ADVERTISEMENT

ಶೋಷಿತರ ಹಕ್ಕು ಇತರರ ಪಾಲಾಗದಂತೆ ನೋಡಿಕೊಳ್ಳಿ

ಬುಡ್ಗಜಂಗಮ ಕಾಲೋನಿಗೆ ಆಂಜನೇಯ ಭೇಟಿ–ಒಳಮೀಸಲಾತಿಯ ಕುರಿತು ಮಾಹಿತಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 16:08 IST
Last Updated 8 ಜೂನ್ 2025, 16:08 IST
ಹೊಸಪೇಟೆಯ ಬುಡ್ಗ ಜಂಗಮ ಕಾಲೋನಿಗೆ ಭಾನುವಾರ ಭೇಟಿ ನೀಡಿದ ಮಾಜಿ ಸಚಿವ ಎಚ್.ಆಂಜನೇಯ ಅವರು ಸ್ಥಳೀಯರಿಗೆ ಒಳ ಮೀಸಲಾತಿಯ ಅಗತ್ಯದ ಕುರಿತು ಮಾಹಿತಿ ನೀಡಿದರು
ಹೊಸಪೇಟೆಯ ಬುಡ್ಗ ಜಂಗಮ ಕಾಲೋನಿಗೆ ಭಾನುವಾರ ಭೇಟಿ ನೀಡಿದ ಮಾಜಿ ಸಚಿವ ಎಚ್.ಆಂಜನೇಯ ಅವರು ಸ್ಥಳೀಯರಿಗೆ ಒಳ ಮೀಸಲಾತಿಯ ಅಗತ್ಯದ ಕುರಿತು ಮಾಹಿತಿ ನೀಡಿದರು   

ಹೊಸಪೇಟೆ (ವಿಜಯನಗರ): ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಅವರು ಭಾನುವಾರ ನಗರದ ಬುಡ್ಗಜಂಗಮ ಕಾಲೋನಿಗೆ ಭೇಟಿ ನೀಡಿ, ಒಳಮೀಸಲಾತಿಯ ಅಗತ್ಯದ ಕುರಿತು ಜನರಿಗೆ ಮನವರಿಕೆ ಮಾಡಿಕೊಟ್ಟರು.

ಶೋಷಿತ ಸಮುದಾಯಗಳ ಹಕ್ಕುನ್ನು ಕಾಪಾಡುವುದಕ್ಕೆ ಇದೀಗ ನಿರ್ಣಾಯಕ ಸಮಯ ಕೂಡಿಬಂದಿದೆ. ಸಾಮಾಜಿಕ ನ್ಯಾಯಕ್ಕೆ ಇದುವರೆಗೆ ಧಕ್ಕೆ ಆಗುತ್ತಲೇ ಬಂದಿದ್ದು, ಅದನ್ನು ತಡೆಗಟ್ಟಬೇಕಿದೆ. ಸಂವಿಧಾನ ಬಾಹಿರವಾಗಿ ಬೇರೆಯವರ ಕಸುಬನ್ನು ಕಸಿಯುವಂತಹ, ವಾಮ ಮಾರ್ಗದಲ್ಲಿ ಹಕ್ಕುಗಳನ್ನು ಗಳಿಸಿ ಮೀಸಲಾತಿಯನ್ನು ಪಡೆಯುವಂತಹ ಕೆಲಸ ನಡೆಯುತ್ತಿದೆ. ಇದನ್ನು ಕೂಡಲೇ ತಡೆಹಿಡಿಯಬೇಕು ಎಂದು ಅವರು ಜನರಿಗೆ ತಿಳಿಸಿದರು.

