ADVERTISEMENT

ಹೊಸಪೇಟೆ ದಸರಾ | ವೈಭವದ ಇತಿಹಾಸ ನೆನಪಿಸುವ ನವದಿನ

ಮೈಸೂರು ದಸರಾಗೆ ಮುನ್ನುಡಿ ಬರೆದ ನೆಲದಲ್ಲಿ ಸಂಭ್ರಮ

ಎಂ.ಜಿ.ಬಾಲಕೃಷ್ಣ
Published 22 ಸೆಪ್ಟೆಂಬರ್ 2025, 4:14 IST
Last Updated 22 ಸೆಪ್ಟೆಂಬರ್ 2025, 4:14 IST
<div class="paragraphs"><p>ಹೊಸಪೇಟೆಯಲ್ಲಿ ಭಾನುವಾರ ರಾತ್ರಿ ಮಳೆಯ ನಡುವೆಯೂ ವಿದ್ಯುತ್ ದೀಪಗಳಿಂದ ಝಗಮಗಿಸಿದ ಕೇರಿ ಬೀದಿ </p></div>

ಹೊಸಪೇಟೆಯಲ್ಲಿ ಭಾನುವಾರ ರಾತ್ರಿ ಮಳೆಯ ನಡುವೆಯೂ ವಿದ್ಯುತ್ ದೀಪಗಳಿಂದ ಝಗಮಗಿಸಿದ ಕೇರಿ ಬೀದಿ

   

–ಚಿತ್ರ/ ಲವ ಕೆ.

ಹೊಸಪೇಟೆ (ವಿಜಯನಗರ): ಮೈಸೂರು ದಸರಾಗೆ ಬುನಾದಿ ಹಾಕಿದ ವಿಜಯನಗರ ಸಾಮ್ರಾಜ್ಯದ ದೊರೆಗಳು ವಿರೂಪಾಕ್ಷನ ಹೆಸರಲ್ಲಿ ರಾಜ್ಯಭಾರ ನಡೆಸಿದ ಹಂಪಿ, ಹೊಸಪೇಟೆಯಲ್ಲಿ ಮತ್ತೊಮ್ಮೆ ನವರಾತ್ರಿ ಸಂಭ್ರಮ ಕಳೆಕಟ್ಟಿದ್ದು, ವೈಭವದ ಇತಿಹಾಸವನ್ನು ನೆನಪಿಸುವ ಉತ್ಸವ ಕಣ್ತುಂಬಿಕೊಳ್ಳಲು ಜನ ಸಜ್ಜಾಗಿದ್ದಾರೆ.

ADVERTISEMENT

ವಿಜಯನಗರ ಸಾಮ್ರಾಜ್ಯ ಪತನವಾದ ಬಳಿಕ ನವರಾತ್ರಿ ಉತ್ಸವ ಮೈಸೂರಿಗೆ ಸ್ಥಳಾಂತರಗೊಂಡಿತು. ಅದಕ್ಕೆ ಮೊದಲು ಇಲ್ಲಿ ಸುಮಾರು 300 ವರ್ಷಗಳ ಕಾಲ ನಾಡದೇವಿ ಭುವನೇಶ್ವರಿಯನ್ನು ಆರಾಧಿಸುವ ದಸರಾ ವಿಜೃಂಭಣೆಯಿಂದ ನಡೆಯುತ್ತಿತ್ತು. ಇದಕ್ಕೆ ದೇಶ, ವಿದೇಶಗಳಿಂದ ಬರುತ್ತಿದ್ದ ರಾಜ, ಮಹಾರಾಜರು ಸಾಕ್ಷಿಯಾಗುತ್ತಿದ್ದರು ಎಂದು ಇತಿಹಾಸದ ಪುಟಗಳು ಹೇಳುತ್ತಿವೆ.

ಹಕ್ಕ, ಬುಕ್ಕ, ಹರಿಹರ ಸಹೋದರರಿಗೆ ವಿದ್ಯಾರಣ್ಯ ಗುರುಗಳು ಭುವನೇಶ್ವರಿ ತಾಯಿಯ  ದೇವಧನ ಬಳಸಲು ಅವಕಾಶ ಮಾಡಿಕೊಟ್ಟು ಸಾಮ್ರಾಜ್ಯ ಕಟ್ಟಿಸುತ್ತಾರೆ. ಹೀಗಾಗಿ ಇಲ್ಲಿ ರಾಜರು ನಿಮಿತ್ತ ಮಾತ್ರರಾಗಿದ್ದರು, ವಿರೂಪಾಕ್ಷನ ಹೆಸರಲ್ಲೇ ಅವರು ರಾಜ್ಯಭಾರ ಮಾಡುತ್ತಿದ್ದರು. ತಾಯಿ ಭುವನೇಶ್ವರಿಯನ್ನು ನವರಾತ್ರಿ ಸಮಯದಲ್ಲಿ ಒಂಭತ್ತು ದಿನ ವೈಭವದಿಂದ ಆರಾಧಿಸುವ ಸಂಪ್ರದಾಯ ಆರಂಭಿಸಿದರು. ಜತೆಗೆ ಉತ್ಸವಕ್ಕೆ ವಿದೇಶಿ ದೊರೆಗಳನ್ನು ಕರೆಸಿ, ಅವರಿಗೆ ಸೂಕ್ತ ವಸತಿ, ಊಟದ ವ್ಯವಸ್ಥೆ ಕಲ್ಲಿಸುವ ಪರಿಪಾಠ ಇಲ್ಲಿ ನಡೆಯುತ್ತಿತ್ತು. ಕಾಳಗದ ಗಜಗಳು, ಒಂಟೆ, ಕುದುರೆಗಳಿಗೆ ತಂಗಲು ವ್ಯವಸ್ಥೆ ಮಾಡಲಾಗುತ್ತಿತ್ತು. ಹಂಪಿಯ ದಸರಾ ವೈಭವ ಆಗಲೇ ಫ್ರಾನ್ಸ್, ಪೋರ್ಚುಗಲ್‌, ರಷ್ಯಾ, ಪರ್ಷಿಯಾ, ಸೌದಿ ಅರೇಬಿಯಾಗಳಲ್ಲಿ ಖ್ಯಾತವಾಗಿತ್ತು.

ಮುಂದುವರಿದ ಸಂಪ್ರದಾಯ: ವಿಜಯನಗರ ಸಾಮ್ರಾಜ್ಯದ ಪತನದ ನಂತರ ಇದೆಲ್ಲವೂ ಇಲ್ಲಿಂದ ಮರೆಯಾದರೂ ಈಗಲೂ ಹೊಸಪೇಟೆ, ಕಮಲಾಪುರದ ವಾಲ್ಮೀಕಿ ನಾಯಕರ ಕೇರಿಗಳಲ್ಲಿ ಹಳೆಯ ಸಂಪ್ರದಾಯ ಮುಂದುವರಿದುಕೊಂಡು ಬಂದಿದೆ. ಹೊಸಪೇಟೆಯು 5 ಕೇರಿಗಳು, ಮತ್ತೆ ಎರಡು ಕೇರಿಗಳು ಸೇರಿದಂತೆ ಒಟ್ಟು ಏಳು ಕೇರಿಗಳಲ್ಲಿ ನಿಜಲಿಂಗಮ್ಮ, ಕೊಂಗಮ್ಮ, ಜಲದುರ್ಗಾ, ಬಂಡಿಕಾಳಮ್ಮ ಸಹಿತ ನಾನಾ ರೂಪದಲ್ಲಿ ದೇವಿಯರನ್ನು ಆರಾಧಿಸುತ್ತ ಬರಲಾಗುತ್ತಿದೆ. 

ಕೇರಿಗಳೆಲ್ಲ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದ್ದು, ವಾಸವಿ, ಅಂಬಾಭವಾನಿ ಸಹಿತ ಕೆಲವೆಡೆ ದಾಂಡಿಯಾ ನೃತ್ಯಗಳೂ ಗಮನ ಸೆಳೆಯಲಿವೆ.

ಪಲ್ಲಕ್ಕಿ ಹೊತ್ತ ಶಾಸಕ: ಈ ಬಾರಿ ಶಾಸಕ ಎಚ್.ಆರ್.ಗವಿಯಪ್ಪ ಅವರು ಎಲ್ಲಾ ಏಳು ಕೇರಿಗಳಿಗೆ ತೆರಳಿ ಪಲ್ಲಕ್ಕಿ ಹೊತ್ತು, ಪಲ್ಲಕ್ಕಿ ಹೊರುವ ಯುವಕರಿಗೆ, ಮುತ್ತೈದೆಯರಿಗೆ ಪಂಜೆ, ಸೀರೆ ಕೊಟ್ಟು ಉಡಿ ತುಂಬಿಸಿ ನಾಡಿಗೆ ಶಾಂತಿ ಸಿಗಲಿ ಎಂದು ಹಾರೈಸಿದ್ದಾರೆ. ಸಾಯಿಬಾಬಾ ಮಂದಿರದ ಆವರಣದಲ್ಲಿ ಚಂಡಿ ದೇವಿಯನ್ನು ಪ್ರತಿಷ್ಠಾಪಿಸಿ ಒಂಭತ್ತು ದಿನವೂ ಅನ್ನಸಂತರ್ಪಣೆಗೆ ವ್ಯವಸ್ಥೆ ಮಾಡಿದ್ದಾರೆ.

ದೇವಿಯರೇ ಭಕ್ತರ ಮನೆಗೆ

ಕೇರಿಗಳ ದೇವಿಯರು ಭಕ್ತರ ಓಣಿಗಳಿಗೆ ತೆರಳಿ ಅವರ ಮನೆಗಳಲ್ಲೇ ಪೂಜೆ ಮಾಡಿಸಿಕೊಳ್ಳುವ ವಿಶಿಷ್ಟ ಸಂಪ್ರದಾಯ ಹೊಸಪೇಟೆ ಕಮಲಾಪುರಗಳಲ್ಲಿ ಇಂದಿಗೂ ನಡೆಯುತ್ತ ಬಂದಿದೆ. ಭಕ್ತರನ್ನು ಹರಸುವ ದೇವಿಯರಿಗೆ ಉಡಿಯಕ್ಕಿ ನೈವೇದ್ಯ ಅರ್ಪಿಸಲಾಗುತ್ತದೆ.  ನವರಾತ್ರಿಗೆ ಏಳು ದಿನ ಮೊದಲೇ ಸುಣ್ಣ ಬಣ್ಣಗಳಿಂದ ಕಂಗೊಳಿಸುವ ಗುಡಿಗಳು ಸಿಂಗರಿಸಿದ ಪಲ್ಲಕ್ಕಿಗಳು ಕಣ್ಮನ ಸೆಳೆಯುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.