ಹೂವಿನಹಡಗಲಿ (ವಿಜಯನಗರ ಜಿಲ್ಲೆ): ‘ಪಟ್ಟಣದ ಮದಲಗಟ್ಟಿ ವೃತ್ತದ ಬಳಿ ಇರುವ ಕರ್ನಾಟಕ ಆಗ್ರೋ ಕೇಂದ್ರದಲ್ಲಿ ಯೂರಿಯಾ ಗೊಬ್ಬರ ಕಡಿಮೆ ಇರುವುದಾಗಿ ಸುಳ್ಳು ಹೇಳಿ, ಅನ್ಯಾಯ ಮಾಡಲಾಗಿದೆ’ ಎಂದು ರೈತರು ಆರೋಪಿಸಿದರು.
‘ಶನಿವಾರ ಕೇಂದ್ರದ ಮಾಲೀಕರು 40 ಚೀಲ ಮಾತ್ರ ಗೊಬ್ಬರವಿದೆ ಎಂಬುದಾಗಿ ಹೇಳಿದರು. ಗೋದಾಮು ಬೀಗ ತೆಗೆಸಿದಾಗ 320 ಚೀಲ ಯೂರಿಯಾ ದಾಸ್ತಾನು ಪತ್ತೆಯಾಯಿತು’ ಎಂದು ತಿಳಿಸಿದರು.
‘ತಾಲ್ಲೂಕಿನಲ್ಲಿನ ಮುಂಗಾರು ಬೆಳೆಗಳಿಗೆ 11,000 ಟನ್ ಯೂರಿಯಾ ಗೊಬ್ಬರದ ಬೇಡಿಕೆ ಇದ್ದು, 10,000 ಟನ್‌ಗೂ ಹೆಚ್ಚು ಗೊಬ್ಬರ ಪೂರೈಕೆಯಾಗಿದೆ ಎಂಬುದಾಗಿ ಅಧಿಕಾರಿಗಳು ಹೇಳುತ್ತಾರೆ. ವರ್ತಕರು ಗೊಬ್ಬರ ದಾಸ್ತಾನು ಮಾಡಿಕೊಂಡು, ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ’ ಎಂದು ರೈತ ಎಂ. ಶಿವರಾಜು ಹೇಳಿದರು.
ಕೃಷಿ ಇಲಾಖೆ ಅಧಿಕಾರಿಗಳು, ಪೊಲೀಸರು ಸ್ಥಳಕ್ಕಾಗಮಿಸಿ, ಕೆಲವು ರೈತರಿಗೆ ತಲಾ ಒಂದು ಚೀಲದಂತೆ ಗೊಬ್ಬರ ಕೊಡಿಸಿದರು. ಆದರೆ, ಸಾಲಿನ ಕೊನೆಯಲ್ಲಿದ್ದವರಿಗೆ ಗೊಬ್ಬರ ಸಿಗದೆ ವಾಪಸ್ಸಾದರು.
‘ತಾಲ್ಲೂಕಿನ ಬೇಡಿಕೆಯಷ್ಟು ಗೊಬ್ಬರ ಪೂರೈಕೆಯಾಗಿದೆ. ರೈತರು ಯೂರಿಯಾ ಹೆಚ್ಚು ಬಳಸುತ್ತಿರುವುದರಿಂದ ಕೊರತೆ ಉಂಟಾಗಿದೆ. ಕೃತಕ ಅಭಾವ ಸೃಷ್ಟಿಸಿದರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಮಹ್ಮದ್ ಆಶ್ರಫ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.