ಹೊಸಪೇಟೆ (ವಿಜಯನಗರ): ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಯೂರಿಯಾ ಗೊಬ್ಬರವನ್ನು ಬೆಳೆ ಸಮಯಕ್ಕೆ ಸರಿಯಾಗಿ ಪೂರೈಸಬೇಕು. ಅಕ್ರಮ ದಾಸ್ತಾನು ದಂಧೆ ನಿಗ್ರಹಿಸಬೇಕು ಎಂಬ ಪ್ರಮುಖ ಬೇಡಿಕೆ ಸಹಿತ ಇತರ ಬೇಡಿಕೆಗಳ ಈಡೇರಿಕಗೆ ಆಗ್ರಹಿಸಿ ಪ್ರಾಂತ ರೈತ ಸಂಘವು ಬುಧವಾರ ಜಿಲ್ಲಾಧಿಕಾರಿ ಅವರಿಗೆ ಇಲ್ಲಿ ಮನವಿ ಸಲ್ಲಿಸಿತು.
ಸಕ್ಕರೆ ಕಾರ್ಖಾನೆಗೆ ಎರಡೇ ತಿಂಗಳಲ್ಲಿ ಅಡಿಗಲ್ಲು ಹಾಕುವುದಾಗಿ ಹುಸಿ ಭರವಸೆ ನೀಡಿ ಜನರಿಗೆ ವಂಚಿಸಿರುವ ಸ್ಥಳೀಯ ಶಾಸಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಾಜೀನಾಮೆ ಸಲ್ಲಿಸಲಿ ಎಂದು ಸಹ ಒತ್ತಾಯಿಸಲಾಯಿತು.
‘ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಕುಳಿತುಕೊಳ್ಳುವ ಬದಲಾಗಿ ಗೊಬ್ಬರ ಮಾರಾಟಗಾರರ ಅಕ್ರಮ ದಾಸ್ತಾನುಗಳನ್ನು ಪರಿಶೀಲಿಸಬೇಕು, ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಕೇಂದ್ರವೂ ತನ್ನ ಧೋರಣಿ ಬದಲಿಸಿ ರೈತರ ನೆರವಿಗೆ ಬರಬೇಕು, ಬೇಡಿಕೆಗೆ ಅನುಗುಣವಾಗಿ ಯೂರಿಯಾ ಗೊಬ್ಬರ ಕೊಡಬೇಕು’ ಎಂದು ಸಂಘದ ಮುಖಂಡ ಎನ್.ಯಲ್ಲಾಲಿಂಗ ಆಗ್ರಹಿಸಿದರು.
ಹಲವಾರು ವರ್ಷಗಳಿಂದ ಜಂಬುನಾಥಹಳ್ಳಿ, ಸಂಕ್ಲಾಪುರ, ಇಂಗಳಗಿ, ರಾಜಾಪುರ ಮತ್ತು ಕಲ್ಲಹಳ್ಳಿ ಗ್ರಾಮಗಳಲ್ಲಿ ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿ, ಅರಣ್ಯ ಭೂಮಿ ಹಾಗೂ ಇನಾಂ ಭೂಮಿಗಳಿಗೆ ರೈತರು ಸಲ್ಲಿಸಿದ ಫಾರಂ 57 ಮತ್ತು ಫಾರಂ 1 ಅರ್ಜಿಗಳನ್ನು ಇತ್ಯರ್ಥಪಡಿಸಬೇಕು ಎಂದು ಸಹ ಅವರು ಆಗ್ರಹಿಸಿದರು.
ಸಕ್ಕರೆ ಕಾರ್ಖಾನೆ ಸರ್ಕಾರ ಸ್ಥಾಪಿಸಲ್ಲ: ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಮಾತನಾಡಿ, ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಯಾರಾದರೂ ಮುಂದೆ ಬಂದರೆ ಅವರಿಗೆ ಸೌಲಭ್ಯ ಒದಗಿಸಲಾಗುವುದು. ಅದರ ಹೊರತಾಗಿ ಸರ್ಕಾರವೇ ಕಾರ್ಖಾನೆ ಸ್ಥಾಪಿಸುವುದಿಲ್ಲ ಎಂದರು. ಭೂ ನ್ಯಾಯಮಂಡಳಿ ರಚನೆಯಾಗಿದೆ, ಅಲ್ಲಿ ಅರ್ಜಿಗಳನ್ನು ಇಟ್ಟು ಇನಾಂ ಭೂಮಿ, ಅರಣ್ಯ ಭೂಮಿ, ಸರ್ಕಾರಿ ಭೂಮಿ ವಿವಾದ ಪರಿಹರಿಸುವುದಾಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.