‘ಬೇಡ/ಬುಡ್ಗ ಜಂಗಮ ಜಾತಿ ಜನಸಂಖ್ಯೆಯ ಹಿಂದುಳಿಯುವಿಕೆಯ ಆಧಾರದ ಮೇಲೆ ನಮಗೆ ಸಿಗಬೇಕಾದಂತಹ ಮೀಸಲಾತಿಯ ಪ್ರಮಾಣ ತುಂಬಾ ಕಡಿಮೆ ಇರುವುದರಿಂದ ನಮಗೆ ಒಳ ಮೀಸಲಾತಿಯನ್ನು ಕೊಡಿ, ವರ್ಗೀಕರಣ ಮಾಡಿ ಎಂದು ಒತ್ತಾಯಿಸುತ್ತಿದ್ದೇವೆ. ಶೇ 15ರಷ್ಟು ಮೀಸಲಾತಿ ಪಡೆಯಲು 101 ಜಾತಿಗಳಿವೆ, ಅದರಲ್ಲಿ ಪ್ರಬಲವಾಗಿ 5 ರಿಂದ 6 ಸಮುದಾಯಗಳಿವೆ. ಇವರೊಂದಿಗೆ ನಮಗೆ ಸ್ಪರ್ಧೆ ಮಾಡುವುದಕ್ಕೆ ಆಗುವುದಿಲ್ಲ. ಈ ಕಾರಣದಿಂದಾಗಿ ನಮಗೆ ಪ್ರತ್ಯೇಕವಾಗಿ ಒಳ ಮೀಸಲಾತಿ ವರ್ಗೀಕರಣ ಮಾಡಬೇಕು ಎಂದು ಹೇಳಿದೆವು, ನಮ್ಮ 35 ವರ್ಷಗಳ ಹೋರಾಟ ಇದೀಗ ಅಂತಿಮ ಹಂತಕ್ಕೆ ತಲುಪಿದೆ’ ಎಂದು ಆಂಜನೇಯ ವಿವರಿಸಿದರು.

ADVERTISEMENT

‘ಬೇಡ ಜಂಗಮರ ಆಹಾರ ಪದ್ದತಿನೇ ಬೇರೆ, ಇವರು ನರಿ, ಬೆಕ್ಕು, ಇಲಿ ಇತ್ಯಾದಿ ಕಾಡು ಪ್ರಾಣಿಗಳನ್ನು ಬೇಟೆ ಮಾಡಿ ತಿನ್ನುತ್ತಾರೆ. ಬೇಡ ಎಂದರೆ ಬೇಟೆಯಾಡುವುದು ಎಂಬ ಪದದ ಸಂವಾದಿಯಾಗಿದೆ. ಬುಡ್ಗ ಜಂಗಮ ಸಹ ಇದಕ್ಕೇ ಸಂಬಂಧಿಸಿದಂತಹ ಸಮುದಾಯ. ಆದರೆ ವೀರಶೈವರು ಮಾಂಸಾಹಾರ ಸೇವಿಸುವವರೇ ಅಲ್ಲ. ಹೀಗಿರುವಾಗ ಬೇಡ/ಬುಡ್ಗ ಜಂಗಮ ಸಮುದಾಯದವರ ಹಕ್ಕನ್ನು ಕಸಿಯುವುದು ಸರಿಯಲ್ಲ’ ಎಂದು ಅವರು ವಿವರಿಸಿದರು.

ಕರ್ನಾಟಕ ಅಲೆಮಾರಿ ಬುಡ್ಗಜಂಗಮ್ ಕ್ಷೇಮಾಭಿವೃದ್ದಿ ಸಂಘದ  ಅಧ್ಯಕ್ಷ ಸಣ್ಣ ಮಾರೆಪ್ಪ, ಯರ್ರಿಸ್ವಾಮಿ, ನಿಂಬಗಲ್ ರಾಮಕೃಷ್ಣ, ಸಿ.ಆರ್.ಭರತ್ ಕುಮಾರ್‌, ಶೇಶು, ಬಸವರಾಜ, ಕರಿಯಪ್ಪ, ಸಂತೋಷ್ ಕೂಡ್ಲಿಗಿ, ಮಾರೆಪ್ಪ, ಜಂಬಣ್ಣ, ಜಂಬಕ್ಕ, ಯಲ್ಲಮ್ಮ, ಲಕ್ಷ್ಮೀ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.