ಹೊಸಪೇಟೆ (ವಿಜಯನಗರ): ದೇಶದಲ್ಲಿ 29 ಕಾರ್ಮಿಕ ಕಾನೂನುಗಳನ್ನು ನಾಲ್ಕು ಸಂಹಿತೆಗಳಲ್ಲಿ ಅಡಕಗೊಳಿಸಿ ಜಾರಿಗೆ ತರಲು ಹೊರಟಿರುವ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಹಿಂದೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಇದೇ 20ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಸಿಐಟಿಯು ರಾಜ್ಯ ಸಮಿತಿ ಅಧ್ಯಕ್ಷೆ ಎಸ್.ವರಲಕ್ಷ್ಮಿ ಹೇಳಿದರು.
ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಂಸತ್‌ನ ಒಪ್ಪಿಗೆ ಪಡೆದಿರುವ ಕಾರ್ಮಿಕ ಸಂಹಿತೆಯನ್ನು ಕೇಂದ್ರ ಸರ್ಕಾರ ಯಾವುದೇ ಕ್ಷಣದಲ್ಲಿ ಜಾರಿಗೆ ತರುವ ಸಾಧ್ಯತೆ ಇದೆ. ಇದರಿಂದ ಕಾರ್ಮಿಕ ವರ್ಗಕ್ಕೆ ಬಹಳಷ್ಟು ಅನ್ಯಾಯ ಆಗಲಿದೆ. ಕಂಪನಿಗಳನ್ನು ಉದ್ಧರಿಸುವುದೇ ಈ ನೀತಿಯ ಹಿಂದಿರುವ ಸತ್ಯ. ದೇಶದ ಎಲ್ಲ ಕಾರ್ಮಿಕರು ಈ ಹಂತದಲ್ಲೇ ಎಚ್ಚೆತ್ತು ಹೋರಾಟ ನಡೆಸುವ ಅಗತ್ಯ ಎದುರಾಗಿದೆ ಎಂದರು.
ಸರ್ಕಾರದ ಕ್ರಮಗಳಿಂದಾಗಿ ದೇಶದಲ್ಲಿರುವ ಶೇ 70ರಷ್ಟು ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳು ಅನ್ವಯವಾಗದಂತಹ ಸ್ಥಿತಿ ಬರಲಿದೆ. ಕನಿಷ್ಠ ದಿನಗೂಲಿಯನ್ನು ₹187ಕ್ಕೆ ನಿಗದಿಪಡಿಸುವ ಅಪಾಯ ಇದೆ. ಕಾರ್ಖಾನೆಗಳು ಏಕಾಏಕಿ ಮುಚ್ಚುವ ಅಪಾಯ ಇದೆ. ಮುಷ್ಕರ ಮಾಡುವ ಹಕ್ಕನ್ನು ಕಸಿದುಕೊಳ್ಳುವ ಸಾಧ್ಯತೆ ಇದೆ. ಹೆಚ್ಚುವರಿ ಕೆಲಸದ ಅವಧಿಯನ್ನು (ಒ.ಟಿ.) 3 ತಿಂಗಳಿಗೆ 50 ಗಂಟೆ ಬದಲಿಗೆ 125 ಗಂಟೆಗೆ ಹೆಚ್ಚಿಸುವ ನಿರೀಕ್ಷೆ ಇದೆ, ಇದರಿಂದ ನೌಕರರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಇದೆಲ್ಲವನ್ನು ಕಾರ್ಮಿಕರಿಗೆ ಮನವರಿಕೆ ಮಾಡಲು ಯತ್ನಿಸಲಾಗುತ್ತಿದ್ದು, ಸಾರ್ವತ್ರಿಕ ಮುಷ್ಕರದ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ವರಲಕ್ಷ್ಮಿ ತಿಳಿಸಿದರು.
ಈ ಪ್ರಮುಖ ವಿಷಯ ಮಾತ್ರವಲ್ಲದೆ 20ಕ್ಕೂ ಆಧಿಕ ಇತರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸುವುದು ಸಹ ಮುಷ್ಕರದ ಉದ್ದೇಶ. ಈಗಾಗಲೇ ಹಲವು ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದರು.
ಸಿಐಟಿಯು ರಾಜ್ಯ ಸಮಿತಿ ಉಪಾಧ್ಯಕ್ಷ ಆರ್.ಎಸ್.ಬಸವರಾಜ್, ಕಾರ್ಯದರ್ಶಿ ಎಲ್.ಮಂಜುನಾಥ, ಜಿಲ್ಲಾ ಸಂಚಾಲಕಿ ಕೆ.ನಾಗರತ್ನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.