ADVERTISEMENT

ಕನ್ನಡ ವಿ.ವಿ. ಹಿರಿಯ ಪ್ರಾಧ್ಯಾಪಕ ಅಮರೇಶ ನುಗಡೋಣಿಗೆ ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 12:38 IST
Last Updated 30 ಜೂನ್ 2021, 12:38 IST
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ ಅವರು ಹಿರಿಯ ಪ್ರಾಧ್ಯಾಪಕ ಅಮರೇಶ ನುಗಡೋಣಿ ಅವರನ್ನು ಸತ್ಕರಿಸಿ ಬೀಳ್ಕೊಟ್ಟರು. ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಇದ್ದಾರೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ ಅವರು ಹಿರಿಯ ಪ್ರಾಧ್ಯಾಪಕ ಅಮರೇಶ ನುಗಡೋಣಿ ಅವರನ್ನು ಸತ್ಕರಿಸಿ ಬೀಳ್ಕೊಟ್ಟರು. ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಇದ್ದಾರೆ.   

ಹೊಸಪೇಟೆ (ವಿಜಯನಗರ): ಕೆಲಸದಿಂದ ನಿವೃತ್ತರಾದ ಹಿರಿಯ ಪ್ರಾಧ್ಯಾಪಕ ಅಮರೇಶ ನುಗಡೋಣಿ ಅವರಿಗೆ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಸನ್ಮಾನ ನೆರವೇರಿಸಿ ಮಾತನಾಡಿದ ಕುಲಪತಿ ಪ್ರೊ. ಸ.ಚಿ. ರಮೇಶ, ‘ಹಿರಿಯ ವಿದ್ವಾಂಸರೊಂದಿಗೆ ಒಡನಾಟ, ಸಾಹಿತ್ಯ ಚಿಂತನೆ, ಚರ್ಚೆ, ಆಡಳಿತ ಅನುಭವ ಇದೆಲ್ಲ ನಾನು ಕನ್ನಡ ವಿಶ್ವವಿದ್ಯಾಲಯದಿಂದ ಪಡೆದುಕೊಂಡ ಅನುಭವ. ನಿವೃತ್ತಿಯ ನಂತರವೂ ಕನ್ನಡ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕರ ವಿದ್ವತ್ತು ವಿದ್ಯಾರ್ಥಿಗಳಿಗೆ ಅಗತ್ಯವಾಗಿದೆ’ ಎಂದು ಹೇಳಿದರು.

ಹಿರಿಯ ಪ್ರಾಧ್ಯಾಪಕ ಪ್ರೊ. ರಹಮತ್ ತರೀಕೆರೆ, ‘ನುಗಡೋಣಿ ಅವರು ಒಬ್ಬ ಡೆಡಿಕೇಟೆಡ್ ಟೀಚರ್. ಕನ್ನಡ ವಿಶ್ವವಿದ್ಯಾಲಯಕ್ಕೆ ಸಮಯ ಕೊಡಲು ಅವರೆಂದೂ ಜಿಪುಣತನ ಮಾಡಿಲ್ಲ. ಅವರು ವಿದ್ಯಾರ್ಥಿಸ್ನೇಹಿ ಪ್ರೊಫೆಸರ್‌ ಆಗಿದ್ದರು. ಅವರ ಕಥೆಗಳಲ್ಲಿ ದುಡಿಮೆ, ಶ್ರಮ ಸಂಸ್ಕೃತಿ ದೊಡ್ಡ ಮೌಲ್ಯ ಆಗಿದೆ. ಶ್ರಮ ಸಂಸ್ಕೃತಿ ಮತ್ತು ಸೃಜನಶೀಲತೆಯ ಪ್ರತೀಕವಾಗಿರುವ ನುಗಡೋಣಿ ಅವರು ಈ ಮೂಲಕ ವಿಶ್ವವಿದ್ಯಾಲಯ ಕಟ್ಟಿದ್ದಾರೆ’ ಎಂದು ಹೇಳಿದರು.

ADVERTISEMENT

ಅಮರೇಶ ನುಗಡೋಣಿ ಮಾತನಾಡಿ, ‘ಕನ್ನಡ ವಿಶ್ವವಿದ್ಯಾಲಯ ನಮಗೆಲ್ಲ ಒಂದು ಅಸ್ತಿತ್ವ ನೀಡಿದೆ. ಬದುಕನ್ನು ಕೊಟ್ಟಿದೆ. ಬಸವಕಲ್ಯಾಣದಲ್ಲಿ ನಡೆದ ಕ್ರಾಂತಿಗೆ, ಕಲ್ಯಾಣದ ವಚನಕಾರರಿಗೆ ಕನ್ನಡ ವಿಶ್ವವಿದ್ಯಾಲಯವನ್ನು ಹೋಲಿಸುತ್ತೇನೆ’ ಎಂದರು.

ಉಪಕುಲಸಚಿವ ಎ. ವೆಂಕಟೇಶ, ಭಾಷಾ ನಿಕಾಯದ ಡೀನ್‌ ವೀರೇಶ ಬಡಿಗೇರ, ವಿಜ್ಞಾನ ನಿಕಾಯದ ಡೀನ್‌ರಾದ ಮಾಧವ ಪೆರಾಜೆ, ಗೋವಿಂದರಾಜು ಮಾತನಾಡಿದರು. ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.