
ರೈಲ್ವೆಗೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಹೊಸಪೇಟೆಯಲ್ಲಿ ಸೋಮವಾರ ಸಂಸದ ಇ.ತುಕಾರಾಂ ಅವರಿಗೆ ಮನವಿ ಸಲ್ಲಿಸಲಾಯಿತು
–ಪ್ರಜಾವಾಣಿ ಚಿತ್ರ
ಹೊಸಪೇಟೆ (ವಿಜಯನಗರ): ಬೆಳಗಾವಿ-ಹೊಸಪೇಟೆ-ರಾಯಚೂರು-ಹೈದರಾಬಾದ್(ಮಣಗೂರು) ರೈಲು ಪುನರಾರಂಭ, ಮಂಗಳೂರಿಗೆ ನೇರ ರೈಲು, ಹೊಸಪೇಟೆ ರೈಲು ನಿಲ್ದಾಣದ ಆಧುನೀಕರಣ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸೋಮವಾರ ಇಲ್ಲಿ ಸಂಸದ ಇ.ತುಕಾರಾಂ ಅವರಿಗೆ ಮನವಿ ಸಲ್ಲಿಸಲಾಯಿತು.
ವಿಜಯನಗರ ರೈಲ್ವೆ ಬಳಕೆದಾರರ ಸಂಘದ ಪದಾಧಿಕಾರಿಗಳು ಅಧ್ಯಕ್ಷ ವೈ.ಯಮುನೇಶ್, ಕಾರ್ಯದರ್ಶಿ ಮಹೇಶ್ ಕುಡುತಿನಿ ಅವರ ನೇತೃತ್ವದಲ್ಲಿ ಸಂಸದರ ಕಚೇರಿಗೆ ತೆರಳಿ ಈ ಮನವಿ ಸಲ್ಲಿಸಿದರು.
ಬೆಳಗಾವಿ-ಹೊಸಪೇಟೆ-ರಾಯಚೂರು-ಹೈದರಾಬಾದ್(ಮಣಗೂರು) ರೈಲು ಎಂಟು ವರ್ಷಗಳಿಂದ ಸಂಚರಿಸುತ್ತಿತ್ತು, ಆರು ತಿಂಗಳಿಂದ ಅದನ್ನು ನಿಲ್ಲಿಸಲಾಗಿದೆ, ಇಲ್ಲವಾದರೆ ಹುಬ್ಬಳ್ಳಿ-ರಾಯಚೂರು ನಡುವೆ ನೂತನ ರೈಲು ಆರಂಭಿಸಬೇಕು. ಮಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸುವುದರಿಂದ ಹಂಪಿಯಿಂದ ಇನ್ನೊಂದು ವಿಶ್ವ ಪಾರಂಪರಿಕ ತಾಣವಾದ ಬೇಲೂರು, ಹಳೇಬೀಡು ಹಾಗೂ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಮಂಗಳೂರು ಮುಂತಾದ ಪ್ರವಾಸಿ, ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಕೇಂದ್ರಗಳ ನಡುವೆ ಸಂಪರ್ಕ ದೊರೆಯುವಂತಾಗುತ್ತದೆ ಎಂದು ಒತ್ತಾಯಿಸಲಾಯಿತು.
ಹೊಸಪೇಟೆ-ಸೊಲ್ಲಾಪುರದ ನಡುವೆ ಸಂಚರಿಸುತ್ತಿರುವ ರೈಲನ್ನು ಪಂಢರಪುರದವರೆಗೆ ವಿಸ್ತರಿಸಬೇಕು, ಹೊಸಪೇಟೆ ರೈಲು ನಿಲ್ದಾಣದ ಆಧುನಿಕರಣ, ಪಿಟ್‍ಲೈನ್ ನಿರ್ಮಾಣ ಹಾಗೂ 2 ನೂತನ ಪ್ಲಾಟ್ ಫಾರಂಗಳ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಲಾಯಿತು.
ಮುಖಂಡರಾದ ದೀಪಕ್ ಉಳ್ಳಿ, ಜೀರ ಕಲ್ಲೇಶ್, ಪ್ರಭಾಕರ್, ಎಂ.ಶಂಕ್ರಪ್ಪ, ಕೆ.ವಿ.ರಾಮಾಲಿ, ಆರ್.ರಮೇಶ್‍ಗೌಡ, ನಜೀರ್ ಸಾಬ್, ಶ್ರವಣ್‍ಕುಮಾರ್, ಜೆ.ವರುಣ್, ಮನೋಹರ್, ಕೃಷ್ಣಮೂರ್ತಿರಾವ್, ನಾಗರಾಜರಾವ್, ಅರುಣ್‍ಕುಮಾರ್, ಶ್ರೀನಿವಾಸರಾವ್, ಅಮರನಾಥ್ ಕಟಾರೆ, ಹರಿಶಂಕರರಾವ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.