ADVERTISEMENT

ಅಂಜನಾದ್ರಿ ಅಭಿವೃದ್ಧಿಗೆ 15 ದಿನದೊಳಗೆ ನೀಲನಕ್ಷೆ: ಸಚಿವ ಆನಂದ್‌ ಸಿಂಗ್ ಹೇಳಿಕೆ

62 ಎಕರೆ ಭೂಸ್ವಾಧೀನಕ್ಕೆ ರೈತರ ಒಪ್ಪಿಗೆ: ಆನಂದ್‌ ಸಿಂಗ್

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 13:03 IST
Last Updated 13 ಜುಲೈ 2022, 13:03 IST
ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಸಚಿವ ಆನಂದ್‌ ಸಿಂಗ್‌ ಮಾತನಾಡಿದರು – ಪ್ರಜಾವಾಣಿ ಚಿತ್ರ
ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಸಚಿವ ಆನಂದ್‌ ಸಿಂಗ್‌ ಮಾತನಾಡಿದರು – ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ‘ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ 62 ಎಕರೆ ಜಮೀನು ಬೇಕಿದ್ದು, ಆಂಜನೇಯನ ಮೇಲಿನ ಭಕ್ತಿ, ನಂಬಿಕೆಯಿಂದ ರೈತರು ಜಮೀನು ಕೊಡಲು ಮುಂದಾಗಿದ್ದಾರೆ. 15 ದಿನದೊಳಗೆ ನೀಲನಕ್ಷೆ ಸಿದ್ಧಪಡಿಸಲಾಗುವುದು’ ಎಂದು ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ನಗರದಲ್ಲಿ ಬುಧವಾರ ನಡೆದ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರ ಪ್ರತಿ ಎಕರೆ ಜಮೀನಿಗೆ ಗರಿಷ್ಠ ₹42 ಲಕ್ಷ ಪರಿಹಾರ ನೀಡಲು ಉದ್ದೇಶಿಸಲಾಗಿದೆ ಎಂದ ಆನಂದ್‌ ಸಿಂಗ್‌, ‘ನೀವು ಕೂಡ ನಿಮ್ಮ ತಾಲ್ಲೂಕಿನ ರೈತರೊಂದಿಗೆ ಸಮಾಲೋಚನೆ ನಡೆಸಿ ಮನವರಿಕೆ ಮಾಡಿಕೊಡಬೇಕು. ಇನ್ನೂ ಹೆಚ್ಚಿನ ಹಣಕ್ಕೆ ರೈತರು ಪಟ್ಟು ಹಿಡಿದಲ್ಲಿ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳಬೇಕಾಗುತ್ತದೆ’ ಎಂದು ಸಭೆಯಲ್ಲಿದ್ದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಹೇಳಿದರು.

ಪರಿಣತ ವಾಸ್ತುಶಿಲ್ಪ ತಜ್ಞರ ಸಲಹೆ ಮೇರೆಗೆ ಅಭಿವೃದ್ಧಿ ಮಾಡಲಾಗುವುದು. ಅಂಜನಾದ್ರಿ ಸಹಜ ಸೌಂದರ್ಯಕ್ಕೆ ಧಕ್ಕೆ ಬರಬಾರದು ಎನ್ನುವುದು ನಮ್ಮ ಉದ್ದೇಶ. ಜಮೀನು ಸ್ವಾಧೀನಪಡಿಸಿಕೊಂಡ ನಂತರ ಮೊದಲ ಹಂತದಲ್ಲಿ ಶೌಚಾಲಯ, ಸ್ನಾನಗೃಹ, ವಾಹನ ನಿಲುಗಡೆಗೆ ಪಾರ್ಕಿಂಗ್‌, ಪ್ರವಾಸಿಗರ ಕೊಠಡಿ, ವಾಣಿಜ್ಯ ಮಳಿಗೆಗಳು ಸೇರಿದಂತೆ ಇತರೆ ಸೌಕರ್ಯ ಕಲ್ಪಿಸಲಾಗುವುದು ಎಂದರು.

ಅಂಜನಾದ್ರಿ ಅಭಿವೃದ್ಧಿಗೆ ಬಜೆಟ್‌ನಲ್ಲಿ ₹100 ಕೋಟಿ ಮೀಸಲಿಡಲಾಗಿದೆ. ಇನ್ನೂ ಹೆಚ್ಚಿನ ಹಣ ಅಗತ್ಯಬಿದ್ದಲ್ಲಿ ಸರ್ಕಾರ ಒದಗಿಸಲಿದೆ. ಮುಖ್ಯಮಂತ್ರಿಯವರು ಸದ್ಯ ಪ್ರವಾಹದಿಂದ ತೊಂದರೆಗೀಡಾದ ಸ್ಥಳಗಳಿಗೆ ಭೇಟಿ ಕೊಟ್ಟಿದ್ದಾರೆ. ಜು. 20ರೊಳಗೆ ಹೆಲಿಕ್ಯಾಪ್ಟರ್‌ ಮೂಲಕ ಅಂಜನಾದ್ರಿ ವೀಕ್ಷಿಸಿ, ಸಭೆ ನಡೆಸಿ ಸಲಹೆ ಸೂಚನೆ ಕೊಡುವರು ಎಂದು ಹೇಳಿದರು.

ಅಂಜನಾದ್ರಿಗೆ ನಿತ್ಯ ಸರಾಸರಿ ಐದು ಸಾವಿರ ಜನ ಭಕ್ತರು ಭೇಟಿ ಕೊಡುತ್ತಾರೆ. ವಾರಾಂತ್ಯಕ್ಕೆ ಈ ಸಂಖ್ಯೆ 25 ಸಾವಿರ ದಾಟುತ್ತದೆ. ಹಬ್ಬ ಹರಿದಿನ, ವಿಶೇಷ ಸಂದರ್ಭಗಳಲ್ಲಿ 50 ಸಾವಿರದ ವರೆಗೆ ಭಕ್ತರು ಬರುತ್ತಾರೆ. ಎಲ್ಲರಿಗೂ ಅಗತ್ಯ ಸೌಕರ್ಯ ಕಲ್ಪಿಸುವ ಅಗತ್ಯವಿದೆ ಎಂದು ತಿಳಿಸಿದರು.

ಕೊಪ್ಪಳ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್ ಪಿ., ವಿಜಯನಗರ ಎಸ್ಪಿ ಡಾ. ಅರುಣ್ ಕೆ., ಕೊಪ್ಪಳ ಎಸ್ಪಿ ಅರುಣಾಂಗ್ಷು ಗಿರಿ, ವಿಜಯನಗರ ಜಿ.ಪಂ. ಸಿಇಒ ಹರ್ಷಲ್ ಭೋಯರ್‌ ನಾರಾಯಣರಾವ್, ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ, ನಗರಸಭೆ ಅಧ್ಯಕ್ಷೆ ಸುಂಕಮ್ಮ ಇದ್ದರು.

ಸಾಧಕ–ಬಾಧಕ ಪರಿಶೀಲಿಸಿ ರೋಪ್‌–ವೇ

‘ಅಂಜನಾದ್ರಿ ಬೆಟ್ಟಕ್ಕೆ ರೋಪ್‌–ವೇ ಅಳವಡಿಸಲು ಉದ್ದೇಶಿಸಲಾಗಿದೆ. ‘ಐಡೆಕ್‌’ ಸಂಸ್ಥೆಯಿಂದ ಸಾಧಕ–ಬಾಧಕ ಅಧ್ಯಯನ ನಡೆಸಿದ ನಂತರ, ಟೆಂಡರ್‌ ಕರೆದು ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ (ಪಿ.ಪಿ.ಪಿ.) ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಆನಂದ್‌ ಸಿಂಗ್‌ ತಿಳಿಸಿದರು.

‘ಕೇಂದ್ರ ಸರ್ಕಾರವು ‘ಪರ್ವತ ಮಾಲಾ’ ಯೋಜನೆ ಅಡಿ ರಾಜ್ಯದಲ್ಲಿ ಅಂಜನಾದ್ರಿ ಮತ್ತು ಕೊಡಚಾದ್ರಿಗೆ ರೋಪ್ ವೇ ನಿರ್ಮಿಸಲು ಯೋಜಿಸಿ, ಟೆಂಡರ್ ಕರೆಯಲು ಉದ್ದೇಶಿಸಿದೆ. ಇದರ ಸಾಧಕ–ಬಾಧಕ ಪರಿಶೀಲನೆಗೆ ತಂಡ ಆಗಮಿಸಲಿದೆ’ ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ವೆಂಕಟೇಶ ತಿಳಿಸಿದಾಗ, ‘ಕೇಂದ್ರ ಸರ್ಕಾರದಿಂದ ರೋಪ್‌–ವೇ ನಿರ್ಮಿಸುವ ಅಗತ್ಯವಿಲ್ಲ. ರಾಜ್ಯ ಸರ್ಕಾರವೇ ಮಾಡಲಿದೆ. ಇದನ್ನು ಕೇಂದ್ರದ ಅಧಿಕಾರಿಗಳಿಗೆ ತಿಳಿಸಿ’ ಎಂದು ಆನಂದ್‌ ಸಿಂಗ್‌ ತಾಕೀತು ಮಾಡಿದರು.

35 ಕಿ.ಮೀ ರಸ್ತೆಗೆ ₹148 ಕೋಟಿ

‘ಅಂಜನಾದ್ರಿಗೆ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ 50ರ ಹಿಟ್ನಾಳ್‌ ಕ್ರಾಸ್‌ನಿಂದ ಗಂಗಾವತಿ ವರೆಗೆ 35 ಕಿ.ಮೀ ರಸ್ತೆಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಉದ್ದೇಶವಿದೆ. 148 ಎಕರೆ ಭೂಸ್ವಾಧೀನ ಸೇರಿ ಒಟ್ಟು ₹400 ಕೋಟಿ ವೆಚ್ಚವಾಗಲಿದೆ. ಇದರೊಂದಿಗೆ ದ್ವಿಪಥ ನಿರ್ಮಾಣಕ್ಕೆ ಸಂಬಂಧಿಸಿದಂತೆಯೂ ಡಿ.ಪಿ.ಆರ್‌. ಸಿದ್ಧಪಡಿಸಲು ಸೂಚಿಸಲಾಗಿದೆ. ಅಂತಿಮವಾಗಿ ಮುಖ್ಯಮಂತ್ರಿ ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುವರು’ ಎಂದು ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

‘ಹಿಟ್ನಾಳ್‌ ಕ್ರಾಸ್‌ನಿಂದ ಗಂಗಾವತಿ ವರೆಗೆ ಒಟ್ಟು 10 ಹಳ್ಳಿಗಳು ಬರುತ್ತವೆ. ಗ್ರಾಮಗಳ ಬಳಿ ದ್ವಿಪಥ ರಸ್ತೆ ನಿರ್ಮಿಸಲಾಗುತ್ತದೆ. ಇದರಿಂದ ಹೆಚ್ಚಿನ ಸಮಸ್ಯೆ ಆಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.