ADVERTISEMENT

ಹೊಸಪೇಟೆ |14,232 ಮಂದಿಗೆ ನಿವೇಶವಿಲ್ಲ: 961 ಜನರಿಗೆ ಸೂರಿಲ್ಲ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 5:06 IST
Last Updated 10 ಸೆಪ್ಟೆಂಬರ್ 2025, 5:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿ ನಿವೇಶನಕ್ಕಾಗಿ 14,232 ಮಂದಿ ಮತ್ತು ಸೂರಿಗಾಗಿ 961 ಮಂದಿ ಅರ್ಜಿ ಸಲ್ಲಿಸಿದ್ದಾರೆ, ಸರ್ಕಾರಿ ಜಾಗ ನಗರಸಭೆಗೆ ಹಸ್ತಾಂತರಗೊಂಡ ಬಳಿಕ ಮನೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.

ಶಾಸಕ ಎಚ್.ಆರ್.ಗವಿಯಪ್ಪ ಅವರು ಈಚೆಗೆ ಕೊನೆಗೊಂಡ ವಿಧಾನಸಭೆ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದ್ದು, ಪ್ರಧಾನಮಂತ್ರಿ ಅವಾಸ್‌ ಯೋಜನೆ 2.0 ಅಡಿಯಲ್ಲಿ ಇಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ, ಜಿ+2 ಮಾದರಿಯಲ್ಲಿ ಆಶ್ರಯ ಯೋಜನೆಯಡಿಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರಿ ಜಾಗವನ್ನು ಹಸ್ತಾಂತರಿಸುವಂತೆ ಪೌರಾಯುಕ್ತರು ಜಿಲ್ಲಾಧಿಕಾರಿ ಅವರಿಗೆ 2022ರ ಆಗಸ್ಟ್‌ 3ರಂದು ಪತ್ರ ಬರೆದಿದ್ದಾರೆ ಎಂದು ಹೇಳಿದ್ದಾರೆ.

ಗ್ರಾಮೀಣದಲ್ಲೂ ವಸತಿ ರಹಿತರು: ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ 2,914 ವಸತಿ ರಹಿತರು ಮತ್ತು 2,133 ನಿವೇಶನ ರಹಿತರು ಗ್ರಾಮೀಣ ಪ್ರದೇಶದ ವಸತಿರಹಿತರ ಸಮೀಕ್ಷೆಯ ವೇಳೆ ಕಂಡುಬಂದಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ADVERTISEMENT

ಪ್ರಧಾನಮಂತ್ರಿ ಆವಾಸ್‌ (ಗ್ರಾಮೀಣ) ಯೋಜನೆಯಡಿಯಲ್ಲಿ 2024–25ನೇ ಸಾಲಿನಲ್ಲಿ ತಾಲ್ಲೂಕಿಗೆ 163 ಮನೆಗಳ ಗುರಿ ನೀಡಲಾಗಿದ್ದು, ಈವರೆಗೆ 136 ಮನೆಗಳಿಗೆ ಮಂಜೂರಾತಿ ಆದೇಶ ನೀಡಲಾಗಿದೆ. ಇನ್ನುಳಿದ ಗುರಿಗೆ ಫಲಾನುಭವಿಗಳ ಮಂಜೂರಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮುಂದಿನ ಬಜೆಟ್‌ನಲ್ಲಿ ರಾಜ್ಯ ವಸತಿ ಯೋಜನೆಗಳಡಿ ನಿಗದಿಪಡಿಸಬಹುದಾದ ಹೊಸ ಮನೆಗಳ ಗುರಿಗೆ ಅನುಗುಣವಾಗಿ ತಾಲ್ಲೂಕಿಗೆ ಮನೆಗಳ ಗುರಿ ನಿಗದಿಪಡಿಸಿ ವಸತಿ ಸೌಕರ್ಯ ಒದಗಿಸಲು ಪರಿಶೀಲಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

‘ಆವಾಸ್ ಸಾಫ್ಟ್‌ನಲ್ಲೇ ಕ್ರಮ’

‘ಸರ್ಕಾರದ ಸೂಚನೆಯಂತೆ ಆವಾಸ್ ಸಾಫ್ಟ್‌ನಲ್ಲಿ ವಸತಿರಹಿತರು ನಿವೇಶನರಹಿತರ ಕುರಿತ ಮಾಹಿತಿ ನಮೂದಿಸುವ ಕೆಲಸ ಕಳೆದ ಎರಡು ತಿಂಗಳಿಂದ ನಡೆಯುತ್ತಿದೆ. ನಗರದಲ್ಲಿ ನಿಗದಿತ ಸಮಯದೊಳಗೆ ಆನ್‌ಲೈನ್‌ ಅರ್ಜಿ ಸಲ್ಲಿಸಿದವರ ಸಂಖ್ಯೆ 14 ಸಾವಿರದಷ್ಟಿರುವುದು ನಿಜ. ಸದ್ಯ ಅದನ್ನು ನಿಲ್ಲಿಸಲಾಗಿದೆ. ಇಲ್ಲಿ ಕೆಲವರು ಮನೆ ನಿವೇಶನ ಇದ್ದವರೂ ಅರ್ಜಿ ಹಾಕಿರುವ ಸಾಧ್ಯತೆ ಇದೆ ಅದನ್ನು ನಗರಸಭೆಯವರು ಪರಿಶೀಲಿಸುತ್ತಾರೆ. ಈಗ ನಮಗೆ ಎಷ್ಟು ಮಂದಿ ನಿವೇಶನ ರಹಿತರು ವಸತಿರಹಿತರು ಇದ್ದಾರೆ ಎಂಬ ಅಧಿಕೃತ ಮಾಹಿತಿ ಲಭಿಸಿದೆ ಇದು ಮೊದಲ ಹಂತ. ಬಳಿಕ ನಗರಸಭೆಯಿಂದ ನಿವೇಶನ ಅಭಿವೃದ್ಧಿಪಡಿಸಿ ನಿಯಮಪ್ರಕಾರ ಎಸ್‌ಸಿ ಎಸ್‌ಟಿ ಅಂಗವಿಕಲರು ಸಾಮಾನ್ಯ ವರ್ಗಕ್ಕೆ ನಿಗದಿಪಡಿಸುವುದು ಸಹಿತ ಇತರ ಪ್ರಕ್ರಿಯೆಗಳು ನಡೆಯಬೇಕಾಗುತ್ತದೆ. ಬಳಿಕವಷ್ಟೇ ನಿವೇಶನ ಹಸ್ತಾಂತರ ಸಾಧ್ಯ’ ಎಂದು ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.