ADVERTISEMENT

ಸರ್ಕಾರ ಹಂಪಿ ಕನ್ನಡ ವಿ.ವಿ. ಘನತೆ ಉಳಿಸಲಿ: ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ

ಕುಲಪತಿ ರಮೇಶ ಹೇಳಿಕೆಗೆ ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ ಖಂಡನೆ, ಕ್ಷಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 11:11 IST
Last Updated 1 ಡಿಸೆಂಬರ್ 2021, 11:11 IST
ಮಲ್ಲಿಕಾ ಎಸ್‌. ಘಂಟಿ
ಮಲ್ಲಿಕಾ ಎಸ್‌. ಘಂಟಿ    

ಹೊಸಪೇಟೆ (ವಿಜಯನಗರ): ‘ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ. ರಮೇಶ ವಿರುದ್ಧ ಲಂಚ, ಕಮಿಷನ್‌ ಬೇಡಿಕೆಯಂಥ ಗಂಭೀರ ಸ್ವರೂಪದ ಆರೋಪಗಳಿದ್ದು, ಸರ್ಕಾರ ಅವರ ಅವಧಿಯಲ್ಲಾದ ಎಲ್ಲ ಕೆಲಸಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ನೌಕರರ ಹಿತ ಕಾಪಾಡುವುದರ ಜೊತೆಗೆ ವಿಶ್ವವಿದ್ಯಾಲಯದ ಘನತೆ ಉಳಿಸಬೇಕು’ ಎಂದು ವಿಶ್ರಾಂತ ಕುಲಪತಿ ಮಲ್ಲಿಕಾ ಎಸ್‌. ಘಂಟಿ ಆಗ್ರಹಿಸಿದ್ದಾರೆ.

‘ನನ್ನ ಅವಧಿಯಲ್ಲಿ (2017ರಲ್ಲಿ) ನಿಯಮಬಾಹಿರವಾಗಿ ನೇಮಕಾತಿ ನಡೆಸಲಾಗಿದೆ ಎಂದು ರಮೇಶ ಮಾಡಿರುವ ಆರೋಪವನ್ನು ತಳ್ಳಿ ಹಾಕುತ್ತೇನೆ. ಸರ್ಕಾರದ ಒಪ್ಪಿಗೆ ಪಡೆದು, ಯುಜಿಸಿಯ ನಿಯಮಕ್ಕೆ ತಕ್ಕಂತೆ, ವಿದ್ವಾಂಸರ ಪಾರದರ್ಶಕ ಸಮಿತಿ ಮೂಲಕ ನೇಮಕ ಮಾಡಲಾಗಿದೆ. ಕಳೆದ ಮೂರು ವರ್ಷಗಳಿಂದ ಅವರು ಕುಲಪತಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈಗ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಹೇಳುತ್ತಿರುವುದು ಖಂಡನಾರ್ಹ’ ಎಂದು ಬುಧವಾರ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ನನ್ನ ಅವಧಿಯಲ್ಲಿ ನಿಗದಿಗಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದ್ದರಿಂದ ಸಮಸ್ಯೆ ಉದ್ಭವಿಸಿದೆ. ಸದ್ಯದ ಪರಿಸ್ಥಿತಿಗೆ ಮಲ್ಲಿಕಾ ಘಂಟಿ ಅವರೇ ಕಾರಣ ಎಂದು ರಮೇಶ ಆರೋಪಿಸಿದ್ದಾರೆ. ಅದನ್ನು ನಾನು ಅಲ್ಲಗಳೆಯುತ್ತೇನೆ. ಕಲ್ಯಾಣ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರ ಪ್ರಮಾಣ ಶೇ 10.14ರಷ್ಟಿದೆ. ಗ್ರಾಮೀಣ ಬಡ, ಹಿಂದುಳಿದ ಪರಿಶಿಷ್ಟ ಮಕ್ಕಳಿಗೆ ಉನ್ನತ ಶಿಕ್ಷಣ ದೊರಕಿಸಿಕೊಡಲು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿತ್ತು. ರಮೇಶ ಅವರ ಹೇಳಿಕೆಯು ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕು ಕಸಿದುಕೊಳ್ಳುವ ಹುನ್ನಾರವಾಗಿದೆ. ಇದಕ್ಕಾಗಿ ಅವರು ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದ್ದಾರೆ.

‘2018–19ನೇ ಸಾಲಿನ ₹2.44 ಕೋಟಿ ವಸೂಲಾತಿಗೆ ಲೆಕ್ಕಪತ್ರ ಇಲಾಖೆಯು ಸೂಚಿಸಿದೆ ಎಂದು ರಮೇಶ ಆರೋಪಿಸಿದ್ದಾರೆ. ದೂರಶಿಕ್ಷಣ, ಅಧ್ಯಯನಾಂಗ, ವಿದ್ಯಾರ್ಥಗಳ ಶುಲ್ಕ ಮರುಪಾವತಿ, ಶಿಷ್ಯವೇತನ ಮರುಪಾವತಿಗೆ ಬಳಸಲಾಗಿದೆ. ಇದರಲ್ಲಿ ಅಕ್ರಮ ನಡೆಯಲು ಹೇಗೆ ಸಾಧ್ಯ? ಜವಾಬ್ದಾರಿ ಸ್ಥಾನದಲ್ಲಿರುವವರು ವಿವೇಚನಾರಹಿತವಾಗಿ ಆರೋಪ ಮಾಡಬಾರದು. ಇದು ಅವರಿಗೆ ಶೋಭೆ ತರುವುದಿಲ್ಲ’ ಎಂದು ಕಿಡಿಕಾರಿದ್ದಾರೆ.

‘ನನ್ನ ಅವಧಿಯಲ್ಲಿ ಒಟ್ಟು 160 ಪುಸ್ತಕಗಳನ್ನು ಪ್ರಟಿಸಿದ್ದೇನೆ. ಬೆಳ್ಳಿಹಬ್ಬ ಸೇರಿದಂತೆ 275ಕ್ಕಿಂತ ಹೆಚ್ಚು ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ನನ್ನ ಕಾಲದಲ್ಲಿ ಬಹಳ ದಕ್ಷತೆಯಿಂದ ಕೆಲಸ ನಿರ್ವಹಿಸಿದ್ದೇನೆ. ಆದರೆ, ವಿನಾಕಾರಣ ಗೂಬೆ ಕೂರಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.