ಪ್ರಾತಿನಿಧಿಕ ಚಿತ್ರ
ಕೊಟ್ಟೂರು (ವಿಜಯನಗರ ಜಿಲ್ಲೆ): ಪಟ್ಟಣದ ಲಾಲ್ ಬಹಾದ್ದೂರ್ ಶಾಸ್ತ್ರಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ನೆಲಸಿದ್ದ ಯುವಕನೊಬ್ಬ ತನ್ನ ಅಪ್ಪ, ಅಮ್ಮ ಮತ್ತು ತಂಗಿ ನಾಪತ್ತೆಯಾಗಿದ್ದಾರೆ ಎಂದು ಬೆಂಗಳೂರಿನ ತಿಲಕನಗರ ಠಾಣೆಯಲ್ಲಿ ದೂರು ನೀಡಿದ್ದು, ಅವರಿಗಾಗಿ ತೀವ್ರ ಹುಡುಕಾಟ ಆರಂಭವಾಗಿದೆ.
‘ನನ್ನ ತಂದೆ ಭೀಮರಾಜ್ (48), ತಾಯಿ ಜಯಮ್ಮ (44), ತಂಗಿ ಅಮೃತಾ (18) ಅವರು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಹೋದವರು ನಾಪತ್ತೆಯಾಗಿದ್ದಾರೆ’ ಎಂದು ಟೈರ್ ರಿಪೇರಿ ಕೆಲಸ ಮಾಡುವ ಅಕ್ಷಯ ಕುಮಾರ್ ದೂರಿನಲ್ಲಿ ತಿಳಿಸಿದ್ದ. ಆದರೆ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಅಂತಹ ವ್ಯಕ್ತಿಗಳು ಬಂದೇ ಇಲ್ಲ ಎಂದು ಗೊತ್ತಾಗಿತ್ತು. ಹೀಗಾಗಿ ಪೊಲೀಸರು ಇದೀಗ ಯುವಕನನ್ನು ವಿಚಾರಣೆಗೆ ಒಳಪಡಿಸಿದ್ದು, ಕೊಟ್ಟೂರಿನ ಮನೆಯಲ್ಲಿ ಆತನ ಉಪಸ್ಥಿತಿಯಲ್ಲೇ ತಪಾಸಣೆ ಮಾಡಲು ಮುಂದಾಗಿದ್ದಾರೆ.
ಬೆಂಗಳೂರು ಪೊಲೀಸರ ಸೂಚನೆಯ ಮೇರೆಗೆ ವಿಜಯನಗರ ಜಿಲ್ಲಾ ಪೊಲೀಸರು ಕೊಟ್ಟೂರಿನ ಮನೆಯಲ್ಲಿ ತಪಾಸಣೆ ನಡೆಸಿದ್ದು, ಸದ್ಯ ಈ ಮೂವರ ಸುಳಿವು ಸಿಕ್ಕಿಲ್ಲ. ಎಸ್‌ಪಿ ಎಸ್.ಜಾಹ್ನವಿ ಸಹಿತ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಈ ಮೂವರು ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಹಿನ್ನೆಲೆ: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ದೊಡ್ಡಕಿಟ್ಟದಾಳ ಗ್ರಾಮದ ಅಕ್ಷಯ ಕುಮಾರ್ ಜಗಳೂರಿನಲ್ಲಿ ಟೈರ್ ರಿಪೇರಿ ಕೆಲಸ ಮಾಡುತ್ತಿದ್ದ. ಒಂದೂವರೆ ವರ್ಷದ ಹಿಂದೆ ಕೊಟ್ಟೂರಿಗೆ ಬಂದು ಹರಪನಹಳ್ಳಿ ರಸ್ತೆಯಲ್ಲಿ ಟೈರ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದ. ಕಳೆದ ನಾಲ್ಕು ದಿನಗಳಿಂದ ಮನೆಯಲ್ಲಿ ಯಾರ ಓಡಾಟವೂ ಕಾಣಿಸಿರಲಿಲ್ಲ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.