ADVERTISEMENT

ಹಂಪಿ ಸುತ್ತಮುತ್ತ ಭಾರಿ ಮಳೆ: ವಿಜಯ ವಿಠ್ಠಲ ದೇವಸ್ಥಾನಕ್ಕೆ ತೆರಳುವ ರಸ್ತೆ ಬಂದ್‌

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 8:22 IST
Last Updated 12 ಜೂನ್ 2025, 8:22 IST
   

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಹಂಪಿ ಪರಿಸರದಲ್ಲಿ ಬುಧವಾರ ರಾತ್ರಿ ಮತ್ತು ಗುರುವಾರ ಬೆಳಿಗ್ಗೆ ಉತ್ತಮ ಮಳೆ ಸುರಿದ ಕಾರಣ ತಳವಾರಘಟ್ಟ ಪ್ರದೇಶದಲ್ಲಿನ ವಿಜಯನಗರ ಅರಸರ ಕಾಲದ ಕಾಲುವೆ ತುಂಬಿ ರಸ್ತೆ ಮೇಲೆ ಹರಿಯುತ್ತಿದ್ದು, ವಿಜಯ ವಿಠ್ಠಲ ದೇವಸ್ಥಾನಕ್ಕೆ ತೆರಳುವ ರಸ್ತೆ ಬಂದ್ ಆಗಿದೆ.

ತಳವಾರಘಟ್ಟ ಮಹಾದ್ವಾರದ ಸಮೀಪದಲ್ಲೇ ಈ ಕಾಲುವೆ ಇದೆ. ಇಲ್ಲಿಂದ ಕೇವಲ 100 ಮೀಟರ್ ದೂರದಲ್ಲಿ ಗೆಜ್ಜಲ ಮಂಟಪ ವಾಹನ ನಿಲುಗಡೆ ಸ್ಥಳ ಇದ್ದು, ಅಲ್ಲಿಗೆ ತೆರಳುವುದಕ್ಕೆ ಸಾಧ್ಯವಿಲ್ಲದ ಸ್ಥಿತಿ ಇದೆ. ವಾಹನ ಇನ್ನೊಂದು ಬದಿಯಲ್ಲಿ ನಿಲ್ಲಿಸಿ ರಸ್ತೆಯಲ್ಲಿ ನಡೆದು ಹೋಗಲು ಸಹ ಸಾಧ್ಯವಿಲ್ಲ, ಏಕೆಂದರೆ ಕಾಲುವೆಯ ನೀರಿನ ಸೆಳೆತ ಬಲವಾಗಿದೆ.

ವೆಂಕಟಾಪುರ ಭಾಗದಿಂದ ಸಂಪರ್ಕ ಕಲ್ಪಿಸುವ ರಸ್ತೆ ಇದ್ದು, ಅಲ್ಲಿಂದ ಗೆಜ್ಜಲ ಮಂಟಪದತ್ತ ಪ್ರವಾಸಿಗರು ಬರುತ್ತಿದ್ದಾರೆ. ಅಂದರೆ ಕಮಲಾಪುರ ಕಡೆಯಿಂದ ಬರುವ ಪ್ರವಾಸಿಗರು ಸದ್ಯ ಸುಮಾರು ಐದು ಕಿ.ಮೀ.ಸುತ್ತುಬಳಸಿ ವಿಜಯ ವಿಠ್ಠಲ ದೇವಸ್ಥಾನದ ವಾಹನ ನಿಲುಗಡೆ ಸ್ಥಳ ತಲುಪಬೇಕಾದ ಸ್ಥಿತಿ ಇದೆ.

ADVERTISEMENT

ಐದು ವರ್ಷದಲ್ಲಿ ಇದೇ ಮೊದಲು:

‘ವಿಜಯ ವಿಠ್ಠಲ ದೇವಸ್ಥಾನಕ್ಕೆ ಹೋಗುವ ರಸ್ತೆ ಕಳೆದ ಐದು ವರ್ಷಗಳಲ್ಲಿ ಬಂದ್ ಆಗಿದ್ದನ್ನು ನಾನು ನೋಡಿಲ್ಲ. ಭಾರಿ ಮಳೆ ಸುರಿದ ಕಾರಣ ತಾತ್ಕಾಲಿಕವಾಗಿ ರಸ್ತೆ ಬಂದ್ ಆಗಿದೆ. ಮಳೆ ಕಡಿಮೆಯಾಗುತ್ತಿದ್ದಂತೆಯೇ ಮತ್ತೆ ಕಾಲುವೆಯ ನೀರು ಮೋರಿಯ ಕೆಳಭಾಗದಲ್ಲಷ್ಟೇ ಹರಿದು ವಾಹನ, ಜನರ ಸಂಚಾರಕ್ಕೆ ಅವಕಾಶ ಸಿಗಲಿದೆ. ಇದು ಎಎಸ್ಐ ವ್ಯಾಪ್ತಿಗೆ ಒಳಪಡುವ ಸ್ಥಳವಾಗಿದ್ದರಿಂದ ರಸ್ತೆಯನ್ನು ಎತ್ತರಿಸಿ ಮಾರ್ಗ ನಿರ್ಮಿಸುವ ಕೆಲಸಕ್ಕೆ ಸಮಯ ಹಿಡಿಯಬಹುದು’ ಎಂದು ಪ್ರವಾಸಿ ಮಾರ್ಗದರ್ಶಿ ಶ್ರೀನಿವಾಸ್ ಎಂಬುವವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಸರುಮಯ ವಾಹನ ನಿಲುಗಡೆ ಪ್ರದೇಶ: ವಿಶ್ವವಿಖ್ಯಾತ ಕಲ್ಲಿನ ರಥ ಇರುವ ವಿಜಯ ವಿಠ್ಠಲ ದೇವಸ್ಥಾನಕ್ಕೆ ಗೆಜ್ಜಲ ಮಂಟಪದಿಂದ ಸುಮಾರು ಒಂದು ಕಿಲೋಮೀಟರ್ ಮಣ್ಣಿನ ರಸ್ತೆಯಲ್ಲಿ ನಡೆದೇ ಹೋಗಬೇಕು ಇಲ್ಲವೇ ಬ್ಯಾಟರಿ ವಾಹನದಲ್ಲಿ ತೆರಳಬೇಕು. ಆದರೆ ಗೆಜ್ಜಲ ಮಂಟಪದ ವಾಹನ ನಿಲುಗಡೆ ಸ್ಥಳ ಕೆಸರುಮಯವಾಗಿದ್ದು, ಚಾಲಕರು ಪರದಾಡುತ್ತಿದ್ದಾರೆ.

ಕೋಡಿಬಿದ್ದ ಕಮಲಾಪುರ ಕೆರೆ:

ನಿರಂತರ ಮಳೆಯ ಕಾರಣ ಐತಿಹಾಸಿಕ ಕಮಲಾಪುರ ಕೆರೆ ಕೇವಲ 15 ದಿನಗಳಲ್ಲಿ ಮತ್ತೊಮ್ಮೆ ಕೋಡಿ ಬಿದ್ದಿದೆ. ಮತ್ತೊಂದೆಡೆ ಮರಿಯಮ್ಮನಹಳ್ಳಿ ಸಮೀಪದ ಪೋತಲಕಟ್ಟೆ ಗ್ರಾಮದ ಕೆರೆ ಸಹ ಕೋಡಿ ಬಿದ್ದಿದೆ.

ತಾಲ್ಲೂಕಿನ ಕೆಲವೆಡೆ ಕಬ್ಬಿನ ಗದ್ದೆಗಳಿಗೆ ನೀರು ನುಗ್ಗಿದೆ. ಕಮಲಾಪುರದ ಕೆಲವೆಡೆ ಹಾಗೂ ನಗರದ ಹೊರವಲಯದ ರಾಯರಕೆರೆ ಪರಿಸರದ ಜಂಬುನಾಥಹಳ್ಳಿಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಗಳು ಜಲಾವೃತವಾಗಿವೆ.

ಶಾಲೆಗಳಿಗೆ ಸ್ವಯಂಪ್ರೇರಿತ ರಜೆ: ನಗರದ ಕೆಲವು ಖಾಸಗಿ ಶಾಲೆಗಳು ಕೆ.ಜಿ. ತರಗತಿಗಳು, 1ರಿಂದ 4ನೇ ತರಗತಿಯ ಮಕ್ಕಳಿಗೆ ಗುರುವಾರ ಸ್ವಯಂಪ್ರೇರಿತ ರಜೆ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.