ADVERTISEMENT

ಹಂಪಿ ಉತ್ಸವ | ಯುವ ಕವಿಗೋಷ್ಠಿಯಲ್ಲಿ 44 ಕವಿಗಳು ಭಾಗಿ

ಸಿ.ಶಿವಾನಂದ
Published 3 ಮಾರ್ಚ್ 2025, 5:14 IST
Last Updated 3 ಮಾರ್ಚ್ 2025, 5:14 IST
<div class="paragraphs"><p>ಹಂಪಿ ಉತ್ಸವದ ಪ್ರಯುಕ್ತ ಭಾನುವಾರ ನಡೆದ ಯುವ ಕವಿಗೋಷ್ಠಿಯಲ್ಲಿ ಕೊಪ್ಪಳದ ಅಳವಂಡಿಯ ಕವಿ ಮೆಹಬೂಬ್ ಮಠದ್ ಕವಿತೆ ವಾಚಿಸಿದರು –ಪ್ರಜಾವಾಣಿ ಚಿತ್ರ</p></div>

ಹಂಪಿ ಉತ್ಸವದ ಪ್ರಯುಕ್ತ ಭಾನುವಾರ ನಡೆದ ಯುವ ಕವಿಗೋಷ್ಠಿಯಲ್ಲಿ ಕೊಪ್ಪಳದ ಅಳವಂಡಿಯ ಕವಿ ಮೆಹಬೂಬ್ ಮಠದ್ ಕವಿತೆ ವಾಚಿಸಿದರು –ಪ್ರಜಾವಾಣಿ ಚಿತ್ರ

   

ಹಂಪಿ (ವಿಜಯನಗರ): ‘ಕೆಂಡ ಕಾರುವ ರಣ ಭೀಕರ ಬಿಸಿಲನ್ನು ತಲೆಗೆ ಸುತ್ತಿಕೊಂಡು ಮಾಸಿದ ಸೀರೆಯ ಜೋಳಿಗೆಯಲಿ ಬೆತ್ತಲ ಮಗುವ ಮಲಗಿಸಿ ಜಗದ ಹೊಟ್ಟೆಯ ತುಂಬಿಸಲೆಂದು ಬೀಜ ಬಿತ್ತುವಾಗ ನನ್ನವ್ವ ಬೆವರುತ್ತಾಳೆ’ ಎಂದು ಕೊಪ್ಪಳದ ಅಳವಂಡಿಯ ಯುವಕವಿ ಮೆಹಬೂಬ್ ಮಠದ ಕವಿತೆ ವಾಚಿಸಿದಾಗ ನೆರೆದಿದ್ದ ಸಭೀಕರಿಂದ ಚಪ್ಪಾಳೆಯ ಸುರಿಮಳೆ.

ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ವೇದಿಕೆಯಲ್ಲಿ ಹಂಪಿ ಉತ್ಸವದ ಪ್ರಯುಕ್ತ ಭಾನುವಾರ ನಡೆದ ಯುವ ಕವಿ ಗೋಷ್ಠಿಯಲ್ಲಿ ಈ ಕವಿತೆಯ ಸಾಲುಗಳು ಚಿಂತನೆಗೆ ಹಚ್ಚಿತು, ಇಂದಿನ ವ್ಯವಸ್ಥೆಯನ್ನು ನವಿರಾಗಿ ಅಕ್ಷರಗಳ ಮೂಲಕ ಅವರು ಛೇಡಿಸಿದರು.

ADVERTISEMENT

ಕವಯತ್ರಿ ಮಂಜುಳಾ ಹುಲಿಕುಂಟೆ, ‘ಬುದ್ಧ, ಇವನ ನಿರ್ಮೋಹದ ಮೇಲೆಯೇ ಅತಿಯಾದ ಮೋಹವಿದೆ ನನಗೆ, ಹಾಗಾಗಿಯೇ ಎಡುವುತ್ತೇನೆ ಎದೆಗಿಳಿಸಿಕೊಳುವಾಗಲೆಲ್ಲಾ’ ಎನ್ನುವ ಮೂಲಕ ಹುದುಗಿರುವ ತಲ್ಲಣಗಳನ್ನು ಬಿಡಿಸಿಟ್ಟರು.

ಕವಿ ರಾಯಚೂರಿನ ಎಂ.ಬಿ.ನರಸಿಂಹಲು ವಡವಾಟಿ, ‘ನೀನು ಬೇಕು ನನ್ನ ದೇಶಕ್ಕೆ ಕೋಮುವಾದವ ಬಿತ್ತಿ ಬೆಳೆಸುವುದಕ್ಕಾಗಿ ಅಲ್ಲ, ಜಾತಿಜಾತಿಗೆ ಜಗಳ ಹಚ್ಚಿ, ಹೆಚ್ಚುಹೆಚ್ಚು ಅಧಿಕಾರ ಅನುಭವಿಸುದಕ್ಕಲ್ಲ’ ಎನ್ನುವ ಕವಿತೆ ವಾಚಿಸಿದಾಗ ಅಭಿನಂದನೆಯ ಚಪ್ಪಾಳೆಗೆ ಕಡಿಮೆ ಇರಲಿಲ್ಲ.

ಶಿವಕುಮಾರ್ ಆರ್.ಕುಂಬಾರ್ ಅವರು, ‘ಮಾನಮುಚ್ಚುವ ಬಟ್ಟೆಯನ್ನೇಕೆ ಬಿಚ್ಚಿದರೆಂದು ನೀವೇ ಪ್ರಶ್ನಿಸಿಕೊಳ್ಳಿ’ ಎಂದರೆ, ಬಿ.ಬಿ.ಶಿವಾನಂದ ಅವರು, ‘ಏನಿದೇನಿದು ಅಕಟಕಟ ಕುರುಬನ ಜಾಗದಲ್ಲಿ ತೋಳನೆ’ ಎನ್ನುವ ಕವಿತೆ ವಾಚಿಸಿದರು.

ಕವಿಗೋಷ್ಠಿಯಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಬಂದಿದ್ದ ಕವಿಗಳು ತೀಷ್ಣಗ್ರಹಿಕೆ ಮತ್ತು ತಮ್ಮ ಅನುಭವದ ನೆಲೆಗಟ್ಟಿನಲ್ಲಿ ಭೋರ್ಗರೆಯುವ ಮಳೆಯಂತೆ, ಗುಡುಗು ಸಿಡಿಲಿನಂತೆ ಘರ್ಜಿಸಿದ್ದರೆ, ಇನ್ನೂ ಕೆಲವರು ನವಿರಾದ ತುಂತುರು ನೀರಿನ ಸೆಲೆಯಂತೆ ಅಕ್ಷರಗಳ ಪುಂಜಗಳನ್ನು ತೆರೆದಿಟ್ಟರು.

ಟಿ.ಎಚ್.ಎಂ.ಶೇಖರಯ್ಯ, ಅಮೀರ್ ಸಾಬ್ ಒಂಟಿ, ಶಿವಕುಮಾರ್ ಕರನಂದಿ, ಈರಣ್ಣ ಬೆಂಗಾಲಿ, ಎನ್.ಕೌಸ್ತುಭ ಭಾರದ್ವಜ್, ರವಿಚಂದ್ರ ಹಾರಾಳ್, ಸುಕನ್ಯಾ ದೇಸಾಯಿ, ಪವನ್‍ಕುಮಾರ್, ಭಾರತಿ ಮಲ್ಲಿಕಾರ್ಜುನಗೌಡ, ವಿಜಯಭಾಸ್ಕರ ರೆಡ್ಡಿ ಸೇರಿದಂತೆ ಎಲ್ಲರೂ ಅರ್ಥಪೂರ್ಣ, ಭಾವಪೂರ್ಣ, ಪ್ರಭುತ್ವವನ್ನು ಅಣಕಿಸುವ, ಪ್ರೇಮ ನಿವೇದನೆಯ, ತಾಯಿ ಪ್ರೀತಿ, ಕಕ್ಕುಲತೆಯ ಕವಿತೆಗಳನ್ನು ವಾಚಿಸಿದರು.

ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವೆಂಕಟಗಿರಿ ದಳವಾಯಿ ಅವರು ಉದ್ಘಾಟಿಸಿ, ‘ಕವಿ ಅಂತಿಮಗೊಂಡವನಲ್ಲ, ರೂಪಗೊಂಡವ, ನಿಮ್ಮ ವಿರುದ್ಧ ನೀವು ದಂಗೆ ಏಳಿ, ನೇರವಾದುದನ್ನು ತಿರುಚಿ, ಕ್ಲಿಷ್ಟವಾಗಿದ್ದನ್ನು ಸರಳವಾಗಿಸಬೇಡಿ’ ಎಂದು ಸಲಹೆ ನೀಡಿದರು.

ಎಸ್.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಕವಿ ಅಕ್ಕಿ ಬಸವೇಶ ಆಶಯ ನುಡಿಗಳನ್ನಾಡಿದರು. ಡಿಡಿಪಿಇ ವೆಂಕಟೇಶ್ ರಾಮಚಂದ್ರಪ್ಪ, ದಯಾನಂದ ಕಿನ್ನಾಳ, ಮಧುರಚನ್ನಶಾಸ್ತ್ರಿ, ಬಾಣದ ಮುರಳೀಧರ, ಬಿ.ಮಂಜುನಾಥ, ಜಿ.ಸಂತೋಷ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.