ADVERTISEMENT

ಹಿಜಾಬ್‌ ಸಮರ್ಥಿಸಿ ಕಾಲೇಜು ಗೋಡೆ ಮೇಲೆ ಬರಹ: 3 ಠಾಣೆಗಳಲ್ಲಿ 4 ಪ್ರಕರಣ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 8:59 IST
Last Updated 16 ಮಾರ್ಚ್ 2022, 8:59 IST
ಹಿಜಾಬ್‌ ಸಮರ್ಥಿಸಿ ಕಾಲೇಜು ಗೋಡೆ ಮೇಲೆ ಬರಹ: 3 ಠಾಣೆಗಳಲ್ಲಿ 4 ಪ್ರಕರಣ
ಹಿಜಾಬ್‌ ಸಮರ್ಥಿಸಿ ಕಾಲೇಜು ಗೋಡೆ ಮೇಲೆ ಬರಹ: 3 ಠಾಣೆಗಳಲ್ಲಿ 4 ಪ್ರಕರಣ   

ಹೊಸಪೇಟೆ (ವಿಜಯನಗರ): ಹಿಜಾಬ್‌ ಧರಿಸುವುದನ್ನು ಸಮರ್ಥಿಸಿಕೊಂಡು ನಗರದ ತಲಾ ಎರಡು ಪ್ರೌಢಶಾಲೆ, ಕಾಲೇಜುಗಳ ಗೋಡೆ ಮೇಲೆ ಬರೆದ ಬರಹಕ್ಕೆ ಸಂಬಂಧಿಸಿ ಮೂರು ಠಾಣೆಗಳಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಳು ಬುಧವಾರ ದಾಖಲಾಗಿವೆ.

‘ಹಿಜಾಬ್ ಇಸ್‌ ಅವರ್‌ ಡಿಗ್ನಿಟಿ’, ‘ಹಿಜಾಬ್‌ ಇಸ್‌ ಅವರ್‌ ರೈಟ್‌’ ಎಂದು ಇಂಗ್ಲಿಷ್‌ನಲ್ಲಿ ದೊಡ್ಡ ಅಕ್ಷರಗಳಲ್ಲಿ ಗೋಡೆಗಳ ಮೇಲೆ ಬರೆಯಲಾಗಿದೆ. ನಗರದ ವಿಜಯನಗರ ಕಾಲೇಜು, ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗೋಡೆಗಳ ಮೇಲೆ ಬರೆದ ಬರಹಕ್ಕೆ ಸಂಬಂಧಿಸಿ ಆ ಕಾಲೇಜಿನ ಪ್ರಾಂಶುಪಾಲರು ನೀಡಿರುವ ದೂರಿನ ಮೇರೆಗೆ ಕ್ರಮವಾಗಿ ಗ್ರಾಮೀಣ ಮತ್ತು ಚಿತ್ತವಾಡ್ಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಶಾಲೆಯ ಗೋಡೆಗಳ ಮೇಲೆ ಬರೆದ ಬರಹದ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದಲ್ಲದೇ ನಗರದ ಜಿಲ್ಲಾ ಕ್ರೀಡಾಂಗಣದ ಗೋಡೆಗಳು, ಹರಿಹರ ರಸ್ತೆಯ ಗುರು ಪದವಿಪೂರ್ವ ಕಾಲೇಜಿನ ಗೋಡೆಗಳ ಮೇಲೆಯೂ ಹಿಜಾಬ್‌ ಬೆಂಬಲಿಸಿ ಬರಹ ಬರೆಯಲಾಗಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ನಗರಸಭೆ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಗೋಡೆ ಬರಹಗಳ ಮೇಲೆ ಸುಣ್ಣ, ಬಣ್ಣ ಬಳಿಸಿದ್ದಾರೆ.

ADVERTISEMENT

‘ಹಿಜಾಬ್‌ ಕುರಿತು ಮಂಗಳವಾರ ಹೈಕೋರ್ಟ್‌ ತೀರ್ಪು ಹೊರಬಿದ್ದಿದೆ. ತಡರಾತ್ರಿ ಯಾರೋ ಶಾಲಾ, ಕಾಲೇಜಿನ ಗೋಡೆಗಳ ಮೇಲೆ ಹಿಜಾಬ್‌ ಬೆಂಬಲಿಸಿ, ಸ್ಪ್ರೇ ಮೂಲಕ ಬರೆದಿದ್ದಾರೆ. ಹೀಗಾಗಿ ಬೇಗ ಕೆಲಸ ಮುಗಿಸಿಕೊಂಡು ತೆರಳಿದ್ದಾರೆ. ಬಣ್ಣದಿಂದ ಬರೆದಿದ್ದರೆ ಸಾಕಷ್ಟು ಸಮಯ ಹಿಡಿಯುತ್ತಿತ್ತು. ಗಸ್ತಿನಲ್ಲಿದ್ದ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಇನ್ನಷ್ಟೇ ಇದರ ಹಿಂದೆ ಯಾರ ಕೈವಾಡವಿದೆ ಎನ್ನುವುದು ಗೊತ್ತಾಗಬೇಕಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ತಿಳಿಸಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.