ADVERTISEMENT

ಮುನಿಯಪ್ಪ ಸಿಎಂ ಆದರಷ್ಟೇ ಮಾದಿಗರಿಗೆ ಲಾಭ: ಮಾದಿಗ ದಂಡೋರ ಮೀಸಲು ಹೋರಾಟ ಸಮಿತಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2024, 15:20 IST
Last Updated 7 ಡಿಸೆಂಬರ್ 2024, 15:20 IST
ಬಿ.ನರಸಪ್ಪ
ಬಿ.ನರಸಪ್ಪ   

ಹೊಸಪೇಟೆ (ವಿಜಯನಗರ): ಜನಸಂಖ್ಯೆಗೆ ಅನುಗುಣವಾಗಿ ಮಾದಿಗರಿಗೆ ಒಳಮೀಸಲಾತಿ ಜಾರಿಗೆ ತರಲೇಬೇಕು. ರಾಜ್ಯದ ಕಾಂಗ್ರೆಸ್ ಸರ್ಕಾರ ಕೇವಲ ದಿನ ದೂಡುವ ಮತ್ತು ಕಣ್ಣಿಗೆ ಮಣ್ಣೆರಚುವ ತಂತ್ರ ಮಾಡುತ್ತಿದೆ, ಕೆ.ಎಚ್‌.ಮುನಿಯಪ್ಪ ಮುಖ್ಯಮಂತ್ರಿ ಆದರಷ್ಟೇ ಮಾದಿಗರಿಗೆ ನ್ಯಾಯ ಸಿಗಲು ಸಾಧ್ಯ ಎಂದು ಮಾದಿಗ ದಂಡೋರ ಮೀಸಲು ಹೋರಾಟ ಸಮಿತಿ ತಿಳಿಸಿದೆ.

ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ನರಸಪ್ಪ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳಮೀಸಲಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ತಿಂಗಳ ಬಳಿಕವೂ ರಾಜ್ಯ ಸರ್ಕಾರ ಏನೂ ಮಾತನಾಡುತ್ತಿಲ್ಲ, ಸರ್ಕಾರದ ಧೋರಣೆ ಹೀಗೆಯೇ ಮುಂದುವರಿದರೆ ಸಿದ್ದರಾಮಯ್ಯನವರ ವರುಣಾ ಕ್ಷೇತ್ರದಿಂದಲೇ ಬೆಂಗಳೂರಿಗೆ ಪಾದಯಾತ್ರೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಉಪಚುನಾವಣೆಯ ಹೊಸ್ತಿಲಲ್ಲಿ ಪಕ್ಷಕ್ಕೆ ತೊಂದರೆ  ಆಗಬಾರದು ಎಂಬ ಕಾರಣಕ್ಕೆ ಅಕ್ಟೋಬರ್ 28ರ ಸಂಪುಟ ಸಭೆಯಲ್ಲಿ ನಾಗಮೋಹನ್‌ ದಾಸ್‌ ನೇತೃತ್ವದ ಆಯೋಗ ರಚಿಸುವುದಾಗಿ ತಿಳಿಸಲಾಯಿತು. ಇದು ದಿನ ದೂಡುವ ತಂತ್ರವಷ್ಟೇ. ಕಾಂಗ್ರೆಸ್ ಅವಧಿಯಲ್ಲಿ ಒಳಮೀಸಲಾತಿಯನ್ನು ಉದ್ದೇಶಪೂರ್ವಕವಾಗಿ ತಡೆಹಿಡಿಯುವ ಕೆಲಸ ಆಗುತ್ತಿದೆ ಎಂದು ಅವರು ಆರೋಪಿಸಿದರು.

ADVERTISEMENT

‘ಒಳಮೀಸಲಾತಿಗೆ ಮೊದಲಾಗಿ ಅಡ್ಡಿಯಾಗಿರುವುದೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ಈಚೆಗೆ ನಡೆದ ಉಪಚುನಾವಣೆಯಲ್ಲಿ ಮಾದಿಗರ ಮತ ಬೀಳದ್ದರಿಂದಲೇ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಅಂತರ ಕಡಿಮೆಯಾಗಿದೆ. ಬಿಜೆಪಿಗೆ ಮಾದಿಗರ ಬಗ್ಗೆ ಕಾಳಜಿ ಇದೆ. ಗೋವಿಂದ ಕಾರಜೋಳ ಅವರಿಗೆ ಡಿಸಿಎಂ, ಪಿಡಬ್ಲ್ಯುಡಿ ಇಲಾಖೆ ನೀಡಿದ್ದರಲ್ಲೇ ಪಕ್ಷದ ಕಾಳಜಿ ಗೊತ್ತಾಗುತ್ತದೆ. ಮಾದಿಗ ಸಮುದಾಯದವರ ಭಾವನೆ  ಜತೆಗೆ ಸರ್ಕಾರ ಚೆಲ್ಲಾಟ ಆಡಬಾರದು’ ಎಂದು ಹೇಳಿದರು.

ಸಮಿತಿಯ ರಾಜ್ಯ ವಕ್ತಾರ ಕತ್ತಿ ವೆಂಕಟೇಶ್‌, ಮುಖಂಡರಾದ ವಿಜಯ್‌ ಕುಮಾರ್‌, ಎರ್ರಿಸ್ವಾಮಿ, ಷಣ್ಮುಖಾನಂದ, ಜಗನ್ನಾಥ, ಬಜಾರಿ ಕೃಷ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.