ಹೊಸಪೇಟೆ: ಪ್ರವಾಸಿಗರ ವಾಹನ ನಿಲುಗಡೆ ಸ್ಥಳ ಸಮತಟ್ಟುಗೊಳಿಸದೆ, ವಾಹನಗಳಿಗೆ ರಕ್ಷಣೆ ಒದಗಿಸದೆ ಇದ್ದರೂ ಶುಲ್ಕ ವಿಧಿಸುವುದು, ಸ್ಮಾರಕ ನೋಡದೆ, ನಿಲುಗಡೆಯೂ ಮಾಡದೆ ಕೇವಲ ರಸ್ತೆಯಲ್ಲೇ ಸಂಚರಿಸುವ ವಾಹನಗಳಿಗೂ ಶುಲ್ಕ ವಿಧಿಸುವ ಕ್ರಮ ಹಂಪಿಯಲ್ಲಿ ಆರಂಭವಾಗಿದೆ.
ಸೈಕಲನ್ನು ಸಹ ಬಿಡದೆ ಶುಲ್ಕ ಆಕರಿಸುವ ಪದ್ಧತಿಗೆ ಎಲ್ಲೆಡೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಹಲವು ಮಂದಿ ಇದೀಗ ಶುಲ್ಕ ಆಕರಿಸುವ ಮಂದಿಯ ಜತೆಗೆ ಗಲಾಟೆಯನ್ನೂ ಮಾಡಿದ್ದಾರೆ. ಆದರೆ ಪಾರ್ಕಿಂಗ್ ಟೆಂಡರ್ ಪಡೆದಿರುವ ಗುತ್ತಿಗೆದಾರರು ಯಾವ ರಿಯಾಯಿತಿಯನ್ನೂ ತೋರಿಸದೆ ಶುಲ್ಕ ಪಡೆದೇ ವಾಹನಗಳನ್ನು ಮುಂದಕ್ಕೆ ಕಳುಹಿಸುತ್ತಿದ್ದಾರೆ.
‘ಉಗ್ರ ನರಸಿಂಹ ಸಮೀಪದ ಪಾರ್ಕಿಂಗ್ ಸ್ಥಳದಲ್ಲಿ ಅದೆಷ್ಟು ಗುಂಡಿ ಇದೆ ನೋಡಿ, ಒಂದಿಷ್ಟು ಕಲ್ಲು, ಮಣ್ಣು ಹಾಕಿಲ್ಲ, ಹಾಗಿದ್ದರೂ ವಾಹನಗಳು ಶುಲ್ಕ ಪಾವತಿಸಲೇಬೇಕು. ಸ್ಥಳೀಯ ಫೋಟೊಗ್ರಾಫರ್‌ಗಳೇ ಹಂಪಿಯ ರಾಯಭಾರಿಗಳು, ಅವರಿಗೂ ಶುಲ್ಕ ವಿಧಿಸಲಾಗುತ್ತಿದೆ. ಸ್ಥಳೀಯ ಆಟೋಗಳನ್ನೂ ಬಿಟ್ಟಿಲ್ಲ. ಈ ವ್ಯವಸ್ಥೆಗೆ ಏನೆನ್ನಬೇಕು’ ಎಂದು ಬೆಂಗಳೂರಿನ ಪ್ರವಾಸಿಗ ನಾಗರಾಜ ಗಾನದಾಲ್, ಸ್ಥಳೀಯ ಛಾಯಾಗ್ರಾಹಕ ಆರ್.ಮಂಜಪ್ಪ ಕೇಳಿದರು.
ಹಂಪಿಗೆ ಸುತ್ತಮುತ್ತಲಿನ ಊರಿನವರೂ ಬರುತ್ತಾರೆ, ಅವರಿಂದಲೂ ಶುಲ್ಕ ಆಕರಿಸಲಾಗುತ್ತಿದೆ, ಎಲ್ಲರಿಗೂ ಒಂದೇ ಮಾನದಂಡವಾದರೆ ಹಂಪಿಯ ಪ್ರವಾಸೋದ್ಯಮ ಉದ್ಧಾರ ಆದಂತೆಯೇ ಎಂದು ಸಮೀಪದ ಹೊಸಳ್ಳಿ ನಿವಾಸಿ ಜಂಬಣ್ಣ ಮೆಟ್ರಿ ಹೇಳಿದರು.
