ಹೊಸಪೇಟೆ (ವಿಜಯನಗರ): ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಶನಿವಾರ ರಾತ್ರಿ ನಗರದ ಮೇನ್‌ಬಜಾರ್‌ನ ಹಿಂದೂ ಗಣಪತಿ ಸಹಿತ ಹತ್ತಾರು ಗಣಪತಿ ಪೆಂಡಾಲ್‌ಗಳಿಗೆ ತೆರಳಿ ಕಾರ್ಯಕರ್ತರನ್ನು ಮಾತನಾಡಿಸಿದ್ದು, ಹೊಸ ರಾಜಕೀಯ ದಾಳ ಉರುಳಿಸುವ ಸುಳಿವು ನೀಡಿದ್ದಾರೆ.
ರಾತ್ರಿ 10ರ ಸುಮಾರಿಗೆ ನಗರಕ್ಕೆ ಬಂದ ಅವರು, ಮೇನ್ ಬಜಾರ್‌ನ ಹಿಂದೂ ಮಹಾಗಣಪತಿ, ವಿಕಾಸ ಯುವಕ ಮಂಡಳ ಗಣಪತಿ, ವಡಕರಾಯ ಗುಡಿಯ ಪ್ರಸನ್ನ ಯುವಕ ಮಂಡಳ ಗಣಪತಿ, ಚಿತ್ರಕೇರಿ, ಅಭಯ ಆಂಜನೇಯ ದೇವಸ್ಥಾನ, ವಾಲ್ಮೀಕಿ ವೃತ್ತ, ಉಕ್ಕಡಕೇರಿ ಶಂಕರಮ್ಮ ದೇವಸ್ಥಾನ, ಏಕಲವ್ಯ ಸೇರಿದಂತೆ ಇನ್ನೂ ಮೂರ್ನಾಲ್ಕು ಸಾರ್ವಜನಿಕ ಗಣೇಶ ಪೆಂಡಾಲ್‌ಗಳಿಗೆ ತೆರಳಿದರು. ಅವರ ಜತೆಗೆ ಬಿಜೆಪಿ ರಾಜ್ಯ ಎಸ್‌ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಇದ್ದರು.
‘ಹೊಸಪೇಟೆಗೂ ನನಗೂ ಅವಿನಾಭಾವ ಸಂಬಂಧ ಇದೆ. ನನ್ನ ತಂದೆ ಪೊಲೀಸ್ ನೌಕರಿಯಲ್ಲಿದ್ದಾಗ ಈ ನಗರದಲ್ಲೂ ಕರ್ತವ್ಯ ನಿರ್ವಹಿಸಿದ್ದರು. ಆಗ ನಾನು ಇಲ್ಲಿನ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ 6ನೇ ತರಗತಿಯಲ್ಲಿ ಓದಿದ್ದೆ. ಕರುಣಾಕರ ರೆಡ್ಡಿ ಸಹ ಇಲ್ಲಿ ಓದಿದ್ದಾನೆ. ಸೋಮಶೇಖರ ರೆಡ್ಡಿ ಹುಟ್ಟಿದ್ದು ಇಲ್ಲೇ’ ಎಂದು ಜನಾರ್ದನ ರೆಡ್ಡಿ ಹೇಳಿದರು.
‘ಹೊಸಪೇಟೆ ನನಗೆ ಜನ್ಮಭೂಮಿ ಇದ್ದ ಹಾಗೆ. ಈ ಜನ್ಮಭೂಮಿಯ ಋಣ ತೀರಿಸುವ ಕೆಲಸ ಮಾಡಬೇಕಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ಮೊದಲ ಪಟ್ಟಣದ ನೆಲೆಯಲ್ಲಿ ಹೊಸಪೇಟೆಯನ್ನು ನಿರ್ಮಿಸಲಾಯಿತು. ವಿಜಯನಗರ ಸಾಮ್ರಾಜ್ಯಕ್ಕಿಂತಲೂ ಮೊದಲೇ ಇದ್ದಂತಹ ವಡಕರಾಯ ದೇವಸ್ಥಾನಕ್ಕೆ ಬಂದು ನನ್ನ ಜೀವನ ಸಾರ್ಥಕ ಎನಿಸಿದೆ. ಹಂಪಿ ಉತ್ಸವದ ಸಂದರ್ಭದಲ್ಲಿ ಸರಿಯಾಗಿ ವಡಕರಾಯನ ದರ್ಶನ ಮಾಡಲು ಸಾಧ್ಯವಾಗಿರಲಿಲ್ಲ’ ಎಂದು ಅವರು ಹೇಳಿಕೊಂಡರು.
ಈ ಹಿಂದೆ ಶ್ರೀರಾಮುಲು ಚುನಾವಣೆಗ ನಿಂತಾಗ, ಶಾಂತಾ ಲೋಕಸಭಾ ಸದಸ್ಯರಾದಾಗ ವಡಕರಾಯ ದೇವಸ್ಥಾನದಲ್ಲಿ ಯಜ್ಞ, ಗೋಪೂಜೆ ಮಾಡಿಸಿದ್ದನ್ನು ಅವರು ನೆನಪಿಸಿಕೊಂಡರು.
ಮಧ್ಯರಾತ್ರಿ 2ರ ತನಕವೂ ವಿವಿಧ ಪೆಂಡಾಲ್‌ಗಳ ಭೇಟಿ, ಕಾರ್ಯಕರ್ತರೊಂದಿಗೆ ಚರ್ಚೆ, ಸಂವಾದದಲ್ಲಿ ತೊಡಗಿದ್ದ ಅವರು ಹಲವರ ಹೆಸರು ಹಿಡಿದು ಕರೆದು ಯೋಗಕ್ಷೇಮ ವಿಚಾರಿಸಿದ್ದು ವಿಶೇಷವಾಗಿತ್ತು. ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್ ಮೇಟಿ, ಪ್ರಧಾನ ಕಾರ್ಯದರ್ಶಿ ಮಧುರಚನ್ನ ಶಾಸ್ತ್ರಿ ಇತರರು ಇದ್ದರು.
ಶಾಸಕ ಎಚ್.ಆರ್.ಗವಿಯಪ್ಪ ಅವರು ತುಂಬ ಮೃದು ಸ್ವಭಾವದವರು. ದಾನಧರ್ಮ ಮಾಡುವುದರಲ್ಲಿ ಅವರ ಮನೆತನದ್ದು ಎತ್ತಿದ ಕೈ. ಅವರ ಚಾಣಾಕ್ಷತೆಯನ್ನು ಸರ್ಕಾರ ಸದ್ವಿನಿಯೋಗ ಮಾಡಿಕೊಳ್ಳಲಿಜಿ.ಜನಾರ್ದನ ರೆಡ್ಡಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.