ತಿದೆ. ಇದೆಲ್ಲ ಹೇಗೆ ನಡೆಯಿತು? ಈ ಎರಡೂ ಆಸ್ಪತ್ರೆಗಳ ಆಡಳಿತ ವೈದ್ಯಾಧಿಕಾರಿಗಳು ‘ಕಣ್ಣುಮುಚ್ಚಿ’ ಯುಡಿ ಐಡಿ ನೀಡಿಬಿಟ್ಟರೇ? ಅಲ್ಲಿ ಎಷ್ಟು ಕಾಂಚಾಣ ಕುಣಿದಾಡಿದೆ ಎಂಬ ಪ್ರಶ್ನೆ ವ್ಯಾಪಕವಾಗಿ ಕೇಳುವಂತಾಗಿದೆ.
ತಜ್ಞ ವೈದ್ಯರಿಲ್ಲದಿದ್ದರೂ ಯುಡಿ ಐಡಿ ಸೃಷ್ಟಿ: ಅಭ್ಯರ್ಥಿಗಳು ಮಾಡಿಕೊಂಡು ಬಂದ ವೈದ್ಯಕೀಯ ಪ್ರಮಾಣಪತ್ರ ನಕಲಿ, ಅದನ್ನು ಬಳಸಿಕೊಂಡು ಸಿದ್ಧಪಡಿಸಿದ ಯುಡಿ ಐಡಿ ಸಹ ನಕಲಿ ಎಂಬುದು ಹಗರಿಬೊಮ್ಮನಹಳ್ಳಿಯ 13 ಪ್ರಕರಣಗಳಲ್ಲಿ ಸ್ಪಷ್ಟವಾಗಿದೆ. ಏಕೆಂದರೆ ಅಲ್ಲಿ ತಜ್ಞ ಇಎನ್‌ಟಿ ವೈದ್ಯರಾಗಲಿ, ವೈದ್ಯಕೀಯ ಅಧಿಕಾರಿಗಳಾಗಲೀ ಇಲ್ಲ. ಕೇಸ್ ವರ್ಕರ್ ತಾನೇ ಯುಡಿ ಐಡಿ ಸೃಷ್ಟಿಸಿ ಕೊಟ್ಟಿರುವುದು ಗೊತ್ತಾಗಿದೆ. ಆ ಕೇಸ್ ವರ್ಕರ್ ಸದ್ಯ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
ಹುಡುಕಾಟ: ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಉಮೇಶ್‌ನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಹಗರಿಬೊಮ್ಮನಹಳ್ಳಿಯ ಕೇಸ್ ವರ್ಕರ್ ಅಶೋಕ್‌ಗಾಗಿ ಹುಡುಕಾಟ ನಡೆಯುತ್ತಿದೆ. ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಲ್.ಆರ್.ಶಂಕರ್ ನಾಯ್ಕ್ ‘ಪ್ರಜಾವಾಣಿ’ಗೆ ತಿಳಿಸಿದರು.
ಹಿನ್ನೆಲೆ: 21 ಅಭ್ಯರ್ಥಿಗಳು ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಲು ಸಹಕರಿಸಿದ್ದ ನಾಲ್ವರ ವಿರುದ್ಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರ ನಿರ್ದೇಶನದಂತೆ ಮುಖ್ಯ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ್ ಅವರು ಮಲ್ಲೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು, ಮೊದಲ ಹಂತದ ಕಾರ್ಯಾಚರಣೆಯಲ್ಲಿ ಬೆಂಗಳೂರಿನ ನಂದಿನಿ ಲೇಔಟ್‌ನ ನಿವಾಸಿ, ಶಿಕ್ಷಕ ಭರಮಪ್ಪ, ಹೊಸಪೇಟೆಯ ಉಮೇಶ್ ಚೌಧರಿ ಹಾಗೂ ಕೊಪ್ಪಳ ಜಿಲ್ಲೆ ಕುಕನೂರು ತಾಲ್ಲೂಕಿನ ಮಂಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯಕ ಸುಧಾಕರ್ ಅವರನ್ನು ಬಂಧಿಸಿದ್ದಾರೆ.
21 ಅಭ್ಯರ್ಥಿಗಳು ಶ್ರವಣ ದೋಷವಿದೆ ಎಂದು ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿದ್ದರು. ಈ ಪೈಕಿ, ಹೆಚ್ಚಿನವರು ಯುಡಿ ಐಡಿ ಪಡೆಯಲು ಇತ್ತೀಚೆಗೆ ಪಡೆದ ವೈದ್ಯಕೀಯ ಪ್ರಮಾಣಪತ್ರಗಳನ್ನು ಹಾಜರುಪಡಿಸಿದ್ದರು. ಪ್ರಮಾಣ ಪತ್ರಗಳ ಪರಿಶೀಲನೆಯ ವೇಳೆ ಅಭ್ಯರ್ಥಿಗಳು ನಕಲಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂಬುದು ಗೊತ್ತಾಗಿತ್ತು.
ಪ್ರಕರಣ ತನಿಖೆಯ ಹಂತದಲ್ಲಿದೆ ಡಿಎಚ್‌ಒ ಅವರು ಈಗಾಗಲೇ ವರದಿ ಸಲ್ಲಿಸಿದ್ದಾರೆ. ಜಿಲ್ಲಾಡಳಿತ ಇಡೀ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆಕವಿತಾ ಎಸ್.ಮನ್ನಿಕೇರಿ ಜಿಲ್ಲಾಧಿಕಾರಿ
ಆಡಳಿತಾಧಿಕಾರಿಗಳಿಗೆ ಕುತ್ತು?
ಯುಡಿ ಐಡಿ ನೀಡುವ ವಿಚಾರದಲ್ಲಿ ಒಟಿಪಿ ಬರುವುದು ಸಹಿ ಮಾಡಿ ವಿತರಿಸುವುದು ಸಹಿತ ಎಲ್ಲ ಪ್ರಕ್ರಿಯೆಗಳೂ ಆಸ್ಪತ್ರೆಯ ಅಡಳಿತಾಧಿಕಾರಿಗಳ ಕೆಲಸವಾಗಿರುತ್ತದೆ. ಡಿಎಚ್‌ಒ ಅವರ ಪಾತ್ರ ಇಲ್ಲಿ ಇಲ್ಲ ತನಿಖೆಗೆ ಸೂಚಿಸಿದರೆ ಮಾತ್ರ ತನಿಖೆಗೆ ತಂಡ ರಚಿಸಿ ವರದಿ ಸಲ್ಲಿಸುವ ಹೊಣೆಗಾರಿಕೆ ಮಾತ್ರ ಅವರಿಗೆ ಇರುತ್ತದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಹೊಸಪೇಟೆ ಮತ್ತು ಹಗರಿಬೊಮ್ಮನಹಳ್ಳಿ ಆಸ್ಪತ್ರೆಗಳ ಆಡಳಿತಾಧಿಕಾರಿಗಳಿಗೆ ಕುತ್ತು ಎದುರಾಗಬಹುದೇ ಎಂಬ ಶಂಕೆ ಮೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.