ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಹೊಳಲು ಗ್ರಾಮದಿಂದ ಅಪಹರಣಗೊಂಡಿರುವ ವರ್ತಕ ಮಂಜುನಾಥ ಶೇಜವಾಡಕರ್ ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಇದುವರೆಗೆ ಸಿಕ್ಕಿಲ್ಲದ ಕಾರಣ ಕುಟುಂಬಸ್ಥರು ಆತಂಕಗೊಂಡಿದ್ದಾರೆ.
ಮಂಜುನಾಥ ಅವರನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ, ವಿವಿಧ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದಷ್ಟೇ ಎಸ್‌ಪಿ ಎಸ್.ಜಾಹ್ನವಿ ಮಾಹಿತಿ ನೀಡಿದ್ದು, ಕಾರ್ಯಾಚರಣೆಯ ಮಾಹಿತಿ ನೀಡಲಾಗದು ಎಂದು ಹೇಳಿದ್ದಾರೆ. ಅವರು ಶುಕ್ರವಾರ ರಾತ್ರಿಯಿಂದ ಗ್ರಾಮದಲ್ಲೇ ಮೊಕ್ಕಾಂ ಹೂಡಿದ್ದಾರೆ.
ವಾಟ್ಸ್‌ಆ್ಯಪ್ ಕರೆಯೇ ಆಧಾರ: ಅಪಹರಣಕಾರರ ವಾಟ್ಸ್ಆ್ಯಪ್ ಕರೆ ಆಧರಿಸಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಶುಕ್ರವಾರ ರಾತ್ರಿ ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಅಪಹರಣಕಾರರಿಂದ ಯಾವುದೇ ಕರೆಯೂ ಬಂದಿಲ್ಲ.
ಶುಕ್ರವಾರ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಮಂಜುನಾಥ ಅಪಹರಣವಾಗಿದ್ದರು. ಅವರ ಬಿಡುಗಡೆಗೆ ಅಪಹರಣಕಾರರು ₹5 ಕೋಟಿಗೆ ಬೇಡಿಕೆ ಇರಿಸಿದ್ದರು. ರಾತ್ರಿ 11 ಗಂಟೆಗೆ ಮಂಜುನಾಥ ಅವರ ಅಕ್ಕ ಡಾ. ಮಂಜುಳಾ ಶೇಜವಾಡಕರ್ ಅವರಿಗೆ ಕೊನೆಯದಾಗಿ ವಾಟ್ಸ್ಆ್ಯಪ್ ಕರೆ ಮಾಡಿ ಚೌಕಾಸಿಗೆ ಒಪ್ಪಿದ್ದ ಅಪಹರಣಕಾರರು ₹5 ಲಕ್ಷವನ್ನು ತಾವು ಹೇಳಿದ ಸ್ಥಳಕ್ಕೆ ತಲುಪಿಸುವಂತೆ ತಿಳಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.