ಹೊಸಪೇಟೆ: ಭಾರತದ ಅಧ್ಯಕ್ಷತೆಯಲ್ಲಿ ಈ ಬಾರಿ ‘ಜಿ20’ ಶೃಂಗ ಸಭೆಗಳು ಯಶಸ್ವಿಯಾಗಿದ್ದು, ಹಂಪಿಯಲ್ಲಿ ಸಹ ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆ ಮತ್ತು ಶೆರ್ಪಾ ಸಭೆಗಳು ನಡೆದಿದ್ದವು. ಆಗ ರಸ್ತೆ ಬದಿಯ ಗೋಡೆಗಳಿಗೆ ಮಾಡಿದ್ದ ಪೇಂಟಿಂಗ್‌ಗಳು ಇದೀಗ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿವೆ.
ಜಿ20 ಶೃಂಗಸಭೆಯ ಲಾಂಛನದಲ್ಲಿ ತಾವರೆಯ ಚಿತ್ರವಿದೆ. ಇದು ಬಿಜೆಪಿಯ ಚುನಾವಣಾ ಚಿಹ್ನೆ ಎಂಬ ಕಾರಣಕ್ಕೆ ಜಿ20ಯ ಅರ್ಧ ಭಾಗಕ್ಕೆ ಪೇಂಟ್ ಹಚ್ಚಿ ಅಳಿಸಿ ಹಾಕಲಾಗಿದೆ. ಹೊಸಪೇಟೆ–ಹಂಪಿ –ಕಮಲಾಪುರ ಭಾಗದಲ್ಲಿ ರಸ್ತೆ ಬದಿಯ ಪೇಂಟಿಂಗ್‌ಗಳಲ್ಲಿ ಇಂತಹ ಊನಗೊಂಡ ದೃಶ್ಯ ಸಾಮಾನ್ಯವಾಗಿಬಿಟ್ಟಿದೆ.
ಲಾಂಛನದ ತಾವರೆ ಚಿಹ್ನೆ ಅಳಿಸಿ ಹಾಕಬೇಕೆಂದು ಕಾಂಗ್ರೆಸ್ ಒತ್ತಾಯಿಸಿರಲಿಲ್ಲ. ಜಿಲ್ಲಾ ಚುನಾವಣಾ ಅಧಿಕಾರಿಗೆ ಯಾರೂ ದೂರನ್ನೂ ಕೊಟ್ಟಿರಲಿಲ್ಲ. ಹೀಗಿದ್ದರೂ ವಿಶೇಷ ಕಾಳಜಿ ವಹಿಸಿ ಕಮಲಕ್ಕೆ ‘ಅರ್ಧ ಚಂದ್ರ‘ ನೀಡಿದ್ದಕ್ಕೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ.
‘ಪಕ್ಷಗಳ ಚಿಹ್ನೆಗಳು ಎಲ್ಲೇ ಇದ್ದರೂ ಅದನ್ನು ತೆಗೆಯಬೇಕು ಎಂಬ ನಿಯಮದಂತೆ ಜಿ20 ಲಾಂಛನದಿಂದಲೂ ಅಳಿಸಿ ಹಾಕಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಸಮರ್ಥಿಸಿಕೊಂಡಿದ್ದಾರೆ.
‘ಮತದಾರರು ಪ್ರಬುದ್ಧರಿದ್ದಾರೆ. ಲಾಂಛನದಲ್ಲಿ ಕಮಲ ಇದೆ ಅಂತ ಅದನ್ನು ನೋಡಿ ಕಮಲಕ್ಕೆ ಮತ ಹಾಕುತ್ತಾರೆಯೇ? ಹಾಗಿದ್ದರೆ ‘ಕೈ’ ಕಂಡರೆ ಅದನ್ನು ಬಟ್ಟೆಯಲ್ಲಿ ಮುಚ್ಚಬೇಕೇ? ಅಸಂಬದ್ಧ ತರ್ಕ ಮಾಡಿ ಸಮಯ, ಹಣ ವ್ಯರ್ಥಮಾಡುವ ಚುನಾವಣಾ ಆಯೋಗ, ನಿಜವಾದ ಸಮಸ್ಯೆಯತ್ತ ಗಮನ ಹರಿಸಿದರೆ ಒಳ್ಳೆಯದು’ ಎಂದು ಕಮಲಾಪುರದ ಮತದಾರರಾದ ಸುನಿತಾ ಮೆಟ್ರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.