ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರ ಮತ್ತು ಸುತ್ತಮುತ್ತ ಶನಿವಾರ ಸಂಜೆ 8.15ರ ವೇಳೆಗೆ ಭಾರಿ ಗಾಳಿ, ಗುಡುಗು, ಸಿಡಿಲಿನಿಂದ ಕೂಡಿದ ಬಿರುಸಿನ ಮಳೆ ಸುರಿದ ಕಾರಣ ಬಿಸಿಲಿನಿಂದ ಕಂಗೆಟ್ಟಿದ್ದ ಜನಕ್ಕೆ ಕೊಂಚ ನೆಮ್ಮದಿ ಸಿಗುವಂತಾಯಿತು.
ಸಂಜೆಯಿಂದಲೇ ಸಾಧಾರಣ ಮೋಡ, ಗಾಳಿಯ ವಾತಾವರಣ ಇತ್ತು. ರಾತ್ರಿ ಗುಡುಗು, ಸಿಡಿಲಿನೊಂದಿಗೆ ಸುಮಾರು ಮುಕ್ಕಾಲು ಗಂಟೆ ಮಳೆ ಸುರಿಯಿತು. ಕೆಲವೆಡೆ ಆಲಿಕಲ್ಲು ಮಳೆ ಸಹ ಸುರಿಯಿತು.
ನಗರದ ಬಸ್ ನಿಲ್ದಾಣ, ಕಾಲೇಜು ರಸ್ತೆ, ಡ್ಯಾಂ ರಸ್ತೆ, ಹಂಪಿ ರಸ್ತೆ, ಬಳ್ಳಾರಿ ರಸ್ತೆ ಸಹಿತ ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ರಭಸವಾಗಿ ಹರಿಯಿತು. ಭಾರಿ ಗಾಳಿ ಬೀಸಿದ ಕಾರಣ ಬಸವೇಶ್ವರ ಬಡಾವಣೆ, ಎಂ.ಜೆ.ನಗರ ಸಹಿತ ಹಲವೆಡೆ ಮರದ ಕೊಂಬೆಗಳು ಮುರಿದು ಬಿದ್ದಿವೆ. ಇದರಿಂದ ಹಲವು ಬಡಾವಣೆಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತು.
ಶಿರಗುಪ್ಪ ಪಟ್ಟಣದಲ್ಲಿಯೂ ಉತ್ತಮ ಮಳೆಯಾಗಿದೆ.
ಹಂಪಾಪಟ್ಟಣದಲ್ಲಿ ಉತ್ತಮ ಮಳೆ
ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಹಂಪಾಪಟ್ಟಣದಲ್ಲಿ ಶನಿವಾರ 10 ನಿಮಿಷಗಳಿಗೂ ಅಧಿಕ ಕಾಲ ಉತ್ತಮ ಮಳೆ ಸುರಿಯಿತು. ಮಧ್ಯಾಹ್ನ 3ಗಂಟೆಯಿಂದ ಮಳೆ ಆರಂಭಗೊಂಡಿತು.
ಬಿಸಿಲಿನ ಝಳದಿಂದ ತತ್ತರಿಸಿದ್ದ ಜನರಿಗೆ ಮಳೆಯ ಸಿಂಚನ ಸಂತಸ ತರಿಸಿತು. ಗ್ರಾಮದಲ್ಲಿ ಚಿಣ್ಣರು ಮಳೆಯಲ್ಲಿ ನೆನೆದು ಕುಣಿದು ಕುಪ್ಪಳಿಸಿದರು.
ವಿವಿಧೆಡೆ ಉತ್ತಮ ಮಳೆ
ಹರಪನಹಳ್ಳಿ: ಬಿಸಿಲಿನ ತಾಪಕ್ಕೆ ಬೇಸತ್ತಿದ್ದ ಜನತೆಗೆ ಗುರುವಾರ ರಾತ್ರಿ ಸುರಿದ ಮಳೆಯಿಂದ ವಿವಿಧ ಗ್ರಾಮಗಳ ರೈತರು ಸಂತಸ ಗೊಂಡಿದ್ದಾರೆ. ಕಣಿವಿಹಳ್ಳಿ, ಕೋಡಿಹಳ್ಳಿ, ಬಾಗಳಿ, ಕೂಲಹಳ್ಳಿ, ಬಂಡ್ರಿ, ಕಾನಹಳ್ಳಿ, ಬಂಡ್ರಿ ತಾಂಡ ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿದಿದ್ದು, ಗುಡುಗು, ಮಿಂಚು, ಸಿಡಿಲಿನ ಅರ್ಭಟ ಜೋರಾಗಿತ್ತು. ಹದ ಮಳೆಯಾಗಿದ್ದರಿಂದ ರೈತರು ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.