ADVERTISEMENT

ಹೊಸಪೇಟೆ | ಸಂಭ್ರಮದ ಈದ್‌; ಮುಸ್ಲಿಮರಿಂದ ವಿಶೇಷ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2023, 7:10 IST
Last Updated 22 ಏಪ್ರಿಲ್ 2023, 7:10 IST
ಸಾವಿರಾರು ಮುಸ್ಲಿಮರು ನಗರದ ಜೈಭೀಮ್‌ ವೃತ್ತದಲ್ಲಿರುವ ಈದ್ಗಾ ಮೈದಾನದಲ್ಲಿ ಶನಿವಾರ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಸಾವಿರಾರು ಮುಸ್ಲಿಮರು ನಗರದ ಜೈಭೀಮ್‌ ವೃತ್ತದಲ್ಲಿರುವ ಈದ್ಗಾ ಮೈದಾನದಲ್ಲಿ ಶನಿವಾರ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.   

ಹೊಸಪೇಟೆ (ವಿಜಯನಗರ): ಈದ್‌–ಉಲ್‌–ಫಿತ್ರ್‌ ಅಂಗವಾಗಿ ಸಾವಿರಾರು ಮುಸ್ಲಿಮರು ನಗರದ ಜೈಭೀಮ್‌ ವೃತ್ತದಲ್ಲಿರುವ ಈದ್ಗಾ ಮೈದಾನದಲ್ಲಿ ಶನಿವಾರ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ನಸುಕಿನ ಜಾವ ಮನೆಯಲ್ಲಿ ವಿಶೇಷ ಹಾಗೂ ಉಪವಾಸದ ಕೊನೆಯ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು, ಹಬ್ಬಕ್ಕೆ ಖರೀದಿಸಿದ್ದ ಹೊಸ ಬಟ್ಟೆಗಳನ್ನು ಧರಿಸಿ, ಮನೆಯ ಪುರುಷ ಸದಸ್ಯರು ವಿವಿಧ ಬಡಾವಣೆಗಳಿಂದ ಗುಂಪು ಗುಂಪಾಗಿ ಈದ್ಗಾ ಮೈದಾನಕ್ಕೆ ಬಂದರು. ಅಲ್ಲಿ ಏರ್ಪಡಿಸಿದ್ದ ವಿಶೇಷ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಚಿಣ್ಣರು ಪರಸ್ಪರ ಆಲಿಂಗನ ಮಾಡಿಕೊಂಡು ಹಬ್ಬದ ಶುಭ ಕೋರುವ ದೃಶ್ಯ ಗಮನ ಸೆಳೆದವು.

ಇದೇ ವೇಳೆ ಕೆಲವರು ಬಡವರಿಗೆ ಹೊಸ ಬಟ್ಟೆ, ಧಾನ್ಯ ಹಾಗೂ ಹಣ ದಾನ ಮಾಡಿದರು. ಇನ್ನು, ಮಹಿಳೆಯರು ಮನೆಯಲ್ಲೇ ಪ್ರಾರ್ಥನೆ ಮಾಡಿದರು. ಹಬ್ಬಕ್ಕಾಗಿ ಹಾಲು, ಶಾವಿಗೆ, ಗೋಡಂಬಿ, ಒಣದ್ರಾಕ್ಷಿ, ಬಾದಾಮಿಯಿಂದ ತಯಾರಿಸಿದ ಖೀರ್‌, ಬಿರಿಯಾನಿ ಸವಿದರು. ಬಂಧು–ಬಾಂಧವರು, ನೆರೆ ಹೊರೆಯವರು, ಅನ್ಯ ಧರ್ಮಿಯರನ್ನು ಮನೆಗೆ ಆಹ್ವಾನಿಸಿ ಊಟ ಉಣಬಿಡಿಸಿ ಸೌಹಾರ್ದತೆ ತೋರಿದರು.

ADVERTISEMENT

ಇನ್ನು, ಈದ್ಗಾ ಮೈದಾನದ ಬಳಿ ಅಂಜುಮನ್‌ ಸಮಿತಿ ಅಧ್ಯಕ್ಷ ಮಹಮ್ಮದ್‌ ಇಮಾಮ್‌ ನಿಯಾಜಿ, ಅಬ್ದುಲ್‌ ಖಾದರ್‌ ರಫಾಯಿ, ಸದಸ್ಯರಾದ ಅಬ್ದುಲ್‌ ಖದೀರ್‌, ಕೆ. ಬಡಾವಲಿ, ಮೊಹಸಿನ್‌, ಸದ್ದಾಂ ಹುಸೇನ್‌, ಮನ್ಸೂರ್‌ ಅಹಮ್ಮದ್‌, ವಕ್ಫ್‌ ಬೋರ್ಡ್ ಜಿಲ್ಲಾಧ್ಯಕ್ಷ ಟಿಂಕರ್‌ ರಫೀಕ್‌, ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್‌, ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಆರ್‌. ಗವಿಯಪ್ಪ ಅವರ ಮಗ ಗುರುದತ್‌ ಸೇರಿದಂತೆ ಇತರ ಮುಖಂಡರು ಪ್ರಾರ್ಥನೆ ಸಲ್ಲಿಸಿ ಹೊರಬಂದವರಿಗೆ ಶುಭ ಕೋರಿದರು.

ತಾಲ್ಲೂಕಿನ ಕಮಲಾಪುರ, ಬೈಲುವದ್ದಿಗೇರಿ, ಧರ್ಮಸಾಗರ, ಮರಿಯಮ್ಮನಹಳ್ಳಿ, ಪಾಪಿನಾಯಕನಹಳ್ಳಿ ಸೇರಿದಂತೆ ಹಲವೆಡೆ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಗರದ ಜೈಭೀಮ್‌ ವೃತ್ತದಲ್ಲಿ ವಿಶೇಷ ಪ್ರಾರ್ಥನೆಗೆ ತೆರಳುವ ವೇಳೆ ಹಾಗೂ ಅಲ್ಲಿಂದ ನಿರ್ಗಮಿಸುವ ವೇಳೆ ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ಕಾಲೇಜು ರಸ್ತೆ, ಚಿತ್ತವಾಡ್ಗಿ ರಸ್ತೆ, ರಾಮ ಟಾಕೀಸ್‌ ಸೇರಿದಂತೆ ಇತರೆ ಪ್ರಮುಖ ರಸ್ತೆಗಳಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.