ಎಎಸ್‌ಐ ಸಮರ್ಥನೆ: ‘ಪಾರ್ಕಿಂಗ್ ಶುಲ್ಕ ವಿಧಿಸಿದ್ದು ಅಭಿವೃದ್ಧಿ ಕಾರ್ಯಗಳಿಗೆ ಹೊರತು ಜೇಬಲ್ಲಿ ಇಟ್ಟು ನಮ್ಮ ಮನೆಗೆ ಸಾಗಿಸುವುದಕ್ಕಲ್ಲ. ಪಾರ್ಕಿಂಗ್ ಸ್ಥಳಗಳಲ್ಲಿ ನೆಲ ಸಮತಟ್ಟುಗೊಳಿಸುವುದು ಸಹಿತ ಕೆಲವು ಮೂಲಸೌಲಭ್ಯ ಅಭವೃದ್ಧಿ ಮಾಡಬೇಕಿರುವುದು ನಿಜ, ಮೇಲಧಿಕಾರಿಗಳ ಅನುಮತಿ ಪಡೆದು ಕೆಲಸ ಮಾಡುವಾಗ ಸ್ವಲ್ಪ ವಿಳಂಬವಾಗುತ್ತದೆ’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಹಂಪಿ ವೃತ್ತದ ಅಧೀಕ್ಷಕ ರಾಮಕೃಷ್ಣ ರೆಡ್ಡಿ ಹೇಳಿದರು.
ಆಕ್ಷೇಪಣೆ ಆಹ್ವಾನಿಸಬೇಕಿತ್ತು: ಪಾರ್ಕಿಂಗ್ ಶುಲ್ಕ ಆಕರಿಸುವ ನಿಟ್ಟಿನಲ್ಲಿ ಟೆಂಡರ್ ಕರೆಯುವ ಮೊದಲು ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಬೇಕಿತ್ತು, ಅದನ್ನು ಮಾಡಿಲ್ಲ. ಸ್ಥಳೀಯ ನಿವಾಸಿಗಳು, ರಿಕ್ಷಾಗಳು, ಸೈಕಲ್‌ಗಳಿಗೆ ಇದರಿಂದ ವಿನಾಯಿತಿ ನೀಡಬಹುದಿತ್ತು. ಮುಂದೆ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡರೆ ಟೆಂಡರ್ ಮೊತ್ತವನ್ನು ಸಹ ತಗ್ಗಿಸುವುದು ಅಗತ್ಯವಾಗುತ್ತದೆ’ ಎಂದು ಟೆಂಡರ್ ಪಡೆದ ಕಂಪನಿಗೆ ನಿಕಟರಾಗಿರುವವರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪಾರ್ಕಿಂಗ್ ಶುಲ್ಕ–ಬಸ್‌ಗೆ ₹60, ಟಿಟಿ ₹40, ಕಾರು ₹30 ರಿಕ್ಷಾಗೆ ₹20, ಬೈಕ್ ₹10, ಸೈಕಲ್ ₹5 ವಿರೂಪಾಕ್ಷ ದೇಗುಲ ಹೊರತು ಉಳಿದೆಡೆಗೆ ಒಂದೇ ಟಿಕೆಟ್
ವಿದೇಶಗಳಲ್ಲಿ ಸೈಕಲ್ ಗಳಾಗಿ ಪ್ರತ್ಯೇಕ ರಸ್ತೆ ನಿರ್ಮಿಸುತ್ತಾರೆ ಹಂಪಿಯಲ್ಲಿ ಸೈಕಲ್ ನಿಲುಗಡೆಗೆ ಪಾರ್ಕಿಂಗ್ ಶುಲ್ಕ ಪಡೆಯುವುದು ಮೂರ್ಖತನದ ಪರಮಾವಧಿ ಮತ್ತು ಪರಿಸರ ವಿರೋಧಿ ನೀತಿನಾಗರಾಜ್ ಗಾನದಾಲ್ ಬೆಂಗಳೂರಿನ ಪ್ರವಾಸಿಗ
ಸೈಕಲ್‌ಗೂ ಶುಲ್ಕ ವಿಧಿಸುವುದು ಸರಿಯಾದ ಕ್ರಮ ಅಲ್ಲ ಎಂಬುದು ಇಲಾಖೆಗೂ ಗೊತ್ತಾಗಿದೆ ಈ ಬಗ್ಗೆ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದು ಮತ್ತೊಮ್ಮೆ ಎಎಸ್ಐಗೆ ಪತ್ರ ಬರೆದು ಮನವರಿಕೆ ಮಾಡುತ್ತೇವೆಪ್ರಭುಲಿಂಗ ತಳಕೇರಿ ಉಪನಿರ್ದೇಶಕ ಪ್ರವಾಸೋದ್ಯಮ ಇಲಾಖೆ
ರಿಕ್ಷಾಗಳಿಂದ ಶಾಸಕರಿಗೆ ದೂರು
ಸ್ಥಳೀಯ ರಿಕ್ಷಾಗಳಿಗೂ ಪಾರ್ಕಿಂಗ್ ಶುಲ್ಕ ವಿಧಿಸುವುದರ ವಿರುದ್ಧ ರಿಕ್ಷಾ ಚಾಲಕರು ಈಚೆಗೆ ಶಾಸಕ ಎಚ್.ಆರ್.ಗವಿಯಪ್ಪ ಅವರಿಗೆ ದೂರು ಸಲ್ಲಿಸಿದ್ದರು. ಆದರೂ ಎಎಸ್‌ಐ ಸ್ಪಂದಿಸಿಲ್ಲ. ಮೌಖಿಕವಾಗಿ ಶುಲ್ಕ ಪಡೆಯಬೇಡಿ ಎಂದು ತಿಳಿಸಿದ್ದರೂ ಅಧಿಕೃತ ಆದೇಶ ಹೊರಡಿಸಿಲ್ಲ. ಹೀಗಾಗಿ ಶುಲ್ಕ ಪಡೆಯುವುದು ನಿಂತಿಲ್ಲ ಎಂದು ರಿಕ್ಷಾ ಚಾಲಕರು ದೂರಿದ್ದಾರೆ.
ರಸ್ತೆ ಬಳಸಿದರೂ ಶುಲ್ಕ!
ರಾಣಿ ಸ್ನಾನಗೃಹದಿಂದ ಅಂಡರ್‌ಗ್ರೌಂಡ್ ಶಿವ ದೇವಸ್ಥಾನದತ್ತ ನೀವು ನಿಮ್ಮ ಕಾರಿನಲ್ಲಿ ಸಂಚಸಿದರೆ ಸ್ಮಾರಕಗಳನ್ನು ನೋಡದೆ ಇದ್ದರೂ ಎಲ್ಲಿಯೂ ವಾಹನ ನಿಲುಗಡೆ ಮಾಡದೆ ಇದ್ದರೂ ಶುಲ್ಕ ಪಾವತಿಸಲೇಬೇಕು. ಇದು ಹಂಪಿಯ ಸದ್ಯದ ವಿದ್ಯಮಾನ. ಹೆದ್ದಾರಿ ಟೋಲ್ ಸಂಗ್ರಹ ರೀತಿಯಲ್ಲಿ ಕೇವಲ 1 ಕಿ.ಮೀ.ರಸ್ತೆಗೆ ಸೈಕಲ್‌ನವರು ₹5 ಬೈಕ್ ಸ್ಕೂಟರ್‌ನವರು ₹10 ರಿಕ್ಷಾದವರು ₹20 ಕೊಡಬೇಕು. ಹೆದ್ದಾರಿಗಳಲ್ಲೂ ಸೈಕಲ್ ಬೈಕ್‌ಗಳಿಗೆ ಶುಲ್ಕ ಇಲ್ಲ! ಹಂಪಿಯಲ್ಲಿ ಮಾತ್ರ ಜಗತ್ತಿನಲ್ಲೇ ಇಲ್ಲದ ನಿಯಮ ಜಾರಿಯಾಗಿದೆ. ‘ನಿಮಗೆ ಟಾರ್ ರಸ್ತೆ ಇತ್ತಲ್ಲ ಅಲ್ಲಿ ಹೋಗಬೇಕಿತ್ತು ಇಲ್ಲಿ ಯಾಕೆ ಬಂದಿದ್ದೀರಿ’ ಎಂದು ಪಾರ್ಕಿಂಗ್ ಶುಲ್ಕ ಪಡೆಯುವ ಮಂದಿ ದಬಾಯಿಸಿ ಹಣ ವಸೂಲು ಮಾಡುತ್ತಿದ್ದಾರೆ ಎಂದು ಪ್ರವಾಸಿಗರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.