ADVERTISEMENT

ವಿಜಯನಗರ | ಅಂಜನಾದ್ರಿ ಬೆಟ್ಟ ಹತ್ತಿ ಇಳಿದ ರಾಜ್ಯಪಾಲರಿಂದ ಹಂಪಿ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 9:14 IST
Last Updated 6 ಆಗಸ್ಟ್ 2025, 9:14 IST
   

ಹೊಸಪೇಟೆ: ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್‌ ಅವರು ಬುಧವಾರ ಅಂಜನಾದ್ರಿ ಬೆಟ್ಟ ಹತ್ತಿ, ಇಳಿದ ಬಳಿಕ ಹಂಪಿಯ ವಿರೂಪಾಕ್ಷ ದೇವಸ್ಥಾನ, ಕೆಲವು ಸ್ಮಾರಕಗಳನ್ನು ವೀಕ್ಷಿಸಿದರು.

ರಾಜ್ಯಪಾಲರು ತಮ್ಮ ಕುಟುಂಬ ಸಮೇತ ಮಂಗಳವಾರ ಸಂಜೆಯೇ ಇಲ್ಲಿಗೆ ಆಗಮಿಸಿದ್ದರು. ತುಂಬಿ ತುಳುಕುತ್ತಿರುವ ತುಂಗಭದ್ರಾ ಜಲಾಶಯವನ್ನು ಕಣ್ತುಂಬಿಕೊಂಡು ಪಕ್ಕದ ಗುಡ್ಡದಲ್ಲಿರುವ ವೈಕುಂಠ ಅತಿಥಿಗೃಹದಲ್ಲಿ ತಂಗಿದ್ದರು.

ಬುಧವಾರ ಬೆಳಿಗ್ಗೆ 7.15ರ ಸುಮಾರಿಗೆ ಕಮಲಾಪುರ, ಬುಕ್ಕಸಾಗರ ಮೂಲಕ ಅಂಜನಾದ್ರಿಯತ್ತ ತೆರಳಿದರು. ರಾಜ್ಯಪಾಲರು ಸರ್ಕಾರಿ ಕಾರಿನಲ್ಲಿ ಸಂಚರಿಸಿದರೆ, ಅವರ ಕುಟುಂಬದವರು ಐದು ಖಾಸಗಿ ಇನ್ನೋವಾ ಕಾರುಗಳಲ್ಲಿ ಬೆಟ್ಟದತ್ತ ತೆರಳಿದರು.

ADVERTISEMENT

ಅಂಜನಾದ್ರಿಯಿಂದ ವಾಪಸಾದ ರಾಜ್ಯಪಾಲರು ಮೊದಲಿಗೆ ಹಂಪಿಯ ವಿರೂಪಾಕ್ಷ ದೇವಸ್ಥಾನಕ್ಕೆ ಭೇಟಿ ನೀಡಿದರು. ಬಳಿಕ ಉಗ್ರ ನರಸಿಂಹ, ಬಡವಿಲಿಂಗ, ವಿಜಯವಿಠ್ಠಲ ಮತ್ತು ಇತರ ಕೆಲವು ಸ್ಮಾರಕಗಳನ್ನು ವೀಕ್ಷಿಸಿದರು.

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌, ಎಸ್‌ಪಿ ಅರುಣಾಂಗ್ಷುಗಿರಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ  ಪ್ರಭುಲಿಂಗ ಎಸ್.ತಳಕೇರಿ, ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಇದ್ದರು. ಪ್ರವಾಸಿ ಮಾರ್ಗದರ್ಶಿಗಳಾದ ವಿರೂಪಾಕ್ಷಿ ವಿ., ಮಂಜುನಾಥ ಗೌಡ, ಎಸ್.ದೇವರಾಜ್, ಯಕ್ಷ, ರಾಘವೇಂದ್ರ, ನಾಗರಾಜ್ ಅವರು ಗಣ್ಯರಿಗೆ ಹಂಪಿಯ ಸ್ಮಾರಕಗಳ ಕುರಿತು ಮಾರ್ಗದರ್ಶನ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.