ಹೂವಿನಹಡಗಲಿ (ವಿಜಯನಗರ ಜಿಲ್ಲೆ): ಮಾರುಕಟ್ಟೆಯಲ್ಲಿ ‘ಹಡಗಲಿ ಮಲ್ಲಿಗೆ’ಯ ಬೆಲೆಯು ದಿಢೀರ್ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ.
ಮಾರ್ಚ್‌ನಲ್ಲಿ ಮಲ್ಲಿಗೆ ಋತು ಪ್ರಾರಂಭವಾದಾಗ ಪ್ರತಿ ಕೆ.ಜಿಗೆ ₹400ರಿಂದ ₹500 ದರ ಇತ್ತು. ಸಾಮಾನ್ಯ ದಿನಗಳಲ್ಲಿ ಕೆ.ಜಿಗೆ ₹250ರಿಂದ ₹300 ಇರುತ್ತಿದ್ದ ಬೆಲೆಯು, ಕಳೆದ ಒಂದು ವಾರದಿಂದ ದಾವಣಗೆರೆ, ಹಾವೇರಿ ಹೂವಿನ ಮಾರುಕಟ್ಟೆಯಲ್ಲಿ ₹100 ರಿಂದ ₹80ಕ್ಕೆ ಕುಸಿದಿದೆ.
ಪಟ್ಟಣ ಸೇರಿ ಹನಕನಹಳ್ಳಿ, ದೇವಗೊಂಡನಹಳ್ಳಿ, ಮಿರಾಕೊರನಹಳ್ಳಿ, ವಿನೋಬನಗರ, ಹಾಲ್ ತಿಮಲಾಪುರ, ಮುದೇನೂರು, ಕೊಂಬಳಿ ಗ್ರಾಮದ 180 ಎಕರೆಯಲ್ಲಿ ರೈತರು ಮಲ್ಲಿಗೆ ಕೃಷಿ ಮಾಡುತ್ತಾರೆ. ದಾವಣಗೆರೆ, ಹಾವೇರಿ, ಗದಗ, ಹುಬ್ಬಳ್ಳಿಗೆ ಇಲ್ಲಿಂದ ಪ್ರತಿ ದಿನ 25 ರಿಂದ 30 ಕ್ವಿಂಟಲ್ ಮಲ್ಲಿಗೆ ಮೊಗ್ಗು ಸಾಗಣೆಯಾಗುತ್ತದೆ.
‘ಇತ್ತೀಚೆಗೆ ದಾವಣಗೆರೆ, ಹಾವೇರಿಯ ಹೂವಿನ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ‘ಹಡಗಲಿ ಮಲ್ಲಿಗೆ’ಗೆ ಬೇಕಾಬಿಟ್ಟಿ ದರ ನಿಗದಿ ಮಾಡುತ್ತಾರೆ. ಖಾಸಗಿ ವಾಹನ ಬಾಡಿಗೆ, ದಲ್ಲಾಳಿಗಳ ಕಮಿಷನ್ ಹೊರೆಯಾಗಿ ಪರಿಣಮಿಸಿದೆ’ ಎಂಬುದು ರೈತರ ದೂರು.
‘ಬಿಸಿಲ ಝಳ ಹೆಚ್ಚಿರುವುದು ಮತ್ತು ಈಚೆಗೆ ಸುರಿದ ಮಳೆಯು ಮಲ್ಲಿಗೆಗೆ ಪೂರಕ ಹವಾಮಾನ ಸೃಷ್ಟಿಸಿದ್ದು, ಇಳುವರಿ ದುಪ್ಪಟ್ಟಾಗಿದೆ. ಬೆಂಗಳೂರು ಭಾಗದಿಂದ ದುಂಡು ಮಲ್ಲಿಗೆ, ಸೇವಂತಿಗೆ, ಬಟನ್ಸ್ ಸಹಿತ ತರಹೇವಾರಿ ಹೂಗಳು ಮಾರುಕಟ್ಟೆಗೆ ಬರುತ್ತಿವೆ. ಹೀಗಾಗಿ, ‘ಹಡಗಲಿ ಮಲ್ಲಿಗೆ’ಗೆ ಬೆಲೆ ಕುಸಿದಿದೆ’ ಎಂದು ಮಲ್ಲಿಗೆ ಸಗಟು ವ್ಯಾಪಾರಿಗಳಾದ ದಾವಲ್ ಮಲ್ಲಿಕ್ ಮತ್ತು ಸುಭಾನ್ ಸಾಬ್ ಹೇಳುತ್ತಾರೆ.
‘ಒಂದು ಕೆ.ಜಿ ಮೊಗ್ಗು ಬಿಡಿಸಲು ಕಾರ್ಮಿಕರಿಗೆ ₹100 ಕೂಲಿ ಕೊಡುತ್ತೇವೆ. ದಲ್ಲಾಳಿಗಳು ₹30ರಿಂದ ₹40 ಕಮಿಷನ್ ತೆಗೆದುಕೊಳ್ಳುತ್ತಾರೆ. ಸಾಗಣೆ ವೆಚ್ಚವೂ ಹೆಚ್ಚಾಗಿದೆ. ಕನಿಷ್ಠ ಉತ್ಪಾದನಾ ವೆಚ್ಚವೂ ಸಿಗದ ಕಾರಣ ಮೊಗ್ಗು ಕೀಳುವುದನ್ನೇ ಬಿಟ್ಟಿದ್ದೇವೆ’ ಎಂದು ವಿನೋಬನಗರದ ರೈತ ಗೋನಾಳ ಮಹಾಂತೇಶ ಅಳಲು ತೋಡಿಕೊಂಡರು.
ಈ ಬಾರಿ ಇಳುವರಿ ಹೆಚ್ಚಾಗಿರುವ ಕಾರಣ ಮಲ್ಲಿಗೆಗೆ ಬೆಲೆ ಕುಸಿದಿದೆ. ಬೇಡಿಕೆ ಇರುವ ಕಡೆಗೆ ರವಾನಿಸಲು ರೈತರು ಹಾಗೂ ರೈತ ಉತ್ಪಾದಕ ಸಂಸ್ಥೆಗಳು ಮುಂದಾಗಬೇಕಿದೆನಾಗರಾಜ ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ ಹೂವಿನಹಡಗಲಿ
ಮಾರುಕಟ್ಟೆಯಲ್ಲಿ ಮಲ್ಲಿಗೆಗೆ ಎಲ್ಲ ಕಾಲದಲ್ಲೂ ಬೇಡಿಕೆ ಇರುತ್ತದೆ. ಆದರೆ ಬಹುಪಾಲು ಲಾಭ ದಲ್ಲಾಳಿಗಳ ಪಾಲಾಗುತ್ತಿದೆ. ಕಷ್ಟಪಟ್ಟು ಬೆಳೆಯುವ ರೈತರಿಗೆ ಸಿಗುತ್ತಿಲ್ಲಮಲ್ಲನಕೆರೆ ಹನುಮಂತಪ್ಪ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.