ADVERTISEMENT

ಮಾಹಿತಿ ನೀಡಿದರೆ ಅನಗತ್ಯ ಅತಿಕ್ರಮಣ:ಹಂಪಿ ಕನ್ನಡ ವಿವಿ ಸಿದ್ಧ ಉತ್ತರ ಕಂಡು ಅಚ್ಚರಿ

ಎಂ.ಜಿ.ಬಾಲಕೃಷ್ಣ
Published 5 ಡಿಸೆಂಬರ್ 2025, 5:56 IST
Last Updated 5 ಡಿಸೆಂಬರ್ 2025, 5:56 IST
ಪ್ರೊ.ಡಿ.ವಿ.ಪರಮಶಿವಮೂರ್ತಿ
ಪ್ರೊ.ಡಿ.ವಿ.ಪರಮಶಿವಮೂರ್ತಿ   

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲವು ವಿದ್ಯಮಾನಗಳ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ (ಆರ್‌ಟಿಐ) ಅರ್ಜಿ ಸಲ್ಲಿಸಿದರೆ ‘ನೀವು ಕೋರಿದ ಮಾಹಿತಿಯನ್ನು ಬಹಿರಂಗಪಡಿವುದರಿಂದ ಅನಗತ್ಯ ಅತಿಕ್ರಮಣಕ್ಕೆ ಕಾರಣವಾಗಬಹುದು’ ಎಂದು ಹೇಳಿ ಉತ್ತರ ನೀಡದೆ ಉಳಿದ ಪ್ರಸಂಗ ನಡೆದಿವೆ.

ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಶರಣಗೌಡ ಎಂಬುವವರು ಆಗಸ್ಟ್‌ನಿಂದೀಚೆಗೆ ನಾಲ್ಕಾರು ಬಾರಿ ಆರ್‌ಟಿಐ ಅರ್ಜಿ ಹಾಕಿ ಕೆಲವು ಮಹತ್ವದ, ವಿಶ್ವವಿದ್ಯಾಲಯದ ಆಡಳಿತ, ಗೋಪ್ಯತೆಗೆ ಧಕ್ಕೆ ಆಗದಂತಹ, ತೀರಾ ವೈಯಕ್ತಿಕ ಅಲ್ಲದ ಪ್ರಶ್ನೆಗಳನ್ನು ಕೇಳಿದ್ದರು. ಅದಕ್ಕೆಲ್ಲ ಸಿದ್ಧ ರೂಪದ ‘ಅನಗತ್ಯ ಅತಿಕ್ರಮಣ’, ‘ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿರುವುದಿಲ್ಲ’ ‘ಅನಗತ್ಯ ಪ್ರಚೋದನೆಗೆ ಕಾರಣವಾಗಬಹುದು’ ಎಂಬ ಕಾರಣ ನೀಡಿ ಮಾಹಿತಿ ಮುಚ್ಚಿಟ್ಟಿರುವುದು ಗೊತ್ತಾಗಿದೆ. ಹೀಗೆ ನೀಡಿದ ಉತ್ತರಗಳ ದಾಖಲೆಗಳು ‘ಪ್ರಜಾವಾಣಿ’ ಬಳಿ ಇವೆ.

ಡಿ.ಲಿಟ್‌ ನಿಯಮಾವಳಿ ಆದೇಶದ ಪ್ರತಿ ಒದಗಿಸಿ, 2010ರಿಂದೀಚೆಗೆ ಬೋಧಕ ವೃಂದದ ಜ್ಯೇಷ್ಠತಾ ಪಟ್ಟಿ ಪ್ರಕಟವಾದ ಅಧಿಸೂಚನೆ ಒದಗಿಸಿ, ಜ್ಯೇಷ್ಠತಾ ಪಟ್ಟಿ ಅನುಮೋದನೆಯಾಗಿರುವ ಸಿಂಡಿಕೇಟ್‌ ನಡಾವಳಿ ಪಟ್ಟಿ, ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಲು ರಚನೆಯಾದ ಸಮಿತಿಯ ಅಧಿಸೂಚನೆ ಒದಗಿಸಿ ಎಂದು ಕೇಳಲಾಗಿತ್ತು. ಇದನ್ನು ನೀಡಿದರೆ ‘ಅನಗತ್ಯ ಅತಿಕ್ರಮಣಕ್ಕೆ ಕಾರಣವಾಗಬಹುದು’ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಲಾಗಿದೆ.

ADVERTISEMENT

2010ರಿಂದೀಚೆಗೆ ಪಿಎಚ್‌.ಡಿ.ಅಧ್ಯಯನಕ್ಕಾಗಿ ಮಾನ್ಯತೆ ನೀಡಿರುವ ಕೇಂದ್ರಗಳ ವಿವರ, ಅದರ ಆದೇಶ ಪ್ರತಿ ಕೇಳಿದಾಗಲೂ ಇದೇ ಉತ್ತರ ನೀಡಿ ಅರ್ಜಿ ತಿರಸ್ಕರಿಸಲಾಗಿದೆ. 2023ರಿಂದೀಚೆಗೆ ಕುಲಪತಿ ಮತ್ತು ಕುಲಸಚಿವರು  ಪಡೆದಿರುವ ಭತ್ಯೆಗಳು, ಅವರ ಹಾಜರಾತಿ ವಿವರ ಕೇಳಿದಾಗಲೂ ಇದೇ ಕಾರಣ ನೀಡಿ ಉತ್ತರ ಒದಗಿಸಿಲ್ಲ.

ಕುಲಪತಿ ಹೇಳಿಕೆ: ‘ಯಾವುದಕ್ಕೆ ಉತ್ತರ ಕೊಡಬೇಕೋ, ಅದಕ್ಕೆ ಉತ್ತರ ಕೊಟ್ಟೇ ಕೊಡುತ್ತೇವೆ. ಅದಕ್ಕಾಗಿಯೇ ನೋಡಲ್ ಅಧಿಕಾರಿಯೊಬ್ಬರನ್ನು ನೇಮಿಸಿದ್ದೇವೆ. ಕೆಲವು ತೀರಾ ವೈಯಕ್ತಿಕ ಪ್ರಶ್ನೆಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ ಎಂದು ಕಾಯ್ದೆಯಲ್ಲೇ ಹೇಳಿದೆ. ನಾವು ನಿಯಮ ಪ್ರಕಾರವೇ ನಡೆದುಕೊಳ್ಳುತ್ತಿದ್ದೇವೆ’ ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ನಿಯಮದ ಪ್ರಕಾರವೇ ನಡೆದುಕೊಳ್ಳುತ್ತಿದ್ದೇವೆ. ಕೆಲವು ಪ್ರಶ್ನೆಗಳಿಗೆ ಹೀಗೆ ಏಕೆ ಉತ್ತರ ಕೊಟ್ಟರೋ ಗಮನಿಸುವೆ
ಪ್ರೊ.ಡಿ.ವಿ.ಪರಮಶಿವಮೂರ್ತಿ ಕುಲಪತಿ

‘ಕನಿಷ್ಠ ಜ್ಞಾನವೂ ಇಲ್ಲ’ ವಿಶ್ವವಿದ್ಯಾಲಯ ಆರ್‌ಟಿಐಗೆ ನೀಡುವ ಇಂತಹ ಉತ್ತರಗಳು ಹಾಗೂ ಇತರ ಹಲವು ಪ್ರಸಂಗಗಳಿಂದ ರೋಸಿ ಹೋಗಿರುವ ಜೆ.ಎಂ.ರಾಜಶೇಖರ ಎಂಬುವವರು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗ ಪತ್ರ ಬರೆದಿದ್ದು ವಿಶ್ವವಿದ್ಯಾಲಯದ ಯಾರೊಬ್ಬರಿಗೂ ಮಾಹಿತಿ ಹಕ್ಕು ಅಧಿನಿಯಮದ ಕುರಿತು ಕನಿಷ್ಠ ಜ್ಞಾನವೂ ಇಲ್ಲ ಅವರಿಗೆ ತರಬೇತಿ ಬೇಕೇ ಬೇಕು ಆದರೆ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಅವರಿಗೆ ಪುಗಸಟ್ಟೆ ತರಬೇತಿ ಯಾರೂ ಕೊಡಬೇಡಿ ಎಂದು ಖಾರವಾಗಿಯೇ ಬರೆದಿದ್ದಾರೆ.