ಹೊಸಪೇಟೆ (ವಿಜಯನಗರ): ಜನಸಾಮಾನ್ಯರ ರಕ್ಷಣೆಗೆ ಇರುವ ಪ್ರಮುಖ ವ್ಯವಸ್ಥೆ ಎಂದರೆ ನ್ಯಾಯಾಲಯ, ಅದನ್ನು ವ್ಯವಸ್ಥಿತವಾಗಿ ಇಡುವ ಹೊಣೆಗಾರಿಗೆ ಸ್ಥಳೀಯರ ಮೇಲಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿಯೂ ಆಗಿರುವ ಬಳ್ಳಾರಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಆರ್.ನಟರಾಜ್ ಹೇಳಿದರು.
ಜಿಲ್ಲೆ ಉದಯವಾಗಿ ನಾಲ್ಕು ವರ್ಷಗಳ ಬಳಿಕ ಇಲ್ಲಿ ಶನಿವಾರ ನೂತನವಾಗಿ ಆರಂಭವಾಗಿರುವ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.
‘ನಾಗರಿಕರಿಗೆ ಪ್ರಾಮಾಣಿಕ ನ್ಯಾಯ ಸೇವೆ ನೀಡುವ ನಿಟ್ಟಿನಲ್ಲಿ ನ್ಯಾಯಾಲಯಗಳು ಸದಾಕಾಲ ಕಾರ್ಯನಿರ್ವಹಿಸುತ್ತವೆ. ಇನ್ನು ಎರಡು, ಮೂರು ವರ್ಷದೊಳಗೆ ನೂತನ ನ್ಯಾಯಾಲಯ ಸಂಕೀರ್ಣ ಇಲ್ಲಿ ನಿರ್ಮಾಣವಾಗುವ ಸಾಧ್ಯತೆ ಇದ್ದು, ಸರ್ಕಾರ ಇದಕ್ಕೆ ತ್ವರಿತವಾಗಿ ವ್ಯವಸ್ಥೆ ಮಾಡಿಕೊಡಬೇಕು’ ಎಂದರು.
ಗುವಾಹಟಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಶ್ರೀಧರ ರಾವ್ ಹೊಸಪೇಟೆಯಲ್ಲಿ ತಾವು ವಕೀಲಿ ವೃತ್ತಿ ಮಾಡಿದ್ದನ್ನು ನೆನಪು ಮಾಡಿದರು. ಕಿರಿಯ ವಕೀಲರ ಪ್ರಗತಿಗೆ ಹಿರಿಯ ವಕೀಲರು ಸಹಕಾರ ನೀಡಬೇಕು ಎಂದರು.
ಇದಕ್ಕೂ ಮೊದಲು ಹಳೆಯ ತಹಶೀಲ್ದಾರ್ ಕಚೇರಿಯನ್ನು ನವೀಕರಿಸಿ ಸಿದ್ಧಪಡಿಸಲಾದ ನೂತನ ಜಿಲ್ಲಾ ನ್ಯಾಯಾಲಯ ಕಟ್ಟಡವನ್ನು ನ್ಯಾ.ನಟರಾಜ್ ಅವರು ಉದ್ಘಾಟಿಸಿದರು. ನ್ಯಾಯಮೂರ್ತಿ ಅವರ ಪತ್ನಿ ಅರ್ಚನಾ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹಮದ್ ಖಾನ್, ಬಳ್ಳಾರಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಕೆ.ಜಿ.ಶಾಂತಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಇತರರು ಇದ್ದರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ರಾಜ್ಯ ವಕೀಲರ ಪರಿಷತ್ ಸದಸ್ಯರಾದ ಜೆ.ಎಂ.ಅನಿಲ್ ಕುಮಾರ್, ಕೆ.ಕೋಟೇಶ್ವರ ರಾವ್, ವಿಜಯನಗರದ ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಡಿ.ಪಿ.ಕುಮಾರಸ್ವಾಮಿ, ಸಂಸದ ಇ.ತುಕಾರಾಂ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಪ್ರಹ್ಲಾದ್, ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸಮೂರ್ತಿ, ಲೋಕೋಪಯೋಗಿ ಇಲಾಖೆ ಇಇ ಟಿ.ದೇವದಾಸ್ ಇದ್ದರು. ಸನಿಹಾ ಅಪುಲ್ ಅವರ ನೃತ್ಯ ಗಮನ ಸೆಳೆಯಿತು.
371 ಜೆಗೆ ಸಿಎಲ್‌ಎಟಿ ಸೇರಿಸಿ: ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಇ.ತುಕಾರಾಂ, ದೇಶದಲ್ಲಿರುವ 22 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಿಗೆ ಪ್ರವೇಶಕ್ಕಾಗಿ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಕ್ಲಾಟ್) ಎದುರಿಸುವವರಿಗೆ ಸಂವಿಧಾನದ 371 ಜೆ ವಿಧಿಯಡಿಯಲ್ಲಿ ಕಾಯ್ದಿರಿಸುವಿಕೆಗೆ ಅವಕಾಶ ಕಲ್ಪಿಸಬೇಕು, ಈ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ತಿಳಿಸಿದರು.
‘ಕ್ಲಾಟ್’ ರಾಷ್ಟ್ರೀಯ ಮಟ್ಟದ ಸರ್ಕಾರಿ ಪ್ರವೇಶ ಪರೀಕ್ಷೆಯಾಗಿದ್ದು, 371 ಜೆ ವಿಧಿಯಡಿಯಲ್ಲಿ ಕಾಯ್ದಿರಿಸುವಿಕೆಗೆ ಅವಕಾಶ ಕಲ್ಪಿಸದೆ ಇರುವುದರಿಂದ ಈ ಪ್ರದೇಶದಲ್ಲಿ ವಾಸವಾಗಿರುವ ಮತ್ತು ಹುಟ್ಟಿರುವ ವಿದ್ಯಾರ್ಥಿಗಳು ಪ್ರಯೋಜನ ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ ಎಂದರು.
ಜಿಲ್ಲೆಯಾದ್ಯಂತ ಬಂದ ವಕೀಲರಿಂದ ಸನ್ಮಾನ ಸನ್ಮಾನದ ಬದಲು ಸಿಹಿ ಹಂಚಿರಿ ಎಂದ ನ್ಯಾ.ನಟರಾಜ್ ಶಿಷ್ಟಾಚಾರ–ಪರ ವಿರೋಧ ಚರ್ಚೆ ಜೋರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.