ಹೊಸಪೇಟೆ (ವಿಜಯನಗರ): ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ, ಒಂದು ವೇಳೆ ಸಿಎಂ ಬದಲಾವಣೆ ಆಗುವುದಿದ್ದರೆ ದಲಿತರನ್ನೇ ಆ ಸ್ಥಾನಕ್ಕೆ ಪರಿಗಣಿಸಬೇಕು ಎಂಬ ನಿಟ್ಟಿನಲ್ಲಿ ಒತ್ತಡ ತಂತ್ರ ರೂಪಿಸಲು ದಲಿತ ಛಲವಾದಿ ಮಹಾಸಭಾ, ಕರ್ನಾಟಕ (ಡಿಸಿಎಂಎಸ್) ನಿರ್ಧರಿಸಿದೆ.
ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಬಸವರಾಜ್ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ದಾವಣಗೆರೆ ಅಥವಾ ಚಿತ್ರದುರ್ಗದಲ್ಲಿ 5 ಲಕ್ಷಕ್ಕಿಂತ ಹೆಚ್ಚು ದಲಿತ ಸಮುದಾಯದವರನ್ನು ಸೇರಿಸಿ ಜಾಗೃತಿ ಸಮಾವೇಶ ನಡೆಸಲಾಗುವುದು ಎಂದರು.
ದಲಿತರಿಗೆ ಸಿಎಂ ಸ್ಥಾನ ಕೊಡದಿದ್ದಲ್ಲಿ ದಲಿತ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಸರಿಯಾದ ಸಮಯದಲ್ಲಿ ಬುದ್ಧಿ ಕಲಿಸುವುದು ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಡಿಕೆಶಿ ಸಹ ಕೇಳಲಿ: ‘ಸಿಎಂ ಸ್ಥಾನ ನೀಡಬೇಕೆಂದು ಡಿ.ಕೆ.ಶಿವಕುಮಾರ್ ಅವರು ಕೇಳುವುದರಲ್ಲಿ ತಪ್ಪೇನಿಲ್ಲ, ಅವರು ಸಹ ಪಕ್ಷವನ್ನು ಕಟ್ಟಿ ಬೆಳೆಸಿದವರು, ಆದರೆ ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ ಅವರಂತಹ ಹಿರಿಯ ನಾಯಕರು ಪಕ್ಷಕ್ಕೆ ಮಹಾನ್ ಕೊಡುಗೆ ನೀಡಿದ್ದರೂ ಅವರನ್ನು ಸಿಎಂ ಸ್ಥಾನಕ್ಕೆ ಪರಿಗಣಿಸಲಿಲ್ಲ. ನಾವು ಗಟ್ಟಿ ಧ್ವನಿಯಲ್ಲಿ ನಮ್ಮ ಅಹವಾಲು ಸಲ್ಲಿಸದಿದ್ದರೆ ಪಕ್ಷದ ವರಿಷ್ಠರು ನಮಗೆ ಯಾವ ಆಗ್ರಹವೂ ಇಲ್ಲ ಎಂದು ನಮ್ಮನ್ನು ಕಡೆಗಣಿಸುವ ಸಾಧ್ಯತೆ ಇದೆ. ಹೀಗಾಗಿ ಎರಡು ತಿಂಗಳ ಕಾಲ ರಾಜ್ಯಾದ್ಯಂತ ಪ್ರವಾಸ ಮಾಡಿ ದಲಿತ ಸಮುದಾಯಗಳನ್ನು ಜಾಗೃತಿಗೊಳಿಸಲಾಗುವುದು ಮತ್ತು ಸಿಎಂ ಸ್ಥಾನ ಕೊಡಲು ಆಗ್ರಹಿಸಲಾಗುವುದು’ ಎಂದು ಬಸವರಾಜ್ ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಯಸ್ಸಾಯಿತು, ಅವರು ಈಗಾಗಲೇ ಎಐಸಿಸಿ ಅಧ್ಯಕ್ಷರೂ ಆಗಿರುವ ಕಾರಣಕ್ಕೆ ಮತ್ತೆ ಸಿಎಂ ಸ್ಥಾನ ಅವರಿಗೆ ಅಗತ್ಯವಿಲ್ಲ ಎಂದು ಹೇಳಿದ್ದೇ ಆದರೆ ಡಾ.ಜಿ.ಪರಮೇಶ್ವರ ಅವರನ್ನು ಪರಿಗಣಿಸಬೇಕು. ಜತೆಗೆ ಕೆ.ಎಚ್.ಮುನಿಯಪ್ಪ, ಡಾ.ಎಚ್.ಸಿ.ಮಹಾದೇವಪ್ಪ, ಸತೀಶ್ ಜಾರಕಿಹೊಳಿ ಅವರನ್ನೂ ಪರಿಗಣಿಸಬಹುದು. ದಲಿತರು ಪಾರಂಪರಿಕವಾಗಿ ಕಾಂಗ್ರೆಸ್ ಮತದಾರರೇ ಆಗಿದ್ದು, ಸಿಎಂ ಮಾಡುವ ಮೂಲಕ ಅವರ ಋಣವನ್ನು ಪಕ್ಷ ತೀರಿಸಬೇಕು ಎಂದು ಅವರು ಕೇಳಿಕೊಂಡರು.
ಅಲೆಮಾರಿಗಳಿಗೆ ಶೇ 1 ಮೀಸಲಾತಿ ನೀಡಿ: ಒಳಮೀಸಲಾತಿ ಹಂಚಿಕೆ ವಿಷಯದಲ್ಲಿ ಅಲೆಮಾರಿಗಳಿಗೆ ಅನ್ಯಾಯ ಆಗಿರುವುದು ನಿಜ, ಒಳಮೀಸಲಾತಿಯ ಮೂರು ವಿಭಾಗದ ಬದಲಿಗೆ ನಾಲ್ಕು ವಿಭಾಗ ಮಾಡಿ, ಶೇ 1ರಷ್ಟು ಮೀಸಲಾತಿಯನ್ನು ಅಲೆಮಾರಿಗಳಿಗೆ ನೀಡಬೇಕು, ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಶೇ 4ರಷ್ಟು ಮೀಸಲಾತಿ ನೀಡಬೇಕು, ಆಗ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಅವರು ಸಲಹೆ ನೀಡಿದರು.
ಮುಖಂಡರಾದ ನಾರಾಯಣಸ್ವಾಮಿ, ನಿರಂಜನಮೂರ್ತಿ, ಎಂ.ಸಿ.ಓಂಕಾರಪ್ಪ, ಈರಮ್ಮ, ಸಿ.ಡಿ.ವೀರಣ್ಣ, ರಾಮಕೃಷ್ಣ, ರಮೇಶ್ ಛಲವಾದಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.