ADVERTISEMENT

ನಾಡೋಜ ವಿವಾದ: ವಿವಿಗೆ ಕಳಂಕ?

ಸಿಂಡಿಕೇಟ್ ಸದಸ್ಯರ ವಿರೋಧ– ರಾಜ್ಯಪಾಲರದ್ದೇ ನಿರ್ಧಾರ ಎಂದ ಕುಲಪತಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 4:24 IST
Last Updated 24 ಫೆಬ್ರುವರಿ 2026, 4:24 IST
ಸಿ.ಪಿ.ಶಿವಚಂದ್ರ
ಸಿ.ಪಿ.ಶಿವಚಂದ್ರ   

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯ ಈ ಬಾರಿ ಇಬ್ಬರು ಹಿರಿಯ ಶಿಕ್ಷಣ ತಜ್ಞರು, ಸಾಹಿತ್ಯ ದಿಗ್ಗಜರ ಜತೆಗೆಯಲ್ಲಿ ಸಮಾಜ ಸೇವೆಗಾಗಿ ಎಚ್.ಸಿ.ಸತ್ಯನ್‌ ಅವರಿಗೆ ಸಹ ನಾಡೋಜ ಗೌರವ ಸಲ್ಲಿಸುತ್ತಿದ್ದು, ಇದು ವಿವಾದಕ್ಕೆ ಎಡೆಮಾಡುವ ಲಕ್ಷಣ ಕಾಣಿಸಿದೆ. ಸಿಂಡಿಕೇಟ್ ಸದಸ್ಯರ ತೀವ್ರ ವಿರೋಧದ ನಡುವೆಯೂ, ರಾಜ್ಯಪಾಲರನ್ನೇ ಬೆಟ್ಟುಮಾಡಿ ತೋರಿಸಿ ಆಯ್ಕೆಯನ್ನು ಸಮರ್ಥಿಸಿಕೊಳ್ಳಲಾಗಿದೆ.

ಸೋಮವಾರ ಕ್ಯಾಂಪಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ, ರಾಜ್ಯಪಾಲರಿಗೆ ಬಂದ ಎರಡು ದೂರಿನ ಕುರಿತು ಮಾಹಿತಿ ನೀಡಲಾಗಿದೆ, ಅವರಿಂದ ಬಂದ ಸೂಚನೆಯಂತೆ ನಾಡೋಜ ಗೌರವವನ್ನು ಸತ್ಯನ್ ಅವರಿಗೆ ಸಲ್ಲಿಸಲಾಗುತ್ತಿದೆ ಎಂದರು.

ಈ ಪತ್ರಿಕಾಗೋಷ್ಠಿಗೆ ಮೊದಲು ಸಿಂಡಿಕೇಟ್ ಸಭೆ ನಡೆದಿತ್ತು. ಎಂಟು ಮಂದಿಯ ಪೈಕಿ ಐವರು ಹಾಜರಿದ್ದರು. ಅವರೆಲ್ಲರೂ ಸತ್ಯನ್‌ ಆಯ್ಕೆಯನ್ನು ಬಲವಾಗಿ ವಿರೋಧಿಸಿದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ಮುಕ್ರಿ ಸಮುದಾಯದ ಯುವಕನ ಸಾಧನೆ: ಉತ್ತರ ಕನ್ನಡ ಜಿಲ್ಲೆಯ ಶರಾವತಿ, ಅಘನಾಶಿನಿ ನಡುವಿನ ಪ್ರದೇಶದಲ್ಲಿ ವಾಸಿಸುವ ಮುಕ್ರಿ ಸಮುದಾಯ ಕೇವಲ 10 ಸಾವಿರ ಜನಸಂಖ್ಯೆ ಇರುವ ಅತ್ಯಂತ ಸಣ್ಣ ಅಲೆಮಾರಿ ಸಮುದಾಯ. ಇದು ಅಳಿವಿನಂಚಿನಲ್ಲಿರುವ ಸಮುದಾಯವೂ ಹೌದು. ಅಲ್ಲಿಂದ ಬಂದು ಪಿಎಚ್‌.ಡಿ ಪದವಿ ಗಳಿಸುತ್ತಿರುವ ಸಿ.ಪಿ.ಶಿವಚಂದ್ರ ಅವರು ವಿಶ್ವವಿದ್ಯಾಲಯದ ಹೆಮ್ಮೆ ಎನಿಸಿದ್ದಾರೆ. ಅನೇಕ ಕುಟುಂಬಗಳಲ್ಲಿ ಮೊದಲ ತಲೆಮಾರಿನ ವಿದ್ಯಾರ್ಥಿಗಳೇ ಪಿಎಚ್.ಡಿ. ಪಡೆದ ನಿದರ್ಶನ ಹೆಚ್ಚಿದ್ದು, ಅದಕ್ಕೆ ಈಗ ಹೊಸ ಸೇರ್ಪಡೆಯಾಗಿ ಶಿವಚಂದ್ರ ಇದ್ದಾರೆ ಎಂದು ಕುಲಪತಿ ಹೇಳಿದರು.

ಪಿಎಚ್‌.ಡಿ ಪಡೆಯುತ್ತಿರುವ 107 ಮಂದಿಯಲ್ಲಿ 74 ಮಂದಿ ಯುವಕರು ಮತ್ತು 33 ಮಂದಿ ಯುವತಿಯರು. ವಿದ್ಯಾರಣ್ಯ ಕ್ಯಾಂಪಸ್‌ನಲ್ಲಿ 86 ಮಂದಿ ಹಾಗೂ ಹೊರಗಿನ ಮಾನ್ಯತಾ ಕೇಂದ್ರಗಳಲ್ಲಿ 21 ಮಂದಿ ಪಿಎಚ್‌.ಡಿ ಗಳಿಸಿದ್ದಾರೆ. ಪರಿಶಿಷ್ಟ ಜಾತಿಯ 26, ಪಂಗಡದ 19, ಪ್ರವರ್ಗ 1ರ 8, 2ಎ 22, 2ಬಿ 1, 3ಎ 4, 3ಬಿ 14, ಸಾಮಾನ್ಯ 13 ಮಂದಿ ಪಿಎಚ್‌.ಡಿ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.

ಅತಿ ಹೆಚ್ಚು ಸಂಶೋಧನೆ: ಮಹಿಳೆಯರ ಕುರಿತು ಅತಿ ಹೆಚ್ಚು ಅಂದರೆ 10 ಸಂಶೋಧನೆಗಳು ನಡೆದಿವೆ. ಉಳಿದಂತೆ ದಲಿತರ ಬದುಕು ಬವಣೆ ಕುರಿತು 4, ನಿರ್ಲಕ್ಷಿತ ಸಮುದಾಯಗಳ ಕುರಿತು 3, ರೈತರು ಮತ್ತು ಕೃಷಿಕರು ಕುರಿತು 9 ಸಂಶೋಧನಾ ಪ್ರಬಂಧಗಳನ್ನು ಸಿದ್ಧಪಡಿಸಿ ಪಿಎಚ್‌.ಡಿ ಪಡೆಯಲಾಗಿದೆ ಎಂದರು.

ರಾಜ್ಯಪಾಲರ ಭೇಟಿ: ರಾಜ್ಯಪಾಲರ ಥಾವರಚಂದ್‌ ಗೆಹಲೋತ್ ಅವರು ನುಡಿಹಬ್ಬದ ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್‌ ಪಿಎಚ್‌.ಡಿ ಪದವಿ ಪ್ರದಾನ ಮಾಡುವರು. ವಿಶ್ರಾಂತ ಪ್ರಾಧ್ಯಾಪಕ ಕೆ.ಮರುಳಸಿದ್ದಪ್ಪ ಘಟಿಕೋತ್ಸವ ಭಾಷಣ ಮಾಡುವರು ಎಂದು ಕುಲಪತಿ ಮಾಹಿತಿ ನೀಡಿದರು.

ಕುಲಸಚಿವ ಪ್ರೊ.ವಿರೂಪಾಕ್ಷ ಪೂಜಾರಹಳ್ಳಿ, ಅಧ್ಯಯನಾಂಗದ ನಿರ್ದೇಶಕ ಪ್ರೊ.ಅಮರೇಶ ಯತಗಲ್‌, ಹಣಕಾಸು ಅಧಿಕಾರಿ ಪ್ರೊ.ಎ.ಶ್ರೀಧರ, ವಿವಿಧ ವಿಭಾಗಗಳ ಡೀನ್‌ಗಳಾದ ಪ್ರೊ.ಮಾಧವ ಪೆರಾಜೆ, ಪ್ರೊ.ಎಚ್‌.ಡಿ.ಪ್ರಶಾಂತ್‌, ಪ್ರೊ.ಶಿವಾನಂದ ಎಸ್.ವಿರಕ್ತಮಠ, ಪ್ರೊ.ಶೈಲಜಾ ಇಂ.ಹಿರೇಮಠ, ಪ್ರೊ.ಅಶೋಕ್‌ಕುಮಾರ್ ರಂಜೇರೆ, ಪ್ರೊ.ಇ.ಯರ್ರಿಸ್ವಾಮಿ, ಪ್ರೊ.ಎಸ್‌.ವೈ.ಸೋಮಶೇಖರ್ ಇತರರು ಇದ್ದರು.

ಪ್ರೊ.ಡಿ.ವಿ.ಪರಮಶಿವಮೂರ್ತಿ
ಹಂಪಿ ಕನ್ನಡ ವಿಶ್ವವಿದ್ಯಾಲಯ

ಇವರು ನಾಡೋಜ ಪುರಸ್ಕೃತರು

ಪ್ರೊ.ಜಿ.ರಾಮಕೃಷ್ಣ

ಜಿ.ರಾಮಕೃಷ್ಣ ಕನ್ನಡದ ಪ್ರಮುಖ ವಿದ್ವಾಂಸರು ಮತ್ತು ಲೇಖಕರು. ಮಾರ್ಕ್ಸ್‌ವಾದಿ ಚಿಂತಕರು  ಶಿಕ್ಷಣ ತಜ್ಞರು. ಕನ್ನಡ ಸಾಹಿತ್ಯ ವೈಚಾರಿಕ ಹಾಗೂ ವೈಜ್ಞಾನಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಇಂಗ್ಲಿಷ್ ಸಂಸ್ಕೃತ  ಕನ್ನಡದಲ್ಲಿ ಪಾಂಡಿತ್ಯ ಹೊಂದಿರುವವರು. ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ 30 ವರ್ಷಗಳ ಕಾಲ ಇಂಗ್ಲಿಷ್  ಪ್ರಾಧ್ಯಾಪಕರಾಗಿದ್ದರು. ಹಲವು ಕೃತಿಗಳನ್ನು ರಚಿಸಿದ್ದಾರೆ.

ಪ್ರೊ.ಸಿ.ಮಹಾದೇವಪ್ಪ

ಪ್ರೊ.ಸಿ.ಮಹಾದೇವಪ್ಪ ಅವರಿಗೆ ಈಗ 104 ವರ್ಷ ವಯಸ್ಸು. ಕನ್ನಡದ ಪ್ರಖಾಂಡ ಪಂಡಿತರು. ಆರಂಭದಲ್ಲಿ ಮೈಸೂರಿನ ಓರಿಯಂಟಲ್ ಲೈಬ್ರರಿಯಲ್ಲಿ ಕನ್ನಡ ಓಲೆಗರಿಗಳಿಂದ ಪ್ರತಿಮಾಡುವ ಕೆಲಸಕ್ಕೆ ಸೇರಿಕೊಂಡು ಮೈಸೂರಿನ ಯುವರಾಜ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು.  ಚಿಕ್ಕಮಗಳೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಬೆಂಗಳೂರಿನ ಮಹಾರಾಣಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಂತರ ತುಮಕೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಹಸ್ತಪ್ರತಿ ಗ್ರಂಥಸಂಪಾದನೆ ಸಂಶೋಧನೆ ಅಧ್ಯಯನ ಅಧ್ಯಾಪನ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆ. 

 ಸತ್ಯನ್

ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತರಾಗಿದ್ದ ಎಚ್.ಸಿ.ಸತ್ಯನ್ ಅವರು ದಕ್ಷ ಆಡಳಿತಗಾರರೆಂದೇ ಹೆಸರಾದವರು.  ತಮ್ಮ ಸೇವಾ ಅವಧಿಯಲ್ಲಿ ಗ್ರಾಮ ಪಂಚಾಯತಿಯಿಂದ ಹೈಕೋರ್ಟ್‌ವರೆಗೆ  ಅನೇಕ ವ್ಯಾಜ್ಯಗಳನ್ನು ಸಂವಿಧಾನಾತ್ಮಕವಾಗಿ ಬಗೆಹರಿಸಿದವರು.  30 ವರ್ಷಗಳ ಕಾಲ ಸಾರಿಗೆ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಕೆಲಸ ಮಾಡಿದ್ದ ಇವರು ಬೆಂಗಳೂರು ಬಿಬಿಎಂಪಿ ಮೈಸೂರು ಮತ್ತು ಹಾಸನ ಪ್ರದೇಶಗಳಲ್ಲಿ ವರ್ಷಕ್ಕೆ ಎರಡು ಬಾರಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಸದಸ್ಯರಿಗೆ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಾಗಲು ಅನುವು ಮಾಡಿಕೊಡಲು ಚಾಲನಾ ತರಬೇತಿ ಶಿಬಿರಗಳನ್ನು ನಡೆಸಿ  ಉದ್ಯೋಗಾವಕಾಶಗಳನ್ನು ಒದಗಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.