ADVERTISEMENT

‘ಮುಸ್ಲಿಮರಿಗೆ ಶೇ 10 ಮೀಸಲಾತಿ ಕೊಡಿ’

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:50 IST
Last Updated 3 ಜುಲೈ 2025, 15:50 IST

ಹೂವಿನಹಡಗಲಿ: ‘ಸಮಾಜದ ಕೆಳಸ್ತರದಲ್ಲಿ ದುಡಿಯುವ ಮುಸ್ಲಿಂ ಸಮುದಾಯ ತೀರಾ ಹಿಂದುಳಿದಿದೆ. ಜನಸಂಖ್ಯೆ ಆಧಾರದಲ್ಲಿ ಮುಸ್ಲಿಮರಿಗೆ ಶೇ 10ರಷ್ಟು ಮೀಸಲಾತಿ ನೀಡಬೇಕು’ ಎಂದು ಕರ್ನಾಟಕ ಮುಸ್ಲಿಂ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಲ್.ಎಸ್. ಬಷೀರ್ ಅಹ್ಮದ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಶೇ 11ರಷ್ಟಿರುವ ಮುಸ್ಲಿಮರಿಗೆ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕಲ್ಪಿಸಿಲ್ಲ. ಸಾಚಾರ್ ಸಮಿತಿ, ಹಾವನೂರು ಆಯೋಗದಿಂದಲೂ ಸಮುದಾಯಕ್ಕೆ ಅನ್ಯಾಯವಾಗಿದೆ. ಬಿಜೆಪಿ ಸರ್ಕಾರ ಮುಸ್ಲಿಮರ ಮೀಸಲಾತಿ ಕಸಿದು ಪತನಗೊಂಡಿದೆ. ಕಾಂಗ್ರೆಸ್ ಸರ್ಕಾರ ವಸತಿಯಲ್ಲಿ ಶೇ 4ರಷ್ಟು ಮೀಸಲಾತಿ ನೀಡಿ ಸಮುದಾಯದ ಮೂಗಿಗೆ ತುಪ್ಪ ಸವರಿದೆ. ಇದರ ಬದಲು ಶಿಕ್ಷಣ, ಉದ್ಯೋಗ, ಸೌಲಭ್ಯಗಳಲ್ಲಿ ಶೇ 10 ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿದರು.

‘ಸಂಘದಿಂದ ಎಲ್ಲ ತಾಲ್ಲೂಕುಗಳಲ್ಲಿ ಸಮುದಾಯವನ್ನು ಜಾಗೃತಗೊಳಿಸುವ ಕಾರ್ಯಕ್ರಮ ಹಮ್ಮಿಕೊಂಡು, ಸರ್ಕಾರಗಳಿಗೆ ಹಕ್ಕೊತ್ತಾಯ ಮಂಡಿಸುತ್ತೇವೆ. ಪ್ರತಿ ಜಿಲ್ಲೆಯಲ್ಲಿ ಒಂದು ವಿಧಾನಸಭಾ ಕ್ಷೇತ್ರವನ್ನು ‘2ಬಿ’ಗೆ ಮೀಸಲಿಡಬೇಕು. ಉಪ ಮುಖ್ಯಮಂತ್ರಿ ಸ್ಥಾನವನ್ನು ಮುಸ್ಲಿಮರಿಗೆ ನೀಡಬೇಕು. ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಶಾದಿಮಹಲ್ ನಿರ್ಮಿಸಬೇಕು. ಮುಸ್ಲಿಮರು ಇರುವ ಊರುಗಳಲ್ಲಿ ಖಬರಸ್ಥಾನಕ್ಕೆ ಐದು ಎಕರೆ ಜಮೀನು ಮೀಸಲಿಡಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಆ.24ರಂದು ಪಟ್ಟಣದ ರಾಜಬಾಗ್ ಸವಾರ್ ದರ್ಗಾದಲ್ಲಿ ಕರ್ನಾಟಕ ಮುಸ್ಲಿಂ ಸಂಘ ತಾಲ್ಲೂಕು ಘಟಕ ಉದ್ಘಾಟನೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ’ ಎಂದು ಮಾಹಿತಿ ನೀಡಿದರು.

ಮುಖಂಡರಾದ ಕೆ.ಗೌಸ್ ಮೊಹಿದ್ದೀನ್, ಎನ್.ಇರ್ಫಾನ್, ಎಂ.ಗೂಡುಸಾಬ್, ಡಿ.ದಾದಾಸಾಬ್, ಕೊಟ್ಟೂರು ಗೌಸ್ ಮೋದೀನ್, ಎಚ್.ಶೇಕ್ ಅಹ್ಮದ್, ಎನ್.ಬಡೇಸಾಬ್, ತೊಪ್ಪಲ ಖಾಜಾಸಾಬ್, ಕೆ.ನಜೀರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.