ADVERTISEMENT

ಲೋಕಲ್‌ ಬೇಡ, ಬ್ರ್ಯಾಡೆಂಡ್‌ ಟೀ ಪೌಡರ್‌ ತರಿಸಿ: ಆಹಾರ ಇಲಾಖೆ ಅಧಿಕಾರಿ

ಅಂಬೇಡ್ಕರ್‌ ಕಾಲೊನಿಯ ಹಿರಾಳ್‌ ಕೊಲ್ಲಾರಪ್ಪ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 11:38 IST
Last Updated 12 ಅಕ್ಟೋಬರ್ 2022, 11:38 IST
 ಹಿರಾಳ್‌ ಕೊಲ್ಲಾರಪ್ಪ ಅವರ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ
ಹಿರಾಳ್‌ ಕೊಲ್ಲಾರಪ್ಪ ಅವರ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ   

ಹೊಸಪೇಟೆ (ವಿಜಯನಗರ): ‘ಇದು ಲೋಕಲ್‌ ಟೀ ಪೌಡರ್‌. ಇದು ಬಳಸುವುದು ಬೇಡ. ಬ್ರೂಕ್‌ ಬಾಂಡ್‌, ರೆಡ್‌ ಲೆಬಲ್‌, ಕಣ್ಣನ್‌ ದೇವನ್‌ ಯಾವ ಬ್ರ್ಯಾಡೆಂಡ್‌ ಕಂಪನಿಯದ್ದು ಸಿಗುತ್ತೋ ಅದನ್ನು ತರಿಸಿ ಟೀ ಮಾಡಿ. ಲೋಕಲ್‌ ಟೀ ಪೌಡರ್‌ ಸರಿಯಾಗಿದೆಯೋ ಇಲ್ಲವೋ ಅನುಮಾನ ಬರುತ್ತಿದೆ’ ಹೀಗೆಂದು ಹೇಳಿದವರು ಆಹಾರ ಇಲಾಖೆಯ ಅಧಿಕಾರಿಗಳು.

ಹೊಸಪೇಟೆ ತಾಲ್ಲೂಕಿನ ಕಮಲಾಪುರದ ಡಾ.ಬಿ.ಆರ್‌. ಅಂಬೇಡ್ಕರ್‌ ಕಾಲೊನಿಯ ಪರಿಶಿಷ್ಟ ಜಾತಿಯ ಹಿರಾಳ್‌ ಕೊಲ್ಲಾರಪ್ಪ ಅವರ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಬೆಳಿಗ್ಗೆ ಉಪಾಹಾರ ಸೇವನೆಗೆ ಬರುವವರಿದ್ದರು. ಅದಕ್ಕೂ ಮುಂಚೆ ಕೊಲ್ಲಾರಪ್ಪ ಅವರ ಅಡುಗೆ ಮನೆ ಪ್ರವೇಶಿಸಿದ ಅಧಿಕಾರಿಗಳು, ಮಂಡಕ್ಕಿ ಒಗ್ಗರಣೆ, ಉಪ್ಪಿಟ್ಟು, ಮಿರ್ಚಿ ಪರಿಶೀಲಿಸಿದರು. ಟೀ ಪೌಡರ್‌ ನೋಡುತ್ತಿದ್ದಂತೆ ಅನುಮಾನ ವ್ಯಕ್ತಪಡಿಸಿ ಬೇರೊಂದು ತರಿಸಲು ಹೇಳಿದರು. ನಂತರ ‘ರೆಡ್‌ ಲೆಬೆಲ್‌’ ಟೀ ಪೌಡರ್‌ ತರಿಸಿ ಚಹಾ ಮಾಡಲಾಯಿತು.

ಬಸವರಾಜ ಬೊಮ್ಮಾಯಿ, ಶಾಸಕ ಬಿ.ಎಸ್‌. ಯಡಿಯೂರಪ್ಪನವರು ಬಂದು ಒಗ್ಗರಣೆ, ಮಿರ್ಚಿ, ಉಪ್ಪಿಟ್ಟು ಸವಿದರು. ಮೇಜಿನ ಮೇಲೆ ಚಹಾ ತಂದಿಟ್ಟಾಗ ಕೊಲ್ಲಾರಪ್ಪ ಅವರಿಗೆ ಸಿ.ಎಂ. ಚಹಾ ಕೊಟ್ಟು ಅವರೊಂದಿಗೆ ಸವಿದರು. ಕುಟುಂಬ ಸದಸ್ಯರೊಂದಿಗೆ ಮಾತಾಡಿದರು. ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಆನಂದ್ ಸಿಂಗ್, ಶಾಸಕ ರಾಜುಗೌಡ, ಸಂಸದ ವೈ.ದೇವೇಂದ್ರಪ್ಪ ಇದ್ದರು.
ಸಿ.ಎಂ ಬರುವ ಮುಂಚೆ ಕೊಲ್ಲಾರಪ್ಪ ಅವರ ಮನೆಗೆ ಹೊರಗಿನಿಂದಲೂ ಉಪಾಹಾರ ತರಿಸಲಾಗಿತ್ತು. ಆದರೆ, ಕೊಲ್ಲಾರಪ್ಪ ಅವರ ಮಕ್ಕಳಾದ ರೇಣುಕಾ, ಹುಲಿಗೆಮ್ಮ ಹಾಗೂ ಅಂಬಮ್ಮ ಅವರು ಸಿದ್ಧಪಡಿಸಿದ ಉಪಾಹಾರವನ್ನೇ ಸಿ.ಎಂ ಇತರರು ಸವಿದರು. ಇದಕ್ಕೂ ಮುನ್ನ ಅವರು ಈಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.

ADVERTISEMENT

ಪರಿಶಿಷ್ಟರ ಮನೆಯಲ್ಲಿ ಊಟ; ಕೇರಿಯಲ್ಲಿ ಸಿ.ಎಂ. ಸುತ್ತಾಟ
ಹೊಸಪೇಟೆ ತಾಲ್ಲೂಕಿನ ಪರಿಶಿಷ್ಟ ಜಾತಿಯ ಕೊಲ್ಲಾರಪ್ಪ ಮನೆಯಲ್ಲಿ ಉಪಾಹಾರ ಸೇವಿಸಿದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೊಸಪೇಟೆ ನಗರದಲ್ಲಿ ವಾಲ್ಮೀಕಿ ನಾಯಕ ಸಮಾಜದವರೇ ಹೆಚ್ಚಾಗಿರುವ ಏಳು ಕೇರಿಗಳಿಗೆ ಭೇಟಿ ನೀಡಿದರು. ಸ್ಥಳೀಯರು ಅವರ ಮೇಲೆ ಹೂಮಳೆಗರೆದು ಸ್ವಾಗತಿಸಿದರು. ಎಸ್ಸಿ/ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿರುವುದಕ್ಕೆ ಸನ್ಮಾನಿಸಿ, ಜಯಘೋಷ ಹಾಕಿದರು. ಬೊಮ್ಮಾಯಿ ಅವರು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ನಮಿಸಿದರು. ಸಿ.ಎಂ. ಜೊತೆಗೆ ಬಿ.ಎಸ್‌. ಯಡಿಯೂರಪ್ಪ, ಸಚಿವರಾದ ಬಿ. ಶ್ರೀರಾಮುಲು, ಆನಂದ್‌ ಸಿಂಗ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.