ಹೊಸಪೇಟೆ (ವಿಜಯನಗರ): ‘ಹೊಸಪೇಟೆ ಸಮೀಪದ ಗಾದಿಗನೂರು ಬಳಿಯಿರುವ ತಮ್ಮ ಸ್ವಂತ ಜಮೀನಿನಲ್ಲಿ ಕೆಲವರು ಅಕ್ರಮವಾಗಿ ಮರಳು ಮತ್ತು ಮಣ್ಣು ಗಣಿಗಾರಿಕೆ ಹಾಗೂ ಸಾಗಾಣಿಕೆ ನಡೆಸುತ್ತಿದ್ದಾರೆ, ಅವರ ವಿರುದ್ಧ ಕ್ರಮಕೈಗೊಳ್ಳಿ’ ಎಂದು ಒತ್ತಾಯಿಸಿ ಕಂಪ್ಲಿ ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದ ಕೆ.ಸಿ.ಸಿದ್ದಬಸಪ್ಪ ಅವರು ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಿದರು.
‘ಗಾದಿಗನೂರು ಗ್ರಾಮದ ವ್ಯಾಪ್ತಿಯ 43.86 ಎಕರೆಯಲ್ಲಿ ನನ್ನ ಹೆಸರಿಗೆ 5.93 ಎಕರೆ ಭೂಮಿಯನ್ನು ಖರೀದಿಸಿದ್ದೇನೆ. ಆದರೆ ನಾನು ಅಲ್ಲಿ ವಾಸವಿಲ್ಲ. ಗಾದಿಗನೂರು ಗ್ರಾಮದ ಕೆಲವು ದರೋಡೆಕೋರ ಗುಂಪುಗಳು ನನ್ನ ಭೂಮಿಯಲ್ಲಿ ಸಿಗುವ ಮರಳು ಮತ್ತು ಮಣ್ಣುನ್ನು ಹಗಲು ರಾತ್ರಿ ದೋಚುತ್ತಿದ್ದಾರೆ. ಅಲ್ಲಿಯವರು ಈ ಕುರಿತು ಸರಿಯಾದ ಮಾಹಿತಿ ನೀಡುತ್ತಿಲ್ಲ. ನಾನು ಹೊಂದಿದ ಸರ್ವೆ ನಂಬರ್‌ನಲ್ಲಿ ಸರ್ಕಾರದ ಮತ್ತು ಅರಣ್ಯ ಇಲಾಖೆಗೆ ಸೇರಿದ ಭೂಮಿಯೂ ಇದೆ. ಅಲ್ಲಿಯೂ ಅಕ್ರಮ ಗಣಿಗಾರಿಕೆ ಮತ್ತು ಸಾಗಾಣಿಕೆ ನಿರಂತರವಾಗಿ ನಡೆಯುತ್ತಿದ್ದರೂ ನಿಯಂತ್ರಿಸಿಲ್ಲ’ ಎಂದರು.
ರಾಜ್ಯ ಛಲವಾದಿ ಮಹಾಸಭಾದ ರಾಜ್ಯ ಘಟಕದ ಉಪಾಧ್ಯಕ್ಷ ಸಿ.ನರಸಪ್ಪ, ಸಲಹೆಗಾರ ಡಿ. ವೆಂಕಟರಮಣಬಾಬು, ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ್ ಬಣ್ಣದಮನೆ, ಸಿ.ಆನಂದ್‍ಕುಮಾರ್, ಜಿ.ದಿವಾಕರಬಾಬು, ಕುಡುತಿನಿ ಬಸಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.