ADVERTISEMENT

ಫಾರಂ–3 ನೀಡದಿದ್ದರೆ ಚುನಾವಣೆ ಬಹಿಷ್ಕಾರ: ಬಡಾವಣೆಗಳ ಒಕ್ಕೂಟ

ನಗರದ ನಾಲ್ಕು ಬಡಾವಣೆಗಳ 20 ಸಾವಿರ ಮತದಾರರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 4:57 IST
Last Updated 24 ಏಪ್ರಿಲ್ 2024, 4:57 IST
ಯು.ಆಂಜನೇಯಲು
ಯು.ಆಂಜನೇಯಲು   

ಹೊಸಪೇಟೆ (ವಿಜಯನಗರ): ‘ನಗರದ ಶಿವಜ್ಯೋತಿ ಬಡಾವಣೆ, ಕಿರಣ್‌ ಕೃಷ್ಣ ಬಡಾವಣೆ, ಶಿಕ್ಷಕರ ಬಡಾವಣೆ, ಸಂಗಮೇಶ್ವರ ಬಡಾವಣೆಗಳಲ್ಲಿ ನಾಲ್ಕು ವರ್ಷಗಳಿಂದ ಫಾರಂ–3 ನೀಡುವುದನ್ನು ತಡೆ ಹಿಡಿಯಲಾಗಿದೆ. ಇದನ್ನು ತಕ್ಷಣ ಸರಿಪಡಿಸದಿದ್ದರೆ ಈ ಬಾರಿಯ ಚುನಾವಣೆ ಬಹಿಷ್ಕರಿಸಲಾಗುವುದು’ ಎಂದು ಬಡಾವಣೆಗಳ ಒಕ್ಕೂಟಗಳು ಎಚ್ಚರಿಸಿವೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಜ್ಯೋತಿ ಬಡಾವಣೆಯ ಅಧ್ಯಕ್ಷ ಯು.ಆಂಜನೇಯಲು, ‘ಫಾರಂ–3 ತಡೆಹಿಡಿಯುವುದರಿಂದ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸ, ಮದುವೆ ಇತ್ಯಾದಿಗಳಿಗೆ ಬ್ಯಾಂಕ್‌ ಸಾಲ ಪಡೆಯಲು ಆಗುತ್ತಿಲ್ಲ. ಈ ನಾಲ್ಕು ಬಡಾವಣೆಗಳಲ್ಲಿ 2,500ಕ್ಕಿಂತ ಅಧಿಕ ನಿವೇಶನಗಳಿದ್ದು, 20 ಸಾವಿರದಷ್ಟು ಮತದಾರರಿದ್ದಾರೆ’ ಎಂದರು.

‘ಬಡಾವಣೆ ನಿವಾಸಿಗಳು ಮತ್ತು ನಿವೇಶನದಾರರು ನಾಲ್ಕು ವರ್ಷಗಳ ಅಭಿವೃದ್ಧಿ ಶುಲ್ಕ ಕಟ್ಟಲು ಸಿದ್ಧರಿದ್ದೇವೆ. 2013ರಿಂದ 2016ರವರೆಗೆ ಹಂಪಿ ಪ್ರಾಧಿಕಾರವು ನಿವೇಶನದಾರರಿಂದ ಶುಲ್ಕ ಕಟ್ಟಿಸಿಕೊಂಡು ಫಾರಂ–3 ಕಟ್ಟಡ ಪರವಾನಗಿ ನೀಡಿದಂತೆ ನಮ್ಮಿಂದ ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡು ಫಾರಂ–3 ನೀಡುವಂತೆ ಮನವಿ ಮಾಡಲಾಗಿದ್ದರೂ ಅಧಿಕಾರಿಗಳು ಇದಕ್ಕೆ ಸ್ಪಂದಿಸುತ್ತಿಲ್ಲ’ ಎಂದರು.

ADVERTISEMENT

‘ಹೊಸಪೇಟೆ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ನಿವೇಶನದಾರರಿಗೆ ಮೋಸ ಮಾಡಲಾಗಿದೆ. ಅಭಿವೃದ್ಧಿ ಕಾಮಗಾರಿ ಆಗಿಲ್ಲ ಎಂಬ ಕಾರಣ ನೀಡಿ ಫಾರಂ–3 ತಡೆಹಿಡಿಯುವುದು ಸಲ್ಲದು. ಅಧಿಕಾರಿಗಳ ಕರ್ತವ್ಯಲೋಪ, ನಿರ್ಲಕ್ಷ್ಯದಿಂದಾಗಿಯೇ ಈ ಸಮಸ್ಯೆ ಎದುರಾಗಿದೆ. ಬಡಾವಣೆಗಳ ಮಾಲೀಕರು ಷರತ್ತು ಉಲ್ಲಂಘಿಸಿದ್ದರೆ ವಸತಿ ವಿನ್ಯಾಸಕ್ಕೆ ನೀಡಿದ ಅನುಮೋದನೆಯನ್ನು ತಡೆ ಹಿಡಿಯವ ಅಧಿಕಾರ ಅಧಿಕಾರಿಗಳಿಗೆ ಇತ್ತು. ಭ್ರಷ್ಟಾಚಾರ ಮತ್ತು ಇತರ ಕಾರಣಗಳಿಂದ 15 ವರ್ಷ ಸುಮ್ಮನಿದ್ದ ಅಧಿಕಾರಿಗಳು ಈಗ ನಾಲ್ಕು ವರ್ಷದಿಂದ ಫಾರಂ–3ಗಾಗಿ ಅಲೆದಾಡಿಸುತ್ತಿರುವುದು ಸರಿಯಲ್ಲ’ ಎಂದು ದೂರಿದರು.

ಕಿರಣ್‌ ಕೃಷ್ಣ ಬಡಾವಣೆಯ ಓಂಕಾರ್‌, ಶಿಕ್ಷಕರ ಬಡಾವಣೆಯ ಎ.ಎಂ.ಬಸವರಾಜ್‌, ಸಂಗಮೇಶ್ವರ ಬಡಾವಣೆಯ ಡಿ.ಆಂಜನೇಯ, ರುದ್ರಪ್ಪ, ಮಹೇಶ್‌, ಲೋಗನಾಥನ್‌, ನಾರಾಯಣ ರಾವ್, ಶಿವಶಂಕರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.