ADVERTISEMENT

ಹಂಪಿ ಮಾಸ್ಟರ್‌ ಪ್ಲ್ಯಾನ್‌ ಸಂಪೂರ್ಣ ಬದಲು

₹28 ಕೋಟಿಯ ಥ್ರೀ ಸ್ಟಾರ್‌ ಹೋಟೆಲ್‌ ನಿರ್ಮಾಣಕ್ಕೆ ಸಚಿವ ಆನಂದ್‌ ಸಿಂಗ್‌ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 7:32 IST
Last Updated 21 ಏಪ್ರಿಲ್ 2022, 7:32 IST
ಕಮಲಾಪುರದಲ್ಲಿ ಥ್ರೀ ಸ್ಟಾರ್‌ ಹೋಟೆಲ್‌ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ ನಂತರ ಸಚಿವ ಆನಂದ್‌ ಸಿಂಗ್‌ ಅವರು ಸ್ಥಳ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು
ಕಮಲಾಪುರದಲ್ಲಿ ಥ್ರೀ ಸ್ಟಾರ್‌ ಹೋಟೆಲ್‌ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ ನಂತರ ಸಚಿವ ಆನಂದ್‌ ಸಿಂಗ್‌ ಅವರು ಸ್ಥಳ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು   

ಹೊಸಪೇಟೆ (ವಿಜಯನಗರ): ‘ಬರುವ 4–5 ತಿಂಗಳಲ್ಲಿ ಹಂಪಿ ಮಾಸ್ಟರ್‌ ಪ್ಲ್ಯಾನ್‌ ಸಂಪೂರ್ಣ ಬದಲಾಗಲಿದೆ’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ತಾಲ್ಲೂಕಿನ ಕಮಲಾಪುರದಲ್ಲಿ ಬುಧವಾರ ಪ್ರವಾಸೋದ್ಯಮ ಇಲಾಖೆಯ ಥ್ರೀ ಸ್ಟಾರ್‌ ಹೋಟೆಲ್‌ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘14 ವರ್ಷಗಳ ಹಿಂದೆ ಅವೈಜ್ಞಾನಿಕವಾಗಿ ಹಂಪಿ ಮಾಸ್ಟರ್‌ ಪ್ಲ್ಯಾನ್‌ ಮಾಡಲಾಗಿತ್ತು. ಈ ಸಲ ಅದು ಪೂರ್ಣವಾಗಿ ಬದಲಾಗಲಿದೆ. ಕೋರ್‌ ಜೋನ್‌ ಈ ಹಿಂದಿನಂತೆ ಇರಲಿದೆ. ಪೆರಿಫೆರಲ್‌ ಮತ್ತು ಬಫರ್‌ ಜೋನ್‌ನಲ್ಲಿ ಬದಲಾವಣೆಗೆ ಜನಪ್ರತಿನಿಧಿಗಳು ಮನವಿ ಮಾಡಿದ್ದರು. ಅದಕ್ಕೆ ಸ್ಪಂದನೆ ಸಿಕ್ಕಿದೆ’ ಎಂದು ಹೇಳಿದರು.

‘ಪೆರಿಫೆರಲ್‌, ಬಫರ್‌ ಜೋನ್‌ನಲ್ಲಿ ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುವುದು. ಕರಕುಶಲ ವಸ್ತುಗಳ ಬಜಾರ್‌ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಹಂಪಿ ಸುತ್ತಮುತ್ತ ಮುಚ್ಚಿಸಿರುವ 30ರಿಂದ 35 ಹೋಂ ಸ್ಟೇಗಳನ್ನು ತೆರೆಯಲು ಸೂಚಿಸಲಾಗಿದ್ದು, ಇಷ್ಟರಲ್ಲೇ ಎಲ್ಲ ಆರಂಭಗೊಳ್ಳುತ್ತವೆ’ ಎಂದರು.

ADVERTISEMENT

‘ಹಂಪಿ, ಅಂಜನಾದ್ರಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಬೇಕೆಂಬ ಬೇಡಿಕೆ ಇದೆ. ಅಂಜನಾದ್ರಿಗೆ ಪ್ರತ್ಯೇಕ ಪ್ರಾಧಿಕಾರ ಮಾಡುವುದರಿಂದ ಅಲ್ಲಿನ ಜನರು ಹಂಪಿ, ಹೊಸಪೇಟೆಗೆ ಬರುವುದು ತಪ್ಪುತ್ತದೆ. ಜನರಿಗೆ ಅನುಕೂಲವಾದರೆ ಪ್ರತ್ಯೇಕ ಮಾಡುವುದರಲ್ಲಿ ತಪ್ಪೇನಿಲ್ಲ. ಅಂಜನಾದ್ರಿ ಅಭಿವೃದ್ಧಿಗೆ ಮುಖ್ಯಮಂತ್ರಿ ವಿಶೇಷ ಆಸಕ್ತಿ ತೋರಿಸಿದ್ದು, ಇಷ್ಟರಲ್ಲೇ ಕೆಲಸಗಳು ಆರಂಭವಾಗಲಿವೆ’ ಎಂದು ತಿಳಿಸಿದರು.

ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಟಿ.ವೆಂಕಟೇಶ್, ಅರಣ್ಯ ವಸತಿ ಮತ್ತು ವಿಹಾರಧಾಮ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಿ.ಜಗದೀಶ್, ಇಲಾಖೆಯ ಉಪನಿರ್ದೇಶಕ ಎಸ್.ತಿಪ್ಪೇಸ್ವಾಮಿ, ಕಮಲಾಪುರ ಪಟ್ಟಣ ಪಂಚಾಯತಿ ಅಧ್ಯಕ್ಷ ಸೈಯದ್‌ ಅಮಾನುಲ್ಲಾ, ಮುಖ್ಯಾಧಿಕಾರಿ ನಾಗೇಶ ಇದ್ದರು.

ಹೇಗಿರಲಿದೆ ಥ್ರೀ ಸ್ಟಾರ್‌ ಹೋಟೆಲ್‌?

ಕಮಲಾಪುರದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದ ಎದುರಿನ 15 ಎಕರೆ ಜಮೀನಿನಲ್ಲಿ ₹28.20 ಕೋಟಿಯಲ್ಲಿ ಹೋಟೆಲ್‌ ನಿರ್ಮಾಣವಾಗಲಿದೆ. 100 ಕೊಠಡಿ, ಜಿಮ್, ರೆಸ್ಟೊರೆಂಟ್, ಸ್ಪಾ, ಈಜುಕೊಳ, ಬ್ಯಾಂಕ್ವೆಟ್‌ ಹಾಲ್‌ ಸೇರಿದಂತೆ ಇತರೆ ಸೌಕರ್ಯಗಳು ಇರಲಿವೆ. ವಿಜಯನಗರ, ಹೊಯ್ಸಳ ವಾಸ್ತುಶಿಲ್ಪದ ಮಾದರಿಯಲ್ಲಿ ಕಟ್ಟಡ ತಲೆ ಎತ್ತಲಿದೆ.

‘12ರಿಂದ 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಬಜೆಟ್‌ ಹೋಟೆಲ್‌ ಇದಾಗಿದ್ದು, ಪ್ರವಾಸಿಗರಿಗೆ ಅನುಕೂಲವಾಗಲಿದೆ. ಹಂಪಿ, ಅಂಜನಾದ್ರಿ, ಪಂಪಾ ಸರೋವರ, ಟಿ.ಬಿ. ಡ್ಯಾಂ, ಗಮನದಲ್ಲಿ ಇಟ್ಟುಕೊಂಡು ಹೋಟೆಲ್‌ ನಿರ್ಮಿಸಲಾಗುತ್ತಿದೆ’ ಎಂದು ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.