ಹೊಸಪೇಟೆ : ವಿಶ್ವ ಪಾರಂಪರಿಕ ತಾಣ ಹಂಪಿ ಬಯಲು ವಸ್ತುಸಂಗ್ರಹಾಲಯ ಎಂದೇ ಖ್ಯಾತ. ಇಲ್ಲಿಗೆ ಬರುವ ವಿದೇಶಿ ಪ್ರವಾಸಿಗರಿಗೆ ಲೆಕ್ಕವಿಲ್ಲ. ಸೋಮವಾರ ಮಾತ್ರ ಇಂತಹ ವಿದೇಶಿ ಪ್ರಜೆಗಳ ಭೇಟಿ ವಿಭಿನ್ನವಾಗಿತ್ತು. ಅವರೆಲ್ಲ ಸುಮಾರು 36 ದೇಶಗಳನ್ನು ಪ್ರತಿನಿಧಿಸುವ ಉನ್ನತ ಅಧಿಕಾರಿಗಳಾಗಿದ್ದರು. ಬಣ್ಣ ಬೇರೆ ಬೇರೆ ಇತ್ತು, ಭಾವ ಮಾತ್ರ ಒಂದೇ ಆಗಿತ್ತು.
ಜಿ20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ 3ನೇ ಸಭೆಯ ಮೊದಲ ದಿನದ ಕಲಾಪ ಮುಗಿಸಿದ ಬಳಿಕ ಅವರೆಲ್ಲ ಆರೆಂಜ್ ಕೌಂಟಿಯಿಂದ ಹಂಪಿಯ ವಿರೂಪಾಕ್ಷ ದೇವಸ್ಥಾನದ ಮುಂಭಾಗಕ್ಕೆ ಎರಡು ವೋಲ್ವೊ ಬಸ್‌ಗಳಲ್ಲಿ ಬಂದಿದ್ದರು. ಕಸೂತಿ ಕಲೆಯನ್ನು ಕಂಡು ಬೆರಗಾದುದು ಮಾತ್ರವಲ್ಲ, ಅದು ಗಿನ್ನೆಸ್ ದಾಖಲೆ ಸೇರಿದ್ದಕ್ಕೆ ಸಾಕ್ಷಿಯಾದರು.
ವಿಶ್ವವಿಖ್ಯಾತ ಎದುರು ಬಸವಣ್ಣ ಮಂಟಪದ ಬಳಿ ಲಂಡನ್ ಗಿನ್ನಿಸ್ ಬುಕ್ ಆಪ್ ರೆಕಾರ್ಡ್ಸ್‌ನ ಅಧಿಕೃತ ತೀರ್ಪುಗಾರ ರಿಷಿನಾಥ್ ಲಂಬಾಣಿ ಕಸೂತಿ ಕಲೆಗೆ ಸಂದ ಗಿನ್ನಿಸ್ ದಾಖಲೆ ಪ್ರಮಾಣ ಪತ್ರವನ್ನು ಕೇಂದ್ರ ಸಚಿವ ಪ್ರಲ್ಹಾದ್ದ ಜೋಷಿ ಮತ್ತು ಕೇಂದ್ರ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ ಮೋಹನ್ ಅವರಿಗೆ ಹಸ್ತಾಂತರಿಸಿದರು.
ಲಂಬಾಣಿ ಕಸೂತಿಗೆ ಉದ್ದಿಮೆ ರೂಪ: ‘ಜಿ20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಉದ್ದೇಶದಂತೆ ಸಾಂಸ್ಕೃತಿಕ ಮತ್ತು ಸೃಜನಾತ್ಮಕ ಕೈಗಾರಿಕೆಗಳ ಆರ್ಥಿಕತೆಯ ಪ್ರಚಾರ ಮಾಡುವ ನಿಟ್ಟಿನಲ್ಲಿ ಲಂಬಾಣಿ ಕಸೂತಿ ವಸ್ತು ಪ್ರದರ್ಶನವನ್ನು ಹಂಪಿಯಲ್ಲಿ ಏರ್ಪಡಿಸಲಾಗಿದೆ‘ ಎಂದು ಸಚಿವ ಪ್ರಲ್ಹಾದ್ ಜೋಷಿ ಹೇಳಿದರು.
ಹಲವು ತುಣುಕುಗಳು ಸೇರಿ ಕಸೂತಿ ಕಲೆಯಲ್ಲಿ ಸುಂದರ ಕಲಾಕೃತಿಗಳು ಆಗುವಂತೆ, ಜಾಗತಿಕವಾಗಿ ಎಲ್ಲಾ ರಾಷ್ಟ್ರಗಳು ಒಂದಾಗಬೇಕು ಎಂಬ ತತ್ವವನ್ನು ಲಂಬಾಣಿ ಕಸೂತಿ ಕಲೆ ಜಗತ್ತಿಗೆ ಸಾರುತ್ತಿದೆ. ಜಿ20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ವಿವಿಧ ದೇಶಗಳ ಪ್ರತಿನಿಧಿಗಳು ಲಂಬಾಣಿ ಕಸೂತಿ ಬಟ್ಟೆಗಳನ್ನು ಹಿಡಿದು ಲಂಬಾಣಿ ಮಹಿಳೆಯರ ಜೊತೆ ಪೋಟೊ ತೆಗೆಸಿಕೊಂಡರು.
ಸಂಡೂರಿನ ಕುಶಲ ಕಲಾಕೇಂದ್ರದ ಶಾಂತಾಬಾಯಿ ಮಾತನಾಡಿ, ’ಕಳೆದ 29 ವರ್ಷಗಳಿಂದ ಈ ಕೇಂದ್ರದಲ್ಲಿ ಲಂಬಾಣಿ ಮತ್ತು ಕಸೂತಿಯನ್ನು ಮಾಡುತ್ತಿರುವೆ, ರಾಷ್ಟ್ರೀಯ ಮನ್ನಣೆ ಪಡೆದ ನಮ್ಮ ಕಲಾಕೇಂದ್ರ ಇಂದು ಗಿನ್ನೆಸ್ ದಾಖಲೆಗೆ ಸಾಕ್ಷಿಯಾಗುತ್ತಿರುವುದು ಸಂತಸ ತಂದಿದೆ’ ಎಂದರು. ಕಾರ್ಯದರ್ಶಿ ಶೃತಿ ಮುನಿಯಪ್ಪ ಸಂಸ್ಥೆ ಬೆಳೆದ ಬಂದು ಹಾದಿಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಕಲಬುರ್ಗಿ ಸಂಸದ ಉಮೇಶ್ ಜಾಧವ್, ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಿಲ್ಲಿ ಪಾಂಡೆ, ಜಿಲ್ಲಾಧಿಕಾರಿ ಕೆ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು ಬಿ.ಎಲ್. ಸಂಡೂರು ಲಂಬಾಣಿ ಕಲಾ ಕೇಂದ್ರದ ನಿರ್ದೇಶಕಿ ಸೂರ್ಯಪ್ರಭಾ ಘೋರ್ಪಡೆ ಇದ್ದರು.
ಲಂಬಾಣಿ ಕಸೂತಿಗೆ ಉದ್ದಿಮೆ ರೂಪ ನೀಡಿ ಅಂತರಾಷ್ಟ್ರೀಯ ಮಾರುಕಟ್ಟೆ ಒದಗಿಸಲು ಪ್ರಯತ್ನಿಸಲಾಗುವುದು .ಪ್ರಲ್ಹಾದ್ ಜೋಷಿ ಕೇಂದ್ರದ ಸಂಸದೀಯ ವ್ಯವಹಾರ ಸಚಿವಪ್ರಲ್ಹಾದ್ ಜೋಷಿ ಕೇಂದ್ರದ ಸಂಸದೀಯ ವ್ಯವಹಾರ ಸಚಿವ
ಜಿ.ಐ.ಟ್ಯಾಗ್ ಈಗ ಗಿನ್ನೆಸ್
1988ರಲ್ಲಿ ಸಂಡೂರಿನಲ್ಲಿ ಕೇವಲ 5 ಲಂಬಾಣಿ ಮಹಿಳೆಯರಿಂದ ಆರಂಭವಾದ ಲಂಬಾಣಿ ಕುಶಲ ಕಲಾ ಕೇಂದ್ರ ಇಂದು 600 ಕುಶಲ ಕಸೂತಿ ಕಲೆ ಕಲಿತ ಮಹಿಳೆಯರಿಂದ ಮುನ್ನಡೆಯುತ್ತಿದೆ. ಪಾರಂಪರಿಕವಾಗಿ ಮನೆಗಳು ಹಾಗೂ ತಾಂಡಗಳಿಗೆ ಸೀಮಿತವಾಗಿದ್ದ ಲಂಬಾಣಿ ಕಸೂತಿ ಕಲೆಗೆ ಸಾಂಸ್ಥಿಕ ರೂಪ ನೀಡಿ ಜಿ.ಐ.(ಜಾಗತಿಕ ಗುರುತು) ಟ್ಯಾಗ್ ಪಡೆಯುವಲ್ಲಿ ಕಲಾ ಕೇಂದ್ರ ಯಶಸ್ವಿಯಾಗಿದೆ. ವಿವಿಧ ರೀತಿಯ 29 ಕಲಾತ್ಮಕ ಕಸೂತಿಗಳನ್ನು ಇಲ್ಲಿ ಮಾಡಲಾಗುತ್ತಿದೆ. ಈ ಕೇಂದ್ರಕ್ಕೆ ರಾಷ್ಟ್ರ ಮಟ್ಟದ ಪ್ರಶಸ್ತಿ ಯುನೆಸ್ಕೊ ಮನ್ನಣೆ ಹಾಗೂ ಕಮಲಾದೇವಿ ಛಟ್ಟೋಪಾಧ್ಯಾಯ ಪ್ರಶಸ್ತಿ ಲಭಿಸಿದೆ. ಈಗ ಗಿನ್ನೆಸ್ ದಾಖಲೆಯು ಮುಡಿಗೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.