ADVERTISEMENT

ಹೊಸಪೇಟೆಯಲ್ಲಿ ಸಮ್ಮೇಳನ ನಡೆಯಲಿ: ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2024, 13:31 IST
Last Updated 23 ಡಿಸೆಂಬರ್ 2024, 13:31 IST
ಮೃತ್ಯುಂಜಯ ರುಮಾಲೆ
ಮೃತ್ಯುಂಜಯ ರುಮಾಲೆ   

ಹೊಸಪೇಟೆ (ವಿಜಯನಗರ): ಮುಂದಿನ ವರ್ಷದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ನಡೆಸುವ ನಿರ್ಧಾರವಾಗಿದ್ದರೂ, ಅಖಂಡ ಬಳ್ಳಾರಿ ಜಿಲ್ಲೆ ಎಂಬ ನೆಲೆಯಲ್ಲಿ ಹೊಸಪೇಟೆಯಲ್ಲಿ ಅದನ್ನು ಆಯೋಜಿಸಬೇಕು ಎಂಬ ಒತ್ತಾಯವನ್ನು ಸ್ಥಳೀಯ ಸಾಹಿತಿಗಳು ಮಾಡಿದ್ದಾರೆ.

‘ಅಖಂಡ ಬಳ್ಳಾರಿ ಜಿಲ್ಲೆಯಿಂದ ವಿಭಜನೆಗೊಂಡು ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಯಾದುದು ಮೂರು ವರ್ಷಗಳ ಹಿಂದೆ. ಆದರೆ ಈಗಲೂ ಎರಡೂ ಜಿಲ್ಲೆಗೆ ಒಬ್ಬರೇ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಿದ್ದಾರೆ. ಹೊಸಪೇಟೆಯಲ್ಲಿ 105 ವರ್ಷಗಳ ಹಿಂದೆ ಅಂದರೆ 1920ರಲ್ಲಿ ಆರನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಿತ್ತು. ಮತ್ತೊಮ್ಮೆ ಇಲ್ಲಿ ಸಮ್ಮೇಳನ ನಡೆದರೆ ಅಖಂಡ ಜಿಲ್ಲೆಗೆ ಮೊದಲ ಬಾರಿಗೆ ಸಮ್ಮೇಳನ ತರಿಸಿದ ಪರಿಷತ್‌ನ ಮೊದಲ ಕಾರ್ಯಕಾರಿ ಸಮಿತಿ ಸದಸ್ಯ ಚಿತ್ತವಾಡಿಗಿ ಹನುಮಂತ ಗೌಡರಿಗೆ ಗೌರವ ಸಲ್ಲಿಸಿದಂತಾಗುತ್ತದೆ’ ಎಂದು ನಗರದ ಹಿರಿಯ ಸಾಹಿತಿ ಮೃತ್ಯುಂಜಯ ರುಮಾಲೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹರಪನಹಳ್ಳಿಯಲ್ಲಿ 1947ರಲ್ಲಿ 30ನೇ ಸಾಹಿತ್ಯ ಸಮ್ಮೇಳನ ನಡೆದಿತ್ತು. ಆ ಬಳಿಕ ಈಗಿನ ವಿಜಯನಗರ ಜಿಲ್ಲೆಯ ಭಾಗದಲ್ಲಿ ಒಂದೇ ಒಂದು ಸಾಹಿತ್ಯ ಸಮ್ಮೇಳನ ನಡೆದಿಲ್ಲ. ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಕನ್ನಡ ಭಾಷೆಯ ಸಂಶೋಧನೆಗೆ ಸ್ಥಾಪಿಸಲಾಗಿರುವ ಏಕೈಕ ವಿಶ್ವವಿದ್ಯಾಲಯ ಇರುವುದು ಸಹ ಹಂಪಿಯಲ್ಲಿ. ಹೊಸಪೇಟೆಯಲ್ಲಿ ಸಮ್ಮೇಳನ ನಡೆಸುವುದಕ್ಕೆ ಎಲ್ಲ ವ್ಯವಸ್ಥೆಯೂ ಇದೆ, ಜನರಿಗೆ ಹೋಗಿ ಬರುವುದಕ್ಕೆ ಸೌಲಭ್ಯವೂ ಇದೆ. ಹೀಗಾಗಿ ಹೊಸಪೇಟೆಯಲ್ಲೇ ಮುಂದಿನ ಸಮ್ಮೇಳನ ನಡೆಸಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

ಒಳಗೊಂಡ ಸಮ್ಮೇಳನ: ‘ಅಖಂಡ ಬಳ್ಳಾರಿ ಜಿಲ್ಲೆಯ ನೆಲೆಯಲ್ಲೇ ಬಳ್ಳಾರಿ ನಗರದಲ್ಲಿ ಮುಂದಿನ ವರ್ಷ ಸಮ್ಮೇಳನ ನಡೆಯಲಿದೆ. ವಿಜಯನಗರ ಜಿಲ್ಲೆ ಹೊಸದಾಗಿ ರಚನೆಯಾಗಿದ್ದರೂ ಅಲ್ಲಿನ ಯಾರ ಮನಸ್ಸಿಗೂ ಬೇಸರ ಆಗದ ರೀತಿಯಲ್ಲಿ, ಅವರನ್ನು  ಒಳಗೊಂಡೇ ಸಮ್ಮೇಳನ ಆಯೋಜಿಸಲಾಗುವುದು’ ಎಂದು ಕಸಾಪ ಅಖಂಡ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ನಿಷ್ಠಿ ರುದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.