ಬಂಧನ
ಹೊಸಪೇಟೆ (ವಿಜಯನಗರ): ಕೂಡ್ಲಿಗಿ ತಾಲ್ಲೂಕಿನ ಚಿರಬಿಯಲ್ಲಿ 2019ರ ನವೆಂಬರ್ 4ರಂದು ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ದೊಡ್ಡಗೊಲ್ಲರಹಟ್ಟಿ ಗ್ರಾಮದ ಮಹಾಲಿಂಗ ಎಂಬಾತನಿಗೆ ಇಲ್ಲಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಶಿಕ್ಷೆಯ ಜತೆಗೆ ಅಪರಾಧಿ ₹1 ಲಕ್ಷ ದಂಡ ಕಟ್ಟಬೇಕು, ಇದರಲ್ಲಿ ₹40 ಸಾವಿರ ಮೃತ ಎಂ.ಮಂಜುನಾಥನ ವಾರಸುದಾರರಿಗೆ, ₹40 ಸಾವಿರ ಮೃತ ಸುಜಾತಾ ವಾರಸುದಾರರಿಗೆ ನೀಡಬೇಕು ಹಾಗೂ ₹20 ಸಾವಿರವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ನ್ಯಾಯಾಧೀಶ ಡಿ.ಪಿ.ಕುಮಾರಸ್ವಾಮಿ ತಮ್ಮ ಆದೇಶದಲ್ಲಿ ತಿಳಿಸಿದರು.
ಘಟನೆಯ ಹಿನ್ನೆಲೆ: ಚಿರಬಿ ಮೀಸಲು ಅರಣ್ಯದಲ್ಲಿ ಮಹಾಲಿಂಗ ಮತ್ತು ಸುಜಾತಾ ಕುರಿಹಟ್ಟಿ ಹಾಕಿ, ಗುಡಿಸಲಿನಲ್ಲಿ ವಾಸವಿದ್ದರು. ಮಂಜುನಾಥನು ಸುಜಾತಾ ಜತೆಗೆ ಸಲುಗೆಯಿಂದ ವರ್ತಿಸುತ್ತಿದ್ದುದನ್ನು ಕಂಡಿದ್ದ ಮಹಾಲಿಂಗ, ತನ್ನ ಹಂಡತಿಯ ಶೀಲದ ಬಗ್ಗೆ ಸಂಶಯಗೊಂಡಿದ್ದ. ಆ ಕುರಿತು ಆಗಾಗ ಜಗಳ ಸಹ ಆಗುತ್ತಿತ್ತು. 2019ರ ನವೆಂಬರ್ 4ರಂದು ಬೆಳಿಗ್ಗೆ 6 ಗಂಟೆಗೆ ಚಿರಬಿ ಮೀಸಲು ಅರಣ್ಯದ ಮಸಕಲ್ಲುಬಂಡಿ ಹಳ್ಳದಲ್ಲಿ ಇಬ್ಬರೂ ಜತೆಯಾಗಿ ಇರುವುದನ್ನು ಕಂಡ ಮಹಾಲಿಂಗ ಅವರಿಬ್ಬರನ್ನೂ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದ.
ಅಂದಿನ ತನಿಖಾಧಿಕಾರಿ ಪಿಎಸ್ಐ ತಿಮ್ಮಣ್ಣ ಎಸ್.ಚಾಮನೂರು ಹಾಗೂ ಬಳಿಕ ಸಿಪಿಐ ಪಂಪನಗೌಡ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಟಿ.ಅಂಬಣ್ಣ ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.