ADVERTISEMENT

ಅಧಿಕಾರಿಗಳ ನೇಮಕಕ್ಕೆ ಮೊದಲ ಆದ್ಯತೆ: ಸಚಿವೆ ಶಶಿಕಲಾ ಜೊಲ್ಲೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 10:53 IST
Last Updated 2 ಫೆಬ್ರುವರಿ 2022, 10:53 IST
   

ಹೊಸಪೇಟೆ (ವಿಜಯನಗರ): ‘ಮೂಲ, ವಲಸಿಗರು ಎನ್ನುವ ಭಾವನೆ ಬಿಜೆಪಿಯಲ್ಲಿಲ್ಲ. ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ತಿಳಿಸಿದರು.

ಉಸ್ತುವಾರಿ ಸಚಿವರಾಗಿ ನೇಮಕಗೊಂಡ ನಂತರ ಬುಧವಾರ ನಗರದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಸ್ತುವಾರಿ ಸಚಿವರ ನೇಮಕ ಹೈಕಮಾಂಡ್‌, ಮುಖ್ಯಮಂತ್ರಿಗಳ ನಿರ್ಧಾರ. ಅವರು ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವೆ ಎಂದರು.

ಯಾವ ದಿನ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ನಾನು ವಿಜಯನಗರಕ್ಕೆ ನೇಮಕಗೊಂಡೆ ಅದೇ ದಿನ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಜಿಲ್ಲೆಯ ಶಾಸಕರು, ಸಂಸದರು ನನಗೆ ಕರೆ ಮಾಡಿ, ಎಲ್ಲ ರೀತಿಯ ಸಹಕಾರ ಕೊಡುವ ಭರವಸೆ ನೀಡಿದ್ದಾರೆ. ಹೊಸ ಜಿಲ್ಲೆ ಅಭಿವೃದ್ಧಿಯಾಗಬೇಕು ಎನ್ನುವುದು ಎಲ್ಲರ ಅಪೇಕ್ಷೆ. ಅದಕ್ಕೆ ತಕ್ಕಂತೆ ಕೆಲಸ ಮಾಡುವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರನ್ನು ಆನಂದ್‌ ಸಿಂಗ್‌ ಭೇಟಿಯಾಗಿರುವುದರ ಬಗ್ಗೆ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ. ವೈಯಕ್ತಿಕ ಸಂಬಂಧ, ಪರಿಚಯ ಇರುತ್ತದೆ. ಅವರ ಜೊತೆಗಿನ ಭೇಟಿಗೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಪ್ರತಿಕ್ರಿಯಿಸಿದರು.

ADVERTISEMENT

ಯಾರು ಒಳ್ಳೆಯ ಕೆಲಸ ಮಾಡುತ್ತಾರೋ ಅಂತಹವರು ಯಾವುದೇ ಜಿಲ್ಲೆಗೆ ಹೋದರೂ ಕಾರ್ಯಕರ್ತರು ಸ್ವಾಗತಿಸುತ್ತಾರೆ, ಪ್ರೀತಿಸುತ್ತಾರೆ. ಮೊದಲಿನಿಂದಲೂ ನಾನು ಪಕ್ಷ ಸಂಘಟನೆಯಿಂದ ಬಂದವಳು. ಮಹಿಳಾ ಮೋರ್ಚಾದಲ್ಲಿ ಕೆಲಸ ಮಾಡಿದ್ದೇನೆ. ಎಲ್ಲರೂ ನನಗೆ ಚಿರಪರಿಚಿತರು. ಹಾಗಾಗಿ ಎಲ್ಲರಿಗೂ ನನ್ನ ನೇಮಕದ ಬಗ್ಗೆ ಖುಷಿಯಾಗಿದೆ. ಹಾಗಂತ ಈ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಕೆಟ್ಟ ಅಭಿಪ್ರಾಯ ಇತ್ತು ಎಂದು ಭಾವಿಸಬೇಕಿಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರ ಪ್ರೀತಿ ನೋಡಿದರೆ ತಾಯಿ ಮನೆಗೆ ಬಂದ ಅನುಭವವಾಗಿದೆ ಎಂದು ಹೇಳಿದರು.

‘ಕೆಲ ಸಚಿವರಿಗೆ ಸೊಕ್ಕು ಹೆಚ್ಚಾಗಿದೆ’ ಎಂದು ಶಾಸಕ ಸೋಮಶೇಖರ್‌ ರೆಡ್ಡಿ ನೀಡಿರುವ ಹೇಳಿಕೆ ಕುರಿತು ಸುದ್ದಿಗಾರರು ಕೇಳಿದಾಗ, ರೆಡ್ಡಿ ಅವರ ಹೇಳಿಕೆ ನಾನು ಗಮನಿಸಿಲ್ಲ. ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ’ ಎಂದಷ್ಟೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.