
ಹರಪನಹಳ್ಳಿ: ಜನರ ಜೀವನಾಡಿ ಕೆರೆಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಆದರೆ, ಕೆಲವು ಕೆರೆಗಳು ಚರಂಡಿ ನೀರು ಸಂಗ್ರಹಕಾರ, ಘನತ್ಯಾಜ್ಯ ಎಸೆಯುವ ಕೇಂದ್ರ ಸ್ಥಾನಗಳಾಗಿದ್ದು, ಪುನಶ್ಚೇತನವಿಲ್ಲದೇ ಅಂದಗೆಟ್ಟಿವೆ.
ತಾಲ್ಲೂಕಿನ ಅರಸೀಕೆರೆ ಏಳು ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ಹೋಬಳಿ ಕೇಂದ್ರ. ಇಲ್ಲಿ ಎರಡು ಕೆರೆಗಳಿವೆ. ಸರ್ವೆ ನಂಬರ್ 123ರಲ್ಲಿರುವ ದೊಡ್ಡಕೆರೆಯು 122 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿದೆ. 534 ಚದರ ಕಿ.ಮೀ. ಜಲಾನಯನ ಪ್ರದೇಶ ಹೊಂದಿದ್ದು, ಅಂದಾಜು 9 ಹೆಕ್ಟೇರ್ ಜಲಾವೃತ ಆಗುತ್ತದೆ. 1,200 ಮೀಟರ್ ಉದ್ದದ ಏರಿ, 9.20 ಮೀಟರ್ ಎತ್ತರದ ಏರಿ ಹೊಂದಿದೆ. ಕೆರೆಯ ದಡದಲ್ಲಿ ಐತಿಹಾಸಿಕ ಬಸವೇಶ್ವರ ದೇವಸ್ಥಾನ ಆಕರ್ಷಿಸುತ್ತದೆ.
ದೊಡ್ಡಕೆರೆ ಕೆಳಭಾಗದಲ್ಲಿ ಜನನಿಬಿಡ ಪ್ರದೇಶ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಚಿಕ್ಕಕೆರೆ ಅಂದಾಜು 20 ಎಕರೆ ಹೊಂದಿದೆ. ಹಿಂದೆ ಈ ಕೆರೆ ದನಕರುಗಳಿಗೆ ಕುಡಿಯುವ ನೀರಿಗೆ ಆಶ್ರಯವಾಗಿತ್ತು. ಆದರೆ, ಈಗ ಈ ಕೆರೆಯು ಪ್ಲಾಸ್ಟಿಕ್ ಸೇರಿ ಘನತ್ಯಾಜ್ಯಗಳಿಂದ ಭರ್ತಿಯಾಗಿದೆ. ಕಲುಷಿತ ನೀರಿನ ಮೇಲ್ಭಾಗ ಪಾಚಿ ಗಿಡ ಬೆಳೆದು ನಿಂತಿದೆ. ಮತ್ತೊಂದು ಚಿಕ್ಕಕೆರೆಗೆ ಬಸಾಪುರ, ಪಾವನಪುರ ಸುತ್ತಮುತ್ತಲಿನಿಂದ ಹಳ್ಳದ ಮೂಲಕ ಮಳೆ ನೀರು ಹರಿದುಬರುತ್ತಿದೆ, ಅಷ್ಟೇ ಪ್ರಮಾಣದಲ್ಲಿ ಗ್ರಾಮದ ಚರಂಡಿ ನೀರು ಸಹ ಬಂದು ಸೇರುತ್ತದೆ. ಕೆರೆ ಭರ್ತಿಯಾಗಿ ಕಸವನಹಳ್ಳಿ ಮಾರ್ಗದ ಹಗರಿಹಳ್ಳ ಸೇರುತ್ತದೆ.
ಹರಪನಹಳ್ಳಿ ನಗರದಲ್ಲಿ ಪಾಳೆಗಾರರ ಕಾಲದಲ್ಲಿ ನಿರ್ಮಿಸಿದ ಏಳುಮೆಟ್ಟಿಲುಗಳ ಐತಿಹಾಸಿಕ ಹಿರೆಕೆರೆ 30.20 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿದ್ದು, 1.89 ಹೆಕ್ಟೇರ್ ಜಲಾವೃತ ಪ್ರದೇಶ ಹೊಂದಿದೆ. ಎರಡು ತೂಬುಗಳಿದ್ದು, 960 ಮೀಟರ್ ಉದ್ದದ ಏರಿ, 5.75 ಮೀಟರ್ ಎತ್ತರ ಏರಿ ಹೊಂದಿರುವ ವಿಶಿಷ್ಟ ಕೆರೆ ಇದಾಗಿದೆ.
ಈ ಕೆರೆಗೆ ನಟರಾಜ ಬಡಾವಣೆ ಹೊಂದಿಕೊಂಡಿದೆ. ಕೆರೆಯಲ್ಲಿ ತಿಪ್ಪೆ ಗುಂಡಿಗಳಾಗಿ ಘನತ್ಯಾಜ್ಯದಿಂದ ಕೆರೆಯಲ್ಲಿ ದುರ್ನಾತ ಹರಡಿದೆ. ಕೆಲ ಬಡಾವಣೆಯ ಚರಂಡಿ ನೀರು ಸಹ ಇಲ್ಲಿಗೆ ಬಂದು ಸೇರುತ್ತಿರುವುದು ಜಲಚರಗಳಿಗೆ ಕಂಟಕವಾಗಿದ್ದರೆ, ಬೆಳೆದು ನಿಂತು ಕೆರೆ ಆವರಿಸಿರುವ ಮುಳ್ಳಿನ ಜಾಲಿ ಹಿರೆಕೆರೆಯಲ್ಲಿ ಮೀನು ಸಾಕಣಿಕೆಗೆ ತೊಂದರೆಯಾಗಿದೆ. ಸುತ್ತಮುತ್ತ ವಾಸವಿರುವ ಜನರು ಸೊಳ್ಳೆಗಳ ಕಾಟದಿಂದ ರೋಸಿದ್ದಾರೆ. ಈ ಕೆರೆಯ ಕೆಳಭಾಗದಲ್ಲಿರುವ ಐಯ್ಯನಕೆರೆ 14.70 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿದ್ದು, 1.09 ಹೆಕ್ಟೇರ್ ಜಲಾವೃತ ಪ್ರದೇಶವಿದೆ. 86.01 ಮೀಟರ್ ಉದ್ದದ ಏರಿ, 5.50 ಮೀಟರ್ ಎತ್ತರದ ಏರಿ ಹೊಂದಿರುವ ಕೆರೆಗೆ ನಗರದಿಂದ ಘನತ್ಯಾಜ್ಯ ಹರಿದು ಬರುತ್ತಿದೆ. ಇದಕ್ಕೆ ಹೊಂದಿಕೊಂಡು ಕ್ರೀಡಾಂಗಣ, ಡಾ.ಬಿ.ಆರ್.ಅಂಬೇಡ್ಕರ್ ಭವನಗಳಿವೆ. ಇಲ್ಲಿನ ದುರ್ವಾಸನೆಗೆ ವಾಯು ವಿಹಾರಿಗಳು ಬೇಸರ ವ್ಯಕ್ತಪಡಿಸುವಂತಾಗಿದೆ
ಕೆರೆಯಂಗಳ ಸೇರುವ ಹತ್ತಾರು ಲೋಡ್ ಘನತ್ಯಾಜ್ಯ ಹಾಗಾಗ ದೋಣಿ ಮೂಲಕ ಹೊರ ತೆಗೆದು ಪೌರಕಾರ್ಮಿಕರು ಸ್ವಚ್ಚಗೊಳಿಸುತ್ತಿದ್ದಾರೆ. ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಪುರಸಭೆ ವ್ಯಾಪ್ತಿಗೆ ಹಸ್ತಾಂತರಿಸಿದರೆ ರಕ್ಷಣೆ ಸಾಧ್ಯವಾಗುತ್ತದೆ. ಇನ್ನುಳಿದ ತಾಲ್ಲೂಕಿನ ಕೆರೆಗಳು ಒಂದಿಲ್ಲೊಂದು ಸಮಸ್ಯೆಯಿಂದ ನಲುಗುತ್ತಿವೆ. ಒತ್ತುವರಿ, ಊಳು ತುಂಬಿರುವುದು, ಚರಂಡಿ ನೀರಿನಿಂದ ಆವರಿಸಿರುವ ಕೆರೆಗಳಿದ್ದು, ಅವುಗಳ ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಕೆರೆಯಲ್ಲಿ ಕಸ, ತ್ಯಾಜ್ಯ ವಿಲೇವಾರಿ ಕಸದ ದುರ್ವಾಸನೆಗೆ ಬೇಸತ್ತ ಜನತೆ ಜಲಚರ ಜೀವಿಗಳ ಜೀವಕ್ಕೆ ಕುತ್ತು
ಪ್ರತಿ ಶುಕ್ರವಾರ ಗ್ರಾಮದ ಚಿಕ್ಕಕೆರೆ ದಡದಲ್ಲಿ ದುರ್ವಾಸನೆಯಲ್ಲಿಯೇ ಸಂತೆ ನಡೆಯುತ್ತದೆ. ಕೆರೆ ಸಮೀಪವೇ ಪೊಲೀಸ್ ವಸತಿ ಗೃಹಗಳಿವೆ. ಸುತ್ತಮುತ್ತಲಿನ ಜನರು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜೀವನ ನಡೆಸುತ್ತಿದ್ದಾರೆಹಾದಿಮನಿ ಸಂತೋಷ ಅರಸೀಕೆರೆ
ಹರಪನಹಳ್ಳಿ ಹಿರೆಕೆರೆ ಐಯ್ಯನಕೆರೆಗೆ ಅಪಾಯಕಾರಿ ಘನತ್ಯಾಜ್ಯ ಬಂದು ಸೇರುತ್ತಿದೆ. ಹಿಂದೆ ದನಕರುಗಳಿಗೆ ಕುಡಿಯಲು ಬಳಕೆಗೆ ಯೋಗ್ಯವಾಗಿದ್ದ ಕೆರೆಗಳ ನೀರು ಈಗ ಸಂಪೂರ್ಣ ಕಲುಷಿತಗೊಂಡಿದೆ. ಸರ್ಕಾರ ಕೆರೆಗಳ ಅಭಿವೃದ್ದಿಗೆ ಕಾಳಜಿವಹಿಸಬೇಕುಬೂದಿ ನವೀನ್ ಮಾಜಿ ಸದಸ್ಯರು ಪುರಸಭೆ
ನಗರದ ಹಿರೆಕೆರೆ ಐಯ್ಯನಕೆರೆಗಳ ರಕ್ಷಣೆಗೆ ಡಿಪಿಆರ್ ತಯಾರು ಹಂತದಲ್ಲಿದೆ. ಈಗಾಗಲೇ ಕೆರೆ ಸ್ವಚ್ಚತೆ ಪೌರ ಕಾರ್ಮಿಕರು ನಿರ್ವಹಿಸುತ್ತಿದ್ದಾರೆ. ಕೆರೆಗಳನ್ನು ಪುರಸಭೆ ಸುಪರ್ದಿಗೆ ಕೊಟ್ಟ ಬಳಿಕ ರಕ್ಷಣೆಗೆ ಕ್ರಮ ವಹಿಸುತ್ತೇವೆರೇಣುಕಾ ಎಸ್.ದೇಸಾಯಿ ಮುಖ್ಯಾಧಿಕಾರಿ ಪುರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.