ADVERTISEMENT

ಉದ್ಯೋಗ ಖಾತರಿ: ಅಪಪ್ರಚಾರಕ್ಕೆ ಕಿವಿಗೊಡದಿರಿ- ಹೇಮಲತಾ ನಾಯಕ್‌

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 7:36 IST
Last Updated 13 ಜನವರಿ 2026, 7:36 IST
<div class="paragraphs"><p>ಹೇಮಲತಾ ನಾಯಕ್‌</p></div>

ಹೇಮಲತಾ ನಾಯಕ್‌

   

ಹೊಸಪೇಟೆ (ವಿಜಯನಗರ): ನರೇಗಾದಲ್ಲಿ ಭಾರಿ ಅವ್ಯವಹಾರ ನಡೆದಿತ್ತು, ಕೂಲಿ ಕೆಲಸ ಮಾಡಿದವರಿಗೆ ಕೂಲಿ ವಂಚಿಸಲಾಗುತ್ತಿತ್ತು. ಇದನ್ನು ತಿಳಿದುಕೊಂಡೇ ಮಹಾತ್ಮ ಗಾಂಧೀಜಿ ಅವರ ರಾಮರಾಜ್ಯದ ಕನಸಿನ ಪ್ರೇರಣೆಯೊಂದಿಗೆ ಜಿ ರಾಮ್‌ ಜಿ ಯೋಜನೆ ಜಾರಿಗೆ ತರಲಾಗಿದೆ, ಈ ವಿಚಾರದಲ್ಲಿ ಮಾಡಲಾಗುತ್ತಿರುವ ಅಪಪ್ರಚಾರಕ್ಕೆ ಜನ ಕಿವಿಗೊಡಬಾರದು ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್‌ ಮನವಿ ಮಾಡಿದರು.

‌ಇಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ನರೇಗಾದಲ್ಲಿ ಮಧ್ಯವರ್ತಿಗಳ ಹಾವಳಿ ವಿಪರೀತವಾಗಿತ್ತು. 4.39 ಲಕ್ಷ ನಕಲಿ ಜಾಬ್‌ಕಾರ್ಡ್‌ ಮಾಡಿಸಿ ₹74 ಸಾವಿರ ಕೋಟಿ ಅವ್ಯವಹಾರ ನಡೆಸಲಾಗಿತ್ತು. ಇದೆಲ್ಲವನ್ನು ತಿಳಿದುಕೊಂಡ ಬಳಿಕವಷ್ಟೇ ಕೇಂದ್ರ ಹೊಸ ರೂಪದಲ್ಲಿ ಯೋಜನೆ ಜಾರಿಗೆ ತಂದಿದೆ, ಮಹಾತ್ಮ ಗಾಂಧಿ ಅವರ ಬಗ್ಗೆ ಪಕ್ಷಕ್ಕೆ ಅಪಾರ ಗೌರವ ಇದೆ, ಅವರ ರಾಮರಾಜ್ಯದ ಕನಸನ್ನು ನನಸು ಮಾಡುವುದೇ ಹೊಸ ಯೋಜನೆಯ ಉದ್ದೇಶ ಎಂದರು.

ADVERTISEMENT

ಉದ್ಯೋಗದ ದಿನ 100ರಿಂದ 125ಕ್ಕೆ ಹೆಚ್ಚಳವಾಗಿದೆ, ಕೂಲಿ ಹಣವನ್ನು ₹350ರಿಂದ ₹380ಕ್ಕೆ ಏರಿಕೆ ಮಾಡಲಾಗಿದೆ. ಎರಡು ವಾರದೊಳಗೆ ನೇರವಾಗಿ ಖಾತೆಗೆ ಹಣ ಸಂದಾಯವಾಗುವ ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಕೂಲಿಕಾರರ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೂ ಹೊಣೆಗಾರಿಕೆ ಇರಲಿ ಎಂಬ ಕಾರಣಕ್ಕೆ ಶೇ60:40 ಅನುದಾನ ಹಂಚಿಕೆಯ ಸೂತ್ರ ಸಿದ್ಧಪಡಿಸಲಾಗಿದೆ, ಇದಾಗಿಯೂ ಕೇಂದ್ರ ಸರ್ಕಾರ ನೀಡುವ ಅನುದಾನವನ್ನು ₹36 ಸಾವಿರ ಕೋಟಿಯಿಂದ ₹2.86 ಲಕ್ಷ ಕೋಟಿಗೆ ಹೆಚ್ಚಿಸಿದ್ದನ್ನು ಮರೆಯಲಾಗದು ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಸಂಜೀವ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಎಸ್. ರಾಘವೇಂದ್ರ, ಜಿಲ್ಲಾ ವಕ್ತಾರ ಅಶೋಕ್ ಜಿರೆ, ಸಹ ವಕ್ತಾರ ಮಧುಸೂದನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.