ADVERTISEMENT

‘ಹಂಪಿ ಉತ್ಸವ’ಕ್ಕೆ ವಸಂತ ವೈಭವ, ಲೇಸರ್‌ ಶೋ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 11:08 IST
Last Updated 22 ಜನವರಿ 2023, 11:08 IST
 ಪೂರ್ವಭಾವಿ ಸಿದ್ಧತಾ ಸಭೆ
ಪೂರ್ವಭಾವಿ ಸಿದ್ಧತಾ ಸಭೆ   

ಹೊಸಪೇಟೆ (ವಿಜಯನಗರ): ‘ಹಂಪಿ ಉತ್ಸವದ ಅಂಗವಾಗಿ ಜ. 26ರಂದು ನಗರದಲ್ಲಿ ವಸಂತ ವೈಭವ ಹಾಗೂ ಲೇಸರ್‌ ಶೋ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭಾನುವಾರ ನಡೆದ ಹಂಪಿ ಉತ್ಸವ ಆಚರಣೆ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ಸಂಜೆ 4ಕ್ಕೆ ನಗರದ ವಡಕರಾಯ ದೇವಸ್ಥಾನದಿಂದ ವಿವಿಧ ಕಲಾ ತಂಡಗಳ ಭವ್ಯ ಮೆರವಣಿಗೆ ನಡೆಯಲಿದೆ. ಅನಂತರ ಡಾ. ಪುನೀತ್‌ ರಾಜಕುಮಾರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಲೇಸರ್ ಶೋ ಜರುಗಲಿದೆ ಎಂದರು.

ಕುಡಿವ ನೀರಿನ ವ್ಯವಸ್ಥೆ:
ಉತ್ಸವದ ಅಂಗವಾಗಿ ಕಾರ್ಯಕ್ರಮ ನಡೆಯಲಿರುವ ವೇದಿಕೆಗಳು ಸೇರಿದಂತೆ ಹಂಪಿಯ ವಿವಿಧೆಡೆ ಒಟ್ಟು 13 ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು.
ಕೃಷಿ ದರ್ಶನ ಹಾಗೂ ಫಲಪುಷ್ಪ ಪ್ರದರ್ಶನಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ಕುಸ್ತಿ, ಸಾಹಸ ಕ್ರೀಡೆ ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡಾಕೂಟ ಆಯೋಜಿಸಬೆಕು. ಅಂಗವಿಕಲರಿಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಬೇಕೆಂದು ತಿಳಿಸಿದರು.

ADVERTISEMENT

ಕಲಾತಂಡಗಳಿಂದ ಕೈಗೊಳ್ಳಲಾಗುವ ಜಾನಪದ ವಾಹಿನಿ ಹಾಗೂ ತುಂಗಾ ಆರತಿ ಧಾರ್ಮಿಕ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಗೊಳಿಸಬೇಕು. ಪುಸ್ತಕ ಪ್ರದರ್ಶನ, ಕವಿಗೋಷ್ಠಿ, ವಿಚಾರ ಸಂಕಿರಣ, ಚಿತ್ರಕಲೆ, ಶಿಲ್ಪಕಲೆ, ಛಾಯಾಗ್ರಹಣ ಸ್ಪರ್ಧೆ, ಶಾಲಾ ಮಕ್ಕಳಿಗೆ ಪ್ರಬಂಧ, ಚರ್ಚಾ ಸ್ಪರ್ಧೆಗಳ ಆಯೋಜನೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಜಿಲ್ಲೆಯಾದ ನಂತರ ಮೊದಲ ಬಾರಿಗೆ ಹಂಪಿ ಉತ್ಸವ ಸಂಘಟಿಸಲಾಗುತ್ತಿದ್ದು, ಜಿಲ್ಲಾ ಕೇಂದ್ರ ಹೊಸಪೇಟೆ ನಗರ ಸೇರಿದಂತೆ ಹಂಪಿಗೆ ತೆರಳುವ ಮಾರ್ಗಗಳಲ್ಲಿ ವಿದ್ಯುತ್ ದೀಪಗಳ ಅಲಂಕಾರ ಮಾಡಬೇಕೆಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಉತ್ಸವದ ಸಂದರ್ಭದಲ್ಲಿ ಯಾವುದೇ ರೀತಿಯ ಲೋಪ ಆಗದಂತೆ ಎಚ್ಚರಿಕೆ ವಹಿಸಬೇಕೆಂದೂ ತಿಳಿಸಿದರು.

ಹಂಪಿ ಬೈ ಸ್ಕೈಗೆ ಆನ್ಲೈನ್ ಬುಕ್ಕಿಂಗ್: ‘ಹಂಪಿ ಬೈ ಸ್ಕೈ' ಜ.26ರಿಂದ ಆರಂಭವಾಗಲಿದ್ದು, ಹೆಲಿಕ್ಯಾಪ್ಟರ್‌ನಲ್ಲಿ 7 ನಿಮಿಷ ಆಗಸದಿಂದ ಹಂಪಿ ಸ್ಮಾರಕಗಳನ್ನು ಕಣ್ತುಂಬಿಕೊಳ್ಳಬಹುದು. ಆನ್‌ಲೈನ್ ಮೂಲಕ ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸಬಹುದು. ಒಬ್ಬರಿಗೆ ₹3,800 ನಿಗದಿಪಡಿಸಲಾಗಿದೆ. ಬೆಳಿಗ್ಗೆ 10ರಿಂದ ಬೈ ಸ್ಕೈ ನಡೆಯಲಿದೆ. ಆನ್‌ಲೈನ್‌ ಬುಕ್ಕಿಂಗ್‌ ವಿಳಾಸ ಇಂತಿದೆ: https://www.chipsan.com/events/hampi-by-sky.

ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ಹರಪನಹಳ್ಳಿ ಉಪವಿಭಾಗಧಿಕಾರಿ ಟಿ.ವಿ.ಪ್ರಕಾಶ್, ಧ್ವನಿ ಮತ್ತು ಬೆಳಕು ಉಸ್ತುವಾರಿ ಎಲ್.ಡಿ.ಜೋಶಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ ಚವ್ಹಾಣ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವೀರನಗೌಡ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸಲೀಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ್ ರಂಗಣ್ಣನವರ್, ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.