ಹೊಸಪೇಟೆ: ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ (ಹವಾಮ) ಸ್ಥಾಪನೆಯಾಗಿರುವುದೇ ಹಂಪಿ ಸುತ್ತಮುತ್ತಲಿನ ಯುನೆಸ್ಕೊ ಪಟ್ಟಿಯಲ್ಲಿರುವ ಸ್ಮಾರಕಗಳ ಸಂರಕ್ಷಣೆಗೆ, ಆದರೆ ಕಮಲಾಪುರದಲ್ಲಿರುವ ಅದರ ಕಚೇರಿಯ ಬಳಿಯಲ್ಲೇ ಅನಧಿಕೃತ ಹೋಟೆಲ್ ನಿರ್ಮಾಣ ಯತ್ನ ನಡೆದು ಇಡೀ ವ್ಯವಸ್ಥೆಯನ್ನೇ ಅಣಕಿಸಿದೆ.
ರೈತರ ಕೃಷಿ ಜಮೀನಿನಲ್ಲಿ ಅನಧಿಕೃತವಾಗಿ ಹೋಟೆಲ್, ಹೋಂ ಸ್ಟೇ ನಿರ್ಮಿಸುವ ದಂಧೆ ಹಂಪಿ ಭಾಗದಲ್ಲಿ ಹಲವು ವರ್ಷಗಳಿಂದ ನಡೆದಿದ್ದು, ‘ಹವಾಮ‘ ನೋಟಿಸ್ ನೀಡಿದರೂ ಅದಕ್ಕೆ ಕಿಮ್ಮತ್ತು ಕೊಡದ ಸ್ಥಿತಿ ಇದೆ. ‘ಹವಾಮ’ ಕಚೇರಿ ಬಳಿ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಯಿಂದ (ಜೆಸ್ಕಾಂ) ವಿದ್ಯುತ್ ಸಂಪರ್ಕ ಪಡೆದು ಅಕ್ರಮ ಹೋಟೆಲ್ ನಿರ್ಮಿಸಲು ಯತ್ನಿಸಿದಾಗ ಗುರುವಾರ ಅದನ್ನು ವಿಫಲಗೊಳಿಸಲಾಗಿದ್ದು, ಪುರಸಭೆಯ ಜೆಸಿಬಿ ವಾಹನ ನೆರವು ಪಡೆದು ಅಕ್ರಮ ಕಟ್ಟಡ ತೆರವುಗೊಳಿಸಲಾಯಿತು.
‘ಹವಾಮ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ನೀಡುವುದಕ್ಕೆ ಮೊದಲು ನಮ್ಮ ಅನುಮತಿ ಕಡ್ಡಾಯ, ಈ ಬಗ್ಗೆ ಜೆಸ್ಕಾಂಗೆ ಹಲವು ಬಾರಿ ಸೂಚನೆ ನೀಡಲಾಗಿದ್ದರೂ ಅವರು ವಿದ್ಯುತ್ ಸಂಪರ್ಕ ನೀಡುತ್ತಲೇ ಇದ್ದಾರೆ, ಸಮಸ್ಯೆಯ ಮೂಲ ಇದುವೇ’ ಎಂದು ‘ಹವಾಮ’ ಆಯುಕ್ತ ರಮೇಶ್ ವಟಗಲ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಮ್ಮ ವ್ಯಾಪ್ತಿಯಲ್ಲಿ ಕೋರ್, ಬಫರ್, ಪೆರಿಫೆರಲ್ ಎಂಬ ಮೂರು ವಲಯಗಳಿವೆ. ಕೋರ್ ವಲಯದಲ್ಲಿ 14, ಬಫರ್ ವಲಯದಲ್ಲಿ 5 ಮತ್ತು ಪೆರಿಫೆರಲ್ ವಲಯದಲ್ಲಿ 2 ಅನಧಿಕೃತ ಹೋಂಸ್ಟೇ, ಹೋಟೆಲ್ ನಿರ್ಮಿಸಿ ಕಾರ್ಯಾಚರಿಸಲಾಗುತ್ತಿದೆ. ಸ್ವತಃ ಗ್ರಾಮ ಪಂಚಾಯಿತಿ ಅಧ್ಯಕ್ಷರೇ ಅನಧಿಕೃತ ಹೋಂಸ್ಟೇ ನಡೆಸುತ್ತಿದ್ದಾರೆ. ಎಲ್ಲರಿಗೂ ನೋಟಿಸ್ ನೀಡಲಾಗಿದೆ, ಕೆಲವೊಂದನ್ನು ನೆಲಸಮಗೊಳಿಸಲಾಗಿದೆ. ಆದರೆ ಮತ್ತೆ ಅದೇ ಸ್ಥಳದಲ್ಲಿ ಅವುಗಳು ತಲೆ ಎತ್ತಿವೆ’ ಎಂದು ಅವರು ಅಸಹಾಯಕತೆ ತೋಡಿಕೊಂಡರು.
‘ಜೆಸ್ಕಾಂ, ಗ್ರಾಮ ಪಂಚಾಯಿತಿಗಳು ನಮ್ಮೊಂದಿಗೆ ಸಹಕರಿಸಿದರೆ ಹಂಪಿ ಸುತ್ತಮುತ್ತ ಯಾವ ಅನಧಿಕೃತ ಕಟ್ಟಡವೂ ತೆಲೆ ಎತ್ತಲು ಸಾಧ್ಯವಿಲ್ಲ. ಆದರೆ ಅದು ಆಗುತ್ತಿಲ್ಲ. ಗ್ರಾಮ ಪಂಚಾಯಿತಿಗಳು ಖಾತೆ ನಂಬರ್ ಕೊಡಬಾರದು ಎಂಬ ನಿಯಮ ಇದ್ದರೂ ಕೊಡುತ್ತಿದ್ದಾರೆ, ಇದರಿಂದ ಅನಧಿಕೃತ ಕಟ್ಟಡ ನಿರ್ಮಿಸಿಕೊಂಡವರು ಕೋರ್ಟ್‌ನಿಂದ ತಡೆಯಾಜ್ಞೆ ತರುವುದು ಸಾಧ್ಯವಾಗುತ್ತಿದೆ. ಜಿಲ್ಲಾಧಿಕಾರಿ ಅವರಿಂದಲೇ ಸೂಚನೆ ಬಂದರೂ ಈ ಎರಡು ಇಲಾಖೆಗಳು ಸ್ಪಂದಿಸುತ್ತಲೇ ಇಲ್ಲ’ ಎಂದು ಆಯುಕ್ತರು ಬೇಸರಪಟ್ಟರು.
‘ಹವಾಮ’ ದಾಖಲೆ ಪ್ರಕಾರ ಹಂಪಿ ಸುತ್ತಮುತ್ತ ಅಧಿಕೃತ ಪರವಾನಗಿ ಪಡೆದು ನಡೆಯುತ್ತಿರುವ ಒಂದೇ ಒಂದು ಹೋಂಸ್ಟೇ ಇಲ್ಲ. ಪರವಾನಗಿ ಪಡೆದ ಹೋಟೆಲ್‌ಗಳ ಸಂಖ್ಯೆ ಕೇವಲ 12. ಆದರೆ ಇಲ್ಲಿ 21ಕ್ಕೂ ಅಧಿಕ ಅನಧಿಕೃತ ಹೋಟೆಲ್‌ಗಳು, ಹೋಂಸ್ಟೇಗಳಿದ್ದು, ಅವುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸ್ಥಿತಿಯಲ್ಲಿ ‘ಹವಾಮ’ ಸದ್ಯ ಇಲ್ಲವಾಗಿದೆ.
ಅನಧಿಕೃತ ಹೋಂಸ್ಟೇ, ಹೋಟೆಲ್‌ಗಳು 21 ಕೋರ್ ವಲಯ–14, ಬಫರ್–5, ಪೆರಿಫೆರಲ್–2 ಸ್ವತಃ ಗ್ರಾ.ಪಂ.ಅಧ್ಯಕ್ಷರಿಂದಲೇ ಅನಧಿಕೃತ ಹೋಂಸ್ಟೇ
ಜೆಸ್ಕಾಂ ಗ್ರಾಮ ಪಂಚಾಯಿತಿಗಳು ಒಂದಿಷ್ಟು ನಿಯಮ ಪಾಲಿಸಿದರೆ ಅಕ್ರಮ ನಿರ್ಮಾಣ ಕಾರ್ಯಗಳಿಗೆ ಕಡಿವಾಣ ನಿಶ್ಚಿತ. ಇನ್ನಾದರೂ ‘ಹವಾಮ’ ಜತೆಗೆ ಸಹಕರಿಸಲಿರಮೇಶ್ ವಟಗಲ್ ‘ಹವಾಮ’ ಆಯುಕ್ತ
‘ಹವಾಮ’ದಿಂದ ನಮಗೆ ಇದುವರೆಗೆ ಲಿಖಿತ ರೂಪದ ಷರತ್ತುಗಳನ್ನು ನೀಡಿಲ್ಲ. ನೀಡಿದರೆ ಅದರಂತೆ ಕ್ರಮ ಕೈಗೊಳ್ಳುತ್ತೇವೆ ಮತ್ತು ವಿದ್ಯುತ್ ಸಂಪರ್ಕ ಕೊಡುವುದಿಲ್ಲದಯಾನಂದ ಎಇಇ ಜೆಸ್ಕಾಂ
‘ಹವಾಮ’ ಬಳಿ ಸಿಬ್ಬಂದಿ ಪರಿಕರ ಇಲ್ಲ ಅನಧಿಕೃತ ಕಟ್ಟಡ ತಲೆ ಎತ್ತದಂತೆ ಮೊದಲಾಗಿ ನೋಡಿಕೊಳ್ಳಬೇಕಿರುವುದು ಸ್ಥಳೀಯ ಗ್ರಾಮ ಪಂಚಾಯಿತಿ. ಆದರೆ ಅಲ್ಲಿಂದಲೇ ಅಕ್ರಮ ಆರಂಭವಾಗುತ್ತಿದೆ. ಅನಧಿಕೃತ ಕಟ್ಟಡ ತೆರವಿಗೆ ‘ಹವಾಮ’ ಬಳಿ ಸಿಬ್ಬಂದಿ ಇಲ್ಲ ಜೆಸಿಬಿ ಟ್ರ್ಯಾಕ್ಟರ್‌ನಂತಹ ಪರಿಕರಗಳೂ ಇಲ್ಲ. ಹೀಗಾಗಿ ನೋಟಿಸ್ ನೀಡಿ ಕುಳಿತುಕೊಳ್ಳುವ ಸ್ಥಿತಿ ಬಂದಿದೆ.
ಹಂಪಿಯ ಸೌಂದರ್ಯಕ್ಕೆ ಧಕ್ಕೆ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿ ಇಂದು ‘ಹಾಳು ಹಂಪಿ’ ಎಂಬ ಹಣೆಪಟ್ಟಿ ಪಡೆದಿದೆ. ಹೀಗಿದ್ದರೂ ಹಂಪಿಯ ಸೌಂದರ್ಯ ಇರುವುದೇ ಅದರ ಕಲ್ಲಿನ ರಚನೆಗಳಲ್ಲಿ. ಇಂತಹ ಸ್ಮಾರಕಗಳ ಸೌಂದರ್ಯಕ್ಕೆ ಧಕ್ಕೆ ಆಗಬಾರದು ಎಂಬ ಕಾರಣಕ್ಕೆ ಸಿಮೆಂಟ್ ಕಾಂಕ್ರೀಟ್ ಕಟ್ಟಡಗಳ ನಿರ್ಮಾಣಕ್ಕೆ ಇಲ್ಲಿ ಸಂಪೂರ್ಣ ನಿರ್ಬಂಧ ಇದೆ. ಕಟ್ಟಿಗೆ ಕಲ್ಲು ಮಣ್ಣಿನ ರಚನೆಗಳಿಗಷ್ಟೇ ಅವಕಾಶ ಇದೆ. ಆದರೆ ಇಲ್ಲೂ ಅಧಿಕೃತ ಅನುಮತಿ ಪಡೆಯುವುದು ಕಡ್ಡಾಯ. ಅದನ್ನು ಉಲ್ಲಂಘಿಸುವ ಯತ್ನ ನಡೆಯುತ್ತಲೇ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.