ADVERTISEMENT

ಹೂವಿನಹಡಗಲಿ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ: ಮಂದಿರ, ಮಸೀದಿಯೇ ಮೊದಲ ಆದ್ಯತೆ

ಹೆಚ್ಚು ಅನುದಾನ ಸಮುದಾಯಗಳಿಗೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 29 ಅಕ್ಟೋಬರ್ 2021, 19:30 IST
Last Updated 29 ಅಕ್ಟೋಬರ್ 2021, 19:30 IST
ಹೂವಿನಹಡಗಲಿಯಲ್ಲಿನ ನಿರ್ಮಾಣ ಹಂತದ ಕನಕ ಭವನ
ಹೂವಿನಹಡಗಲಿಯಲ್ಲಿನ ನಿರ್ಮಾಣ ಹಂತದ ಕನಕ ಭವನ   

ಹೊಸಪೇಟೆ (ವಿಜಯನಗರ): ಜಿಲ್ಲೆಯ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಅವರು ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಂಡಿದ್ದಾರೆ. ಆದರೆ, ಅದರಲ್ಲಿನ ಹೆಚ್ಚಿನ ಪಾಲು ಮಂದಿರ, ಮಸೀದಿಗೆ ಕೊಟ್ಟಿದ್ದಾರೆ.

2018–19ರಿಂದ 2020–21ನೇ ಸಾಲಿನ ಮೂರು ವರ್ಷಗಳ ಕ್ಷೇತ್ರಾಭಿವೃದ್ಧಿ ನಿಧಿಯ ಪೂರ್ಣ ಅನುದಾನವನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಖರ್ಚು ಮಾಡಿದ್ದಾರೆ. 2018–19ನೇ ಸಾಲಿನ ಅನುದಾನ ಹೊರತುಪಡಿಸಿದರೆ, ಇನ್ನುಳಿದಎರಡು ವರ್ಷಗಳ ಅಂಕಿ– ಅಂಶಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಎಲ್ಲ ಸಮುದಾಯಗಳ ಸಮುದಾಯ ಭವನ, ಮಂದಿರ, ಮಸೀದಿಗಳಿಗೆ ಧಾರಾಳವಾಗಿ ಹಣ ನೀಡಿದ್ದಾರೆ. 2018–19ನೇ ಸಾಲಿನ ಹೆಚ್ಚಿನ ಅನುದಾನವನ್ನು ರಸ್ತೆಗಳ ಅಭಿವೃದ್ಧಿಗೆ ವಿನಿಯೋಗಿಸಿದ್ದಾರೆ.

2019–20, 2020–21ನೇ ಸಾಲಿನಲ್ಲಿ ಗ್ರಾಮೀಣ ಭಾಗಗಳಲ್ಲಿ ಮೂಲಸೌಕರ್ಯ, ಶಾಲೆಗಳಲ್ಲಿ ಶೌಚಾಲಯ, ಕೊಠಡಿ ನಿರ್ಮಾಣಕ್ಕೂ ಅನುದಾನ ಕೊಟ್ಟಿದ್ದಾರೆ. ಆದರೆ, ಒಟ್ಟು ನಿಧಿಯಲ್ಲಿ ಇದು ಕಡಿಮೆಯಾಗಿದೆ.ಈ ಕ್ಷೇತ್ರಗಳಿಗೆ ಕೊನೆಯ ಆದ್ಯತೆ ಎನ್ನುವುದು ಇದರಿಂದ ತಿಳಿಯುತ್ತದೆ.2018–19ನೇ ಸಾಲಿನಲ್ಲಿ ಬಿಡುಗಡೆಯಾದ ಒಟ್ಟು ₹1.53 ಕೋಟಿಯಲ್ಲಿ 35 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೆ. ಇದರಲ್ಲಿ 25 ರಸ್ತೆ ಕಾಮಗಾರಿ, 9 ಮಸೀದಿ, ಒಂದು ದೇವಸ್ಥಾನದ ಕಾಮಗಾರಿಗೆ ಅನುದಾನ ಕೊಟ್ಟಿದ್ದಾರೆ.

ADVERTISEMENT

2019-20ರಲ್ಲಿ ಬಿಡುಗಡೆಯಾದ ₹1.63 ಕೋಟಿ ಅನುದಾನದಲ್ಲಿ 31 ಕಾಮಗಾರಿಗಳಿಗೆ ಅನುದಾನ ಹಂಚಿಕೆ ಮಾಡಿದ್ದಾರೆ. ಇದರಲ್ಲಿ 17 ದೇವಸ್ಥಾನ, ಆರು ಮಸೀದಿಗಳ ಅಭಿವೃದ್ದಿ, ಎರಡು ರಥಗಳ ನಿರ್ಮಾಣ, ಎರಡು ಸಮುದಾಯ ಭವನ, ಮೂರು ರಸ್ತೆಗಳು, 1 ಅಂಗನವಾಡಿ ಸೇರಿದೆ.

ಇನ್ನು, 2020-21ರಲ್ಲಿ ಬಿಡುಗಡೆಯಾದ ₹1.15 ಕೋಟಿಯಲ್ಲಿ 20 ಕಾಮಗಾರಿಗೆ ಅನುದಾನ ಹಂಚಿಕೆ ಮಾಡಿದ್ದಾರೆ. ಇದರಲ್ಲಿ 14 ದೇವಾಲಯ, ತಲಾ ಎರಡು ಸಿ.ಸಿ. ರಸ್ತೆ, ಸಮುದಾಯ ಭವನ, ತಲಾ ಒಂದು ಮಸೀದಿ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಅನುದಾನ ಕೊಟ್ಟಿದ್ದಾರೆ.

‘ಹೆಚ್ಚಿನ ಶಾಸಕರು ಕ್ಷೇತ್ರಾಭಿವೃದ್ಧಿ ನಿಧಿಯನ್ನು ಆಯಾ ಸಮುದಾಯಗಳನ್ನು ಓಲೈಸಲು ಬಳಸುತ್ತಿದ್ದಾರೆ. ಇದು ದುರದೃಷ್ಟಕರ.ಇದೇ ಹಣದಲ್ಲಿ ರಸ್ತೆಗಳ ಅಭಿವೃದ್ಧಿಯೂ ಮಾಡುತ್ತಿದ್ದಾರೆ. ಅದಕ್ಕಾಗಿ ಪ್ರತ್ಯೇಕ ಅನುದಾನ ಇರುತ್ತದೆ. ಈ ಹಣ ಶಾಲೆಗಳು, ಹಳ್ಳಿಗಳ ಸುಧಾರಣೆಗೆ ಬಳಸಿಕೊಂಡರೆ ಉತ್ತಮ ಎನ್ನುತ್ತಾರೆ’ ಹೊಳಲು ಗ್ರಾಮದ ಬಸವರಾಜ.

ಈ ಕುರಿತು ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.