ADVERTISEMENT

ಹೊಸಪೇಟೆಯಲ್ಲಿ ನಾನೇ ಸಕ್ಕರೆ ಕಾರ್ಖಾನೆ ಸ್ಥಾಪಿಸ್ತೇನೆ ಎಂದ ಶಾಸಕ ಗವಿಯಪ್ಪ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 13:08 IST
Last Updated 19 ಡಿಸೆಂಬರ್ 2023, 13:08 IST
<div class="paragraphs"><p> ಶಾಸಕ ಗವಿಯಪ್ಪ</p></div>

ಶಾಸಕ ಗವಿಯಪ್ಪ

   

ಹೊಸಪೇಟೆ (ವಿಜಯನಗರ): ‘ಹೊಸಪೇಟೆ ಸುತ್ತಮುತ್ತಲಿನ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಅಗತ್ಯವಾಗಿದೆ. ಯಾರೂ ಸ್ಥಾಪಿಸದಿದ್ದರೆ ನಾನೇ ಅದನ್ನು ಸ್ಥಾಪಿಸುತ್ತೇನೆ’ ಎಂದು ಶಾಸಕ ಎಚ್.ಆರ್.ಗವಿಯಪ್ಪ ಘೋಷಿಸಿದ್ದಾರೆ.

‘ಕಾರ್ಖಾನೆ ಸ್ಥಾಪನೆ ಸಂಬಂಧ ಎರಡು, ಮೂರು ಪ್ರಸ್ತಾವಗಳು ಬಂದಿವೆ. ಒಂದು ಸರ್ಕಾರಿ ಜಮೀನನ್ನು ಈಗಾಗಲೇ ಗುರುತಿಸಲಾಗಿದೆ. ಅದು ಸರಿಹೋಗಲಿಲ್ಲ ಎಂದಾದರೆ ಖಾಸಗಿ ಜಮೀನು ಖರೀದಿಸಿಯಾದರೂ ಸಕ್ಕರೆ ಕಾರ್ಖಾನೆ ಸ್ಥಾಪಿಸಲಾಗುವುದು. ಯಾರೂ ಮುಂದೆ ಬಾರದೆ ಇದ್ದರೆ ನಾನೇ ಸ್ಥಾ‍ಪಿಸುತ್ತೇನೆ. ವಿವಿಧ ಪ್ರಸ್ತಾವಗಳ ಬಗ್ಗೆ ನಾನು ಮುಖ್ಯಮಂತ್ರಿಗಳ ಜತೆಗೆ ಚರ್ಚಿಸುತ್ತೇನೆ’ ಎಂದು ಅವರು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಸರ್ಕಾರಿ ಜಾಗ ಸಿಕ್ಕರೆ ಸರಿ, ಸಿಗದಿದ್ದರೆ ಖಾಸಗಿ ಜಮೀನು ಖರೀದಿಸಿಯಾದರೂ ಸಕ್ಕರೆ ಕಾರ್ಖಾನೆ ಸ್ಥಾಪಿಸುವುದು ನಿಶ್ಚಿತ’ ಎಂಬುದನ್ನು ಅವರು ಪುನರುಚ್ಚರಿಸಿದರು.

ಹೊಸಪೇಟೆಯ ಜಂಬುನಾಥ ರಸ್ತೆಯಲ್ಲಿನ ಸರ್ಕಾರಿ ಜಮೀನಿನಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಕುರಿತಂತೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಹಂಪಿ ಶುಗರ್ಸ್ ಕಂಪನಿಗೆ ಅನುಮತಿ ನೀಡಲಾಗಿತ್ತು. ಇದೀಗ ಕಂಪನಿಯ ಮಾಲೀಕರಾದ  ಸಂಸದ ಜಿ.ಎಂ.ಸಿದ್ದೇಶ್ವರ್‌ ಅವರು ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ, ಇದರ ಬಗ್ಗೆ ತಾವು ಏನು ಹೇಳುತ್ತೀರಿ ಎಂದು ಕೇಳಿದಾಗ, ‘ಈಗ ನಮ್ಮ ಸರ್ಕಾರ ಇದೆ. ನಾನು ಇಲ್ಲಿನ ಶಾಸಕನಿದ್ದೇನೆ. ಈ ಭಾಗದ ಜನರಿಗೆ ಏನು ಬೇಕು ಎಂಬುದನ್ನು ನಾನು ನಿರ್ಧರಿಸುತ್ತೇನೆ. ಸರ್ಕಾರಿ ಜಾಗವನ್ನು ಹೀಗೆ ಪರಭಾರೆ ಮಾಡಲಾಗದು, ಸ್ವಂತ ಜಾಗವಾಗಿದ್ದರೆ ಅವರನ್ನು ಪ್ರಶ್ನಿಸುವಂತಿರಲಿಲ್ಲ. ಆದರೂ ನಾನು ಅವರೊಂದಿಗೆ ಮಾತನಾಡುತ್ತೇನೆ’ ಎಂದರು.

70ರ ದಶಕದಲ್ಲಿ ಜಿಂದಾಲ್‌ ಕಂಪನಿಗೆ 3,500 ಎಕರೆಯಷ್ಟು ಜಾಗ ಕೊಟ್ಟಿದ್ದು ಬಿಟ್ಟರೆ ಬಳಿಕ ಸರ್ಕಾರಿ ಜಾಗವನ್ನು ಯಾವ  ಕಂಪನಿಗೂ ಕೊಟ್ಟಿಲ್ಲ. ಹೀಗಾಗಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸರ್ಕಾರಿ ಜಾಗವನ್ನು ನೆಚ್ಚಿಕೊಳ್ಳುವುದು ಸರಿಯಲ್ಲ ಎಂಬುದನ್ನು ಶಾಸಕರು ಒತ